ನಾಲ್ಕೈದು ವರ್ಷಗಳ ಹಿಂದೆ `ಗುಲಾಮ' ಕನ್ನಡ ಸಿನಿಮಾ ಚಿತ್ರೀಕರಣ ಬೆಂಗಳೂರಿನ ಮೈಸೂರು ಲ್ಯಾಂಪ್ಸ್‌ನ ಮುಚ್ಚಿದ ಕಾರ್ಖಾನೆಯ ಆವರಣದ ಗೋದಾಮೊಂದರಲ್ಲಿ ನಡೆಯುತ್ತಿತ್ತು. ನಿರ್ದೇಶಕ ರಂಗನಾಥ್ ಒಂದು ಕಡೆ ನಟಿ ಸೋನು ಅವರಿಗೆ ಸೀನ್ ವಿವರಿಸುತ್ತಿದ್ದರು.
ಮಿರಮಿರ ಮಿಂಚುತ್ತಿದ್ದ ವಸ್ತ್ರ ತೊಟ್ಟಿದ್ದ ನಟಿ ಬಿಯಾಂಕಾ ದೇಸಾಯಿ ಕೆಂದುಟಿಯನ್ನು ಆಗೀಗ ಹಲ್ಲಿಗೆ ಸಿಕ್ಕಿಸುತ್ತಿದ್ದರು. ಅದನ್ನು ಕಂಡ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ `ಹಾಗೆ ಮಾಡಕೂಡದು' ಎಂದು ತರಾಟೆಗೆ ತೆಗೆದುಕೊಂಡರು. ಆಗ ಬಿಯಾಂಕಾ ಹೇಳಿದ್ದು: `ತುಟಿ ನೃತ್ಯವನ್ನು ಇನ್ನಷ್ಟು ಸೆಕ್ಸಿ ಆಗಿಸುತ್ತದೆ. ಆಗೀಗ ಹಾಗೆ ಮಾಡಿದರೆ ಎಕ್ಸ್‌ಪ್ರೆಷನ್ ಚೆನ್ನಾಗಿರುತ್ತದೆ'.
ಮೊನ್ನೆ ಮೊನ್ನೆ ನೇಣುಹಾಕಿಕೊಂಡು ನಿಧನರಾದ ಜಿಯಾ ಖಾನ್ ಕೂಡ ಒಂದೊಮ್ಮೆ ಬಿಯಾಂಕಾ ಕೊಟ್ಟಂಥದ್ದೇ `ಸ್ಟೇಟ್‌ಮೆಂಟ್' ಕೊಟ್ಟಿದ್ದರು. ಪರದೇಶದಲ್ಲಿ ಬೆಳೆದು, ಬೇರೆ ಸಂಸ್ಕೃತಿಯ ಬೇರುಗಳ ಮೇಲೆ ನಿಂತ ಮರದ ಫಲಗಳನ್ನು ತಿಂದುಂಡ ಹೆಣ್ಣುಮಕ್ಕಳು ಇಂಥ `ಸ್ಟೇಟ್‌ಮೆಂಟ್' ಕೊಡುವುದು ಅಸಹಜವೇನಲ್ಲ. ಬಿಯಾಂಕಾ ಕೂಡ ಬೇರೆ ದೇಶದಲ್ಲಿ ಬೆಳೆದು, ಸ್ಯಾಂಡಲ್‌ವುಡ್‌ನಲ್ಲಿ ಬೆಲ್ಲಿ ಡಾನ್ಸ್ ಮಾಡಿದವರು. ಜಿಯಾ ಹುಟ್ಟಿದ್ದೇ ನ್ಯೂಯಾರ್ಕ್‌ನಲ್ಲಿ.
ಭಾರತೀಯ ಅಮೆರಿಕನ್ ಅಲಿ ರಿಜ್ವಿ ಖಾನ್ ಅವರ ಮಗಳು ಜಿಯಾ. ತಾಯಿ ರಬಿಯಾ ಅಮೀಮ್ 1980ರ ದಶಕದಲ್ಲಿ ಬಾಲಿವುಡ್ ಚಿತ್ರಗಳಿಗೆ ಬಣ್ಣ ಹಚ್ಚಿದವರು. `ದುಲ್ಹಾ ಬಿಕ್ತಾ ಹೈ' ಎಂಬ ಹಿಂದಿ ಚಿತ್ರದ ಮೂಲಕ ಅವರನ್ನು ಪ್ರೇಕ್ಷಕರು ಗುರುತಿಸುತ್ತಾರೆ. ಆಗ್ರಾ ಮೂಲದ ರಬಿಯಾ ತಮ್ಮ ಮಗಳಿಗೆ ತುತ್ತಿನ ಜೊತೆ ಬಣ್ಣದ ಜಗತ್ತಿನ ಕುರಿತು ತಮಗೆ ಇದ್ದ ಮೋಹವನ್ನೂ ಉಣ್ಣಿಸಿದ್ದರು. `ರಂಗೀಲಾ' ಸಿನಿಮಾ ತೆರೆಕಂಡಾಗ ಜಿಯಾಗೆ ಆರು ವರ್ಷವಾಗಿತ್ತಷ್ಟೆ. ಆ ಸಿನಿಮಾ ನೋಡಿ ಬಾಲಿವುಡ್ ಮೋಹಿಯಾದ ಹುಡುಗಿ ಆಮೇಲೆ ಅದೇ `ರಂಗೀಲಾ' ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಆ್ಯಕ್ಷನ್- ಕಟ್ ಹೇಳಿದ ಚಿತ್ರದ ಮೂಲಕವೇ ಅಭಿನಯಲೋಕಕ್ಕೆ ಕಾಲಿಟ್ಟದ್ದು!
`ನಿಶ್ಶಬ್ದ್' (2007) ಹಿಂದಿ ಚಿತ್ರದಲ್ಲಿ ಬಣ್ಣ ಹಚ್ಚುವ ಅವಕಾಶ ಜಿಯಾಗೆ ಸುಮ್ಮನೆ ಸಿಗಲಿಲ್ಲ. ರಾಮ್‌ಗೋಪಾಲ್ ವರ್ಮಾ ಹಲವು ಸುತ್ತುಗಳ ಸ್ಕ್ರೀನ್ ಟೆಸ್ಟ್ ಮಾಡಿಯೇ ಅವರನ್ನು ಪಾತ್ರಕ್ಕೆ ಆಯ್ಕೆ ಮಾಡಿಕೊಂಡದ್ದು. ಸಂಕೀರ್ಣ ಭಾವಗಳನ್ನು ಬೇಡುವ ಪಾತ್ರದಲ್ಲಿ ಹತ್ತೊಂಬತ್ತು ವಯಸ್ಸಿನ ಹುಡುಗಿ ಅಷ್ಟು ತೀವ್ರವಾಗಿ ಅಭಿನಯಿಸಿದ್ದನ್ನು ನೋಡಿ ಸಹನಟ ಅಮಿತಾಭ್ ಬಚ್ಚನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಹಾಗೆ ನೋಡಿದರೆ ಜಿಯಾ `ದಿಲ್ ಸೆ' (1998) ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು. ಅದು ಮಣಿರತ್ನಂ ನಿರ್ದೇಶನದ ಚಿತ್ರ. ಮೊನಿಷಾ ಕೊಯಿರಾಲಾ ಬಾಲಕಿಯಾಗಿದ್ದಾಗಿನ ಪಾತ್ರವನ್ನು ಜಿಯಾ ಆ ಚಿತ್ರದಲ್ಲಿ ಅಭಿನಯಿಸಿದ್ದರು. ಆಗ ಅವರಿಗಿನ್ನೂ ಹತ್ತು ವರ್ಷ.
ಜಿಯಾ ಖಾನ್ ಬಹುಮುಖ ಪ್ರತಿಭೆ. ತರಬೇತುಗೊಂಡ ಒಪೆರಾ ಗಾಯಕಿಯಾಗಿದ್ದ ಅವರು ಆರು ಪಾಪ್ ಗೀತೆಗಳನ್ನು ಹಾಡಿ, ಧ್ವನಿಮುದ್ರಿಸಿದ್ದರು. ಸ್ನೇಹಿತರ ಸಹಾಯದಿಂದ ಒಂದು ಪರಿಪೂರ್ಣ ಮ್ಯೂಸಿಕ್ ಆಲ್ಬಂ ತರುವ ಕನಸೂ ಅವರಿಗಿತ್ತು. ಖುದ್ದು ಹಾಡುಗಳನ್ನು ಬರೆಯುತ್ತಿದ್ದ ಅವರಿಗೆ ಬ್ರಿಟ್ನಿ ಸ್ಪಿಯರ್ಸ್, ಮಡೋನಾ ತರಹದ ಪಾಪ್ ಗಾಯಕಿಯರು ಇಷ್ಟವಾಗಿದ್ದರು. ರೆಗೆ, ಬೆಲ್ಲಿ, ಲಾಂಬಾಡಾ, ಸಾಲ್ಸಾ, ಕಥಕ್, ಸಾಂಬಾ ಎಲ್ಲಾ ನೃತ್ಯ ಪ್ರಕಾರಗಳ ಪಾಠಗಳನ್ನು ಕಲಿತ ಮೇಲಷ್ಟೇ ಜಿಯಾ ಅಭಿನಯಲೋಕದತ್ತ ಮುಖ ಮಾಡಿದ್ದು. ಅಷ್ಟೆಲ್ಲಾ ಪ್ರತಿಭೆ ಇದ್ದುದರಿಂದಲೋ ಏನೋ ಅವರು ತುಂಬಾ ನಿಷ್ಠುರವಾಗಿ ಮಾತನಾಡುತ್ತಿದ್ದರು. ಮುಕೇಶ್ ಭಟ್ ನಿರ್ದೇಶನದ `ತುಮ್ಸಾ ನಹೀ ದೇಖ' ಚಿತ್ರಕ್ಕೆ ಅವರು ಆಯ್ಕೆಯಾಗಿದ್ದರು. ಪಾತ್ರದ ಜಾಯಮಾನವನ್ನು ಅರಿತ ಮೇಲೆ ಅದು ತಮ್ಮ ವಯಸ್ಸಿಗೆ ಮೀರಿದ್ದು ಎಂದು ಹೇಳಿ ನಿರ್ದಾಕ್ಷಿಣ್ಯವಾಗಿ ಹೊರಬಂದಿದ್ದರು. ಹದಿನೈದು, ಹದಿನಾರು ವಯಸ್ಸಿನಲ್ಲಿ ಇಷ್ಟೆಲ್ಲಾ ಮಾಡಿದ್ದ ಹುಡುಗಿ ಜಿಯಾ ಆತ್ಮಹತ್ಯೆ ಮಾಡಿಕೊಂಡಾಗ ಅಮಿತಾಭ್ ಬಚ್ಚನ್ `ನಂಬಲು ಸಾಧ್ಯವೇ ಇಲ್ಲ' ಎಂದದ್ದರಲ್ಲಿ ಅರ್ಥವಿದೆ.
ಎ.ಆರ್. ಮುರುಗದಾಸ್ ಹಿಂದಿಯಲ್ಲಿ `ಗಜಿನಿ' (2008) ರೀಮೇಕ್ ಮಾಡಿದಾಗ ಅದರಲ್ಲಿ ಮುಖ್ಯ ಪಾತ್ರ ಜಿಯಾಗೆ ಸಿಕ್ಕಿತು. ಆಮೇಲೆ ಸಾಜಿದ್ ಖಾನ್ ನಿರ್ದೇಶನದ `ಹೌಸ್ ಫುಲ್'ನಲ್ಲಿ (2010) ಅಭಿನಯಿಸಿದರು.
ಕೆನ್ ಘೋಷ್ `ಚಾನ್ಸ್ ಪೆ ಡಾನ್ಸ್' ಎಂಬ ಚಿತ್ರದಲ್ಲಿ ಅವಕಾಶವನ್ನೇನೋ ಕೊಟ್ಟರು. ಹಲವು ದಿನಗಳ ಚಿತ್ರೀಕರಣ ಕೂಡ ನಡೆಯಿತು. ಚಿತ್ರದ ನಾಯಕ ಶಾಹಿದ್ ಕಪೂರ್ ಜೊತೆ ಅನಗತ್ಯವಾಗಿ ಸಲಿಗೆಯಿಂದ ವರ್ತಿಸಿದರು ಎಂಬ ಕಾರಣಕ್ಕೆ ಜಿಯಾಗೆ ಆ ಚಿತ್ರದಿಂದ ಯುಟಿವಿ ನಿರ್ಮಾಣ ಸಂಸ್ಥೆ ಕೊಕ್ ನೀಡಿ, ಅವರ ಪಾತ್ರವನ್ನು ಜೆನಿಲಿಯಾ ಡಿಸೋಜಾಗೆ ಕೊಟ್ಟಿತು.
ಆದಿತ್ಯಾ ಪಂಚೋಲಿ ಮಗ ಸೂರಜ್ ಜೊತೆಗೆ ತಮಗೆ ಸ್ನೇಹ, ಸಲಿಗೆ ಇದ್ದುದನ್ನು ಒಪ್ಪಿಕೊಂಡಿದ್ದ ಜಿಯಾ ಮನೋಲೋಕದಲ್ಲಿ ಭಾವತೀವ್ರತೆ ಇದ್ದಂತೆ ಖಿನ್ನತೆಗೂ ದೊಡ್ಡ ಜಾಗವಿತ್ತೇನೋ? `ನಿಶ್ಶಬ್ದ್' ಚಿತ್ರದ ಅಭಿನಯಕ್ಕೆ `ಫಿಲ್ಮ್‌ಫೇರ್ ಶ್ರೇಷ್ಠ ಹೊಸಮುಖ' ಪ್ರಶಸ್ತಿ ಪಡೆದಿದ್ದ ಅವರು ಕೆಲವು ದಿನಗಳ ಹಿಂದಷ್ಟೇ ಹೈದರಾಬಾದ್‌ನಲ್ಲಿ ದಕ್ಷಿಣ ಭಾರತದ ಚಿತ್ರವೊಂದರ ಅಭಿನಯದ ಆಯ್ಕೆಗೆಂದು ಆಡಿಷನ್‌ಗೆ ಹೋಗಿ ಬಂದಿದ್ದರು.
ನಫೀಸಾ ಖಾನ್ ಅವರ ಮೂಲ ಹೆಸರು. ನಾಯಕಿ ಆದಾಗ ಜಿಯಾ ಖಾನ್ ಎಂದು ಬದಲಿಸಿಕೊಂಡರು. ಅದರಿಂದ ಹೆಚ್ಚೇನೂ ಬರಕತ್ತಾಗದ ನಂತರ ಮತ್ತೆ ಮೂಲ ಹೆಸರಿಗೇ ಮರಳಿದರು.ಆದರೂ ಅವರು ಜನಮಾನಸದಲ್ಲಿ ಉಳಿದದ್ದು ಜಿಯಾ ಖಾನ್ ಆಗಿಯೇ. `ನಾನು ಕವಯಿತ್ರಿ. ನನ್ನ ಬದುಕಿನ ಸಾಲುಗಳನ್ನು ನಾನೇ ಬರೆಯಬಲ್ಲೆ' ಎಂದು ಅವರು 2008ರಲ್ಲಿ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ನಿಜ, ಅವರು ತಮ್ಮ ಬದುಕಿನ ಅಂತ್ಯವನ್ನೂ ಬರೆದುಕೊಂಡುಬಿಟ್ಟರು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.