ADVERTISEMENT

‘ಕಸಾವ್‌’ ಶ್ರೇಷ್ಠ ಚಿತ್ರ: ಅಕ್ಷಯ್‌, ಸುರಭಿ ಅತ್ಯುತ್ತಮ ನಟ, ನಟಿ

ಕನ್ನಡದ ‘ರಿಸರ್ವೇಶನ್‌’ಗೆ ಪ್ರಾದೇಶಿಕ ಸಿನಿಮಾ ಪ್ರಶಸ್ತಿ

ಪಿಟಿಐ
Published 7 ಏಪ್ರಿಲ್ 2017, 19:50 IST
Last Updated 7 ಏಪ್ರಿಲ್ 2017, 19:50 IST
‘ಕಸಾವ್‌’ ಶ್ರೇಷ್ಠ ಚಿತ್ರ: ಅಕ್ಷಯ್‌, ಸುರಭಿ ಅತ್ಯುತ್ತಮ ನಟ, ನಟಿ
‘ಕಸಾವ್‌’ ಶ್ರೇಷ್ಠ ಚಿತ್ರ: ಅಕ್ಷಯ್‌, ಸುರಭಿ ಅತ್ಯುತ್ತಮ ನಟ, ನಟಿ   

ನವದೆಹಲಿ: 64ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದ್ದು, ಮರಾಠಿಯ ‘ಕಸಾವ್‌’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಹಿಂದಿಯ ‘ರುಸ್ತುಂ’ ಚಿತ್ರದ ಅಭಿನಯಕ್ಕಾಗಿ ಅಕ್ಷಯ್‌ ಕುಮಾರ್‌ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರೆ, ಮಲಯಾಳಂನ ಸುರಭಿ ‘ಮಿನ್ನಾಮಿನುಂಗು’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ನಿಖಿಲ್‌ ಮಂಜೂ ನಿರ್ದೇಶನದ ‘ರಿಸರ್ವೇಶನ್‌’, ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಚೇತನ್‌ ಮುಂಡಾಡಿ ನಿರ್ದೇಶನದ ‘ಮದಿಪು’ ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

ADVERTISEMENT

‘ಅಲ್ಲಮ’ ಚಿತ್ರಕ್ಕೆ ಸಂಗೀತ ನೀಡಿದ ಬಾಬು ಪದ್ಮನಾಭ ಅವರಿಗೆ ‘ಅತ್ಯುತ್ತಮ ಹಿನ್ನೆಲೆ ಸಂಗೀತ ನಿರ್ದೇಶನ’ ಪ್ರಶಸ್ತಿ ಬಂದಿದೆ.  ಇದೇ ಚಿತ್ರಕ್ಕಾಗಿ ಎಂ.ಕೆ. ರಾಮಕೃಷ್ಣ ಅತ್ಯುತ್ತಮ ಪ್ರಸಾಧನ (ಮೇಕಪ್) ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಪೃಥ್ವಿ ಕೊಣನೂರು ನಿರ್ದೇಶನದ ‘ರೈಲ್ವೆ ಚಿಲ್ಡ್ರನ್‌’ ಚಿತ್ರದ ನಟನೆಗಾಗಿ ಮಾಸ್ಟರ್‌ ಮನೋಹರ್‌ ಕೆ. ‘ಅತ್ಯುತ್ತಮ ಬಾಲನಟ’ ಪ್ರಶಸ್ತಿಯನ್ನು ಇನ್ನಿಬ್ಬರೊಂದಿಗೆ ಹಂಚಿಕೊಂಡಿದ್ದಾರೆ.

ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಮನೋಜ್‌ ಜೋಶಿ (ದಶಕ್ರಿಯಾ: ಮರಾಠಿ) ಅವರ ಪಾಲಾದರೆ, ಪೋಷಕ ನಟಿ ಪ್ರಶಸ್ತಿ ಜಯಿರಾ ವಾಸಿಂ (ದಂಗಲ್‌: ಹಿಂದಿ) ಅವರಿಗೆ ದೊರೆತಿದೆ.

ಪ್ರಾದೇಶಿಕ ಭಾಷೆಗಳಾದ ಮಲಯಾಳಂ, ಮರಾಠಿ ಸಿನಿಮಾಗಳು ಬಹುಪಾಲು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ನಲ್ವತ್ತು ವರ್ಷಗಳ ಅನುಭವ
ಪ್ರಶಸ್ತಿ ಬರುತ್ತದೆ ಎಂಬ ನಿರೀಕ್ಷೆಯಲ್ಲ, ಪ್ರಶಸ್ತಿಯ ಕಣದಲ್ಲಿ ನಮ್ಮ ಸಿನಿಮಾ ಇದೆ ಎಂಬುದೂ ತಿಳಿದಿರಲಿಲ್ಲ. 40 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನೂರಕ್ಕೂ ಹೆಚ್ಚು ಕಲಾತ್ಮಕ ಸಿನಿಮಾಗಳಿಗೆ ಪ್ರಸಾಧನ ಕೆಲಸ ಮಾಡಿದ್ದೇನೆ. ನಾನು ಕೆಲಸ ಮಾಡಿದ ಸಿನಿಮಾಗಳಿಗೆ ಪ್ರಶಸ್ತಿ ಬಂದಾಗ ಖುಷಿ ಪಡುತ್ತಿದ್ದೆ. ಈಗ ನನಗೇ ಪ್ರಶಸ್ತಿ ಬಂದಿದೆ. ಅವಕಾಶ ನೀಡಿದ್ದಕ್ಕಾಗಿ ‘ಅಲ್ಲಮ’ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
–ಎಂ.ಕೆ. ರಾಮಕೃಷ್ಣ, 
‘ಅಲ್ಲಮ’ ಸಿನಿಮಾ ಪ್ರಸಾಧನ (ಮೇಕಪ್‌) ಕಲಾವಿದ

* ‘ರುಸ್ತುಂ’ ವಿಶೇಷ ಪಾತ್ರವಾಗಿತ್ತು. ಪಾತ್ರಕ್ಕಾಗಿಯಾದರೂ ಭಾರತೀಯ ನೌಕಾಪಡೆಯ ಸಮವಸ್ತ್ರ ಧರಿಸುವ ಅವಕಾಶ ಸಿಕ್ಕಿದ್ದು ಬಹುದೊಡ್ಡ ಗೌರವ

-ಅಕ್ಷಯ್‌ ಕುಮಾರ್‌

* ಈ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ತೀರ್ಪುಗಾರರ ಮನ್ನಣೆ ಸಿಗಬಹುದು ಎಂದಷ್ಟೇ ನಿರೀಕ್ಷಿಸಿದ್ದೆ. ಸುದ್ದಿ ಕೇಳಿ ಅಚ್ಚರಿಯಾಯಿತು
-ಸುರಭಿ

ಪ್ರಶಸ್ತಿ ವಿಜೇತರ ಪ್ರತಿಕ್ರಿಯೆಗಳು

‘ಮೊದಲ ರಾಷ್ಟ್ರಪ್ರಶಸ್ತಿಯ ಖುಷಿ’
ಇದು ನನ್ನ ಸಿನಿಮಾಕ್ಕೆ ಸಿಕ್ಕಿರುವ ಮೊದಲ ರಾಷ್ಟ್ರಪ್ರಶಸ್ತಿ. ತುಂಬಾ ಖುಷಿಯಲ್ಲಿದ್ದೇನೆ. ‘ರಿಸರ್ವೇಶನ್‌’ ಇದು ಮೀಸಲಾತಿಯ ಕುರಿತಾದ ಚಿತ್ರ. ಆ ವಿಷಯದ ಪರ ಅಥವಾ ವಿರೋಧ ಯಾವುದೋ ಒಂದು ನೆಲೆಯಲ್ಲಿ ನಿಂತುಕೊಳ್ಳದೇ ‘ಮೀಸಲಾತಿ’ಯ ಪರೋಕ್ಷ ಪರಿಣಾಮಗಳನ್ನು ವಿಶ್ಲೇಷಿಸುವ ಪ್ರಯತ್ನ ಈ ಸಿನಿಮಾದಲ್ಲಿದೆ’.
-ನಿಖಿಲ್‌ ಮಂಜೂ, ನಿರ್ದೇಶಕ

‘ಕನ್ನಡದ ಹೆಮ್ಮೆ’
ಇಡೀ ದೇಶದ ನಾನೂರು–ಐನೂರು ಸಿನಿಮಾಗಳ ಮಧ್ಯದಲ್ಲಿ ನಮ್ಮ ‘ಅಲ್ಲಮ’ ಸಿನಿಮಾಕ್ಕೆ ಮೂರು ಪ್ರಶಸ್ತಿಗಳು ಬಂದಿರುವುದು ಕನ್ನಡದ ಹೆಮ್ಮೆ.  ಇದರ ಜತೆಗೆ ನಾನು ಇನ್ನೂ ಒಂದೆರಡು ವಿಭಾಗಗಳಲ್ಲಿ ಪ್ರಶಸ್ತಿ ಬರಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆ. ವಸ್ತ್ರ ವಿನ್ಯಾಸ ಮತ್ತು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಸಿಗಬಹುದು ಎಂಬ ನಿರೀಕ್ಷೆ ಇತ್ತು.  ಇಂಥದ್ದೊಂದು ವಸ್ತುವನ್ನು ನಿರ್ವಹಿಸುವುದೇ ದೊಡ್ಡ ಸವಾಲು. ‘ಅಲ್ಲಮ’ದಂಥ ಸಿನಿಮಾಗಳು ನಮ್ಮ ಕಾಲದ ತುರ್ತು ಅಗತ್ಯವೂ ಹೌದು.  ಇಂಥ ಪ್ರಯತ್ನದ ಹಿಂದಿನ ಪರಿಶ್ರಮವನ್ನು ರಾಷ್ಟ್ರಮಟ್ಟದಲ್ಲಿ ಗುರ್ತಿಸುವ ಅಗತ್ಯ ಇತ್ತು.
-ನಾಗಾಭರಣ, ’ಅಲ್ಲಮ’ ಸಿನಿಮಾ ನಿರ್ದೇಶಕ

‘ಕಲಾವಿದರು, ತಂತ್ರಜ್ಞರ ಶ್ರಮದ ಫಲ’
ಈ ಯಶಸ್ಸಿನ ಶ್ರೇಯ ಕಲಾವಿದರು ಮತ್ತು ತಂತ್ರಜ್ಞರಿಗೆ ಸಲ್ಲಬೇಕು. ನನಗೆ ಮತ್ತು ಛಾಯಾಗ್ರಾಹಕ ಗಣೇಶ ಹೆಗಡೆ ಇಬ್ಬರಿಗೂ ಇದು ಮೊದಲ ಸಿನಿಮಾ. ‘ಮದಿಪು’ ಸಿನಿಮಾ ಜಾತಿ, ಧರ್ಮಗಳಿಗಿಂತ ಮನುಷ್ಯನ ನಂಬಿಕೆ ಮುಖ್ಯ ಎಂಬುದನ್ನು ಈ ಸಿನಿಮಾದಲ್ಲಿ ಹೇಳಹೊರಟಿದ್ದೇವೆ. ದೈವಕೋಲ ಕಟ್ಟುವ ಜನಾಂಗದಲ್ಲಿ ಬೆಳೆದ ಹುಡುಗನೊಬ್ಬನನ್ನು ಅವನ ತಾಯಿ ಹುಡುಕಿಕೊಂಡು ಬರುವ ಕಥೆ ಈ ಸಿನಿಮಾದ್ದು.
-ಚೇತನ್‌ ಮುಂಡಾಡಿ, ‘ಮದಿಪು’ ಸಿನಿಮಾದ ನಿರ್ದೇಶಕ

‘ಪೊಲೀಸ್‌ ಆಗ್ತೀನಿ’
ಇದು ನನ್ನ ಮೊದಲ ಸಿನಿಮಾ. ಈ ಸಿನಿಮಾ ಮಾಡುವಾಗ ನಾನು ಎಂಟನೇ ತರಗತಿಯಲ್ಲಿ ಓದ್ತಿದ್ದೆ. ಈಗ ಒಂಬತ್ತನೇ ತರಗತಿ ಪಾಸಾಗಿದ್ದೇನೆ.

ಅವಾರ್ಡು ಬರ್ತದೆ ಅಂತೆಲ್ಲಾ ನಾನು ಅಂದುಕೊಂಡೇ ಇರ್ಲಿಲ್ಲ. ಆದರೆ ನಮ್ಮ ಸಿನಿಮಾ ನಿರ್ದೇಶಕ ಪೃಥ್ವಿ ಕೊಣನೂರು ಅವರು ಯಾವಾಗಲೂ ನಿಂಗೆ ಈ ಸಲ ಪ್ರಶಸ್ತಿ ಬರ್ತದೆ ನೋಡ್ತಿರು ಎಂದು ಹೇಳ್ತಾನೇ ಇದ್ರು. ಆಗೆಲ್ಲ ಬಂದ್ರೂ ಬರಬಹುದೇನೋ ಅಂತ ಒಳಗೊಳಗೇ ಆಸೆ ಆಗ್ತಿತ್ತು.

ಈ ಸಿನಿಮಾದಲ್ಲಿ ನಾನು ಮಾಡಿರುವ ಪಾತ್ರವನ್ನು ಬೇರೊಬ್ಬರು ಮಾಡಬೇಕಾಗಿತ್ತು. ಅವರು ಬರದೇ ಹೋಗಿದ್ದರಿಂದ ನಾನು ಮಾಡಬೇಕಾಯ್ತು. ಈಗ ನೋಡಿದರೆ ಅದಕ್ಕೇ ಪ್ರಶಸ್ತಿ ಬಂದಿದೆ. ಮುಂದೆ ಪೊಲೀಸ್‌ ಆಗಬೇಕು ಅಂದುಕೊಂಡಿದೀನಿ. ಹಾಗಂತ ನಟನೆ ಬಿಡುವುದಿಲ್ಲ.  ಕೆಲಸ ಮಾಡುತ್ತಲೇ ನಟನೆಯನ್ನೂ ಮಾಡ್ತೀನಿ.
-ಮನೋಹರ್‌ ಕೆ.,  ಅತ್ಯುತ್ತಮ ಬಾಲನಟ (‘ರೈಲ್ವೆ ಚಿಲ್ಡ್ರನ್’ ಸಿನಿಮಾ)

‘ಇನ್ನಷ್ಟು ಪ್ರಯತ್ನಗಳಿಗೆ ಸ್ಫೂರ್ತಿಯಾಗಲಿ’
ನನ್ನ ಕೆಲಸ ಗಮನಿಸಿ ಎರಡು ಪ್ರಶಸ್ತಿಗಳನ್ನು ನೀಡಿರುವುದು  ಸಂತಸದ ವಿಷಯ. ‘ಅಲ್ಲಮ’ನ ವಚನಗಳನ್ನು ಸಂಗೀತಕ್ಕೆ ಹೊಂದಿಸಿ ಅದನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸುವುದು ಸವಾಲಿನ ಕೆಲಸವಾಗಿತ್ತು. ಹಿನ್ನೆಲೆ ಸಂಗೀತ ಮತ್ತೊಂದು ಸವಾಲು. ನಾನು ಈ ಸವಾಲನ್ನು ಎಂಜಾಯ್‌ ಮಾಡಿದ್ದೇನೆ.

ಪಿರಿಯಾಡಿಕ್‌ ಸಿನಿಮಾಗಳನ್ನು ಗುರ್ತಿಸಿ ಪ್ರಶಸ್ತಿ ನೀಡುವುದು ಸ್ವಾಗತಾರ್ಹ. ಇದರಿಂದ ಇಂಥ ಇನ್ನಷ್ಟು ಪ್ರಯತ್ನಗಳಿಗೆ ಸ್ಫೂರ್ತಿ ನೀಡುತ್ತದೆ.  ಎಲೆಕ್ಟ್ರಾನಿಕ್ ಸಂಗೀತಕ್ಕಿಂತ ಲೈವ್‌ ಇನ್‌ಸ್ಟ್ರುಮೆಂಟ್‌ಗಳನ್ನು ಬಳಸಿಕೊಂಡು ರೂಪಿಸಿದ ಸಂಗೀತ ಹೆಚ್ಚು ಪರಿಣಾಮಕಾರಿಯಾಗಿ ಕೇಳುಗರನ್ನು ತಲುಪಬಲ್ಲದು. ನಾನು ಈ ಪ್ರಯತ್ನವನ್ನೇ ಮಾಡಿದ್ದೇನೆ. ಇಂಥ ಪ್ರಯತ್ನಗಳು ಹೆಚ್ಚಬೇಕಾಗಿದೆ.
-ಬಾಪು ಪದ್ಮನಾಭ, ‘ಅಲ್ಲಮ’ ಸಿನಿಮಾ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಕ

ವಿವಾದ ಸೃಷ್ಟಿಸಿದ ಅಕ್ಷಯ್‌ ಆಯ್ಕೆ
ಹಿಂದಿ ನಟ ಅಕ್ಷಯ್ ಕುಮಾರ್ ಅವರಿಗೆ ಅತ್ಯುತ್ತಮ ಚಿತ್ರ ನಟ ಪ್ರಶಸ್ತಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಅಕ್ಷಯ್‌ ಅವರು ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಪ್ರಿಯದರ್ಶನ್‌ ನಾಯರ್‌ ಅವರಿಗೆ ಆಪ್ತರು. ಹೀಗಾಗಿ ಅಕ್ಷಯ್‌ ಅವರನ್ನು  ಆಯ್ಕೆ ಮಾಡಿದ್ದಾರೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿವೆ.

ಅಕ್ಷಯ್‌ ಕುಮಾರ್‌ ಅಭಿನಯದ ‘ಹೇರಾ ಫೇರಿ’, ‘ಗರಂ ಮಸಾಲಾ’, ‘ಭಾಗಂ ಭಾಗ್‌’, ‘ಭೂಲ್‌ ಭುಲಯ್ಯಾ’, ‘ದೆ ದನಾ ದನ್‌’ ಮತ್ತು ‘ಖಟ್ಟಾ ಮೀಠಾ’ ಚಿತ್ರಗಳನ್ನು ಪ್ರಿಯದರ್ಶನ್‌ ನಿರ್ದೇಶಿಸಿದ್ದರು. ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಅಕ್ಷಯ್‌ ನಟಿಸಿದ್ದರು ಎಂಬ ಕಾರಣಕ್ಕೇ ಅವರ ಆಯ್ಕೆಯನ್ನು ಪ್ರಶ್ನಿಸುತ್ತಿರುವುದಕ್ಕೆ ಪ್ರಿಯದರ್ಶನ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಕಳೆದ ವರ್ಷ ರಮೇಶ್‌ ಸಿಪ್ಪಿ ಅವರು ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು. ಆಗ ಅವರ ಅತಿ ಆಪ್ತರಾದ ಅಮಿತಾಭ್‌ ಬಚ್ಚನ್‌ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು. ಪ್ರಕಾಶ್‌ ಝಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರ ಸಿನಿಮಾಗಳಲ್ಲಿ ನಟಿಸಿದ್ದ ಅಜಯ್ ದೇವಗನ್‌ ಆಯ್ಕೆಯಾಗಿದ್ದರು. ಆಗ ಉದ್ಭವಿಸದ ಪ್ರಶ್ನೆಗಳು ಈಗ ಏಳುತ್ತಿರುವುದು ಏಕೆ’ ಎಂದು ಅವರು ಕೇಳಿದ್ದಾರೆ.

‘ಅಕ್ಷಯ್‌ ನಟಿಸಿದ ‘ರುಸ್ತುಂ’ ಮತ್ತು ‘ಏರ್‌ಲಿಫ್ಟ್‌’ ಚಿತ್ರಗಳು ಪರಿಗಣನೆಯಲ್ಲಿದ್ದವು. ‘ರುಸ್ತುಂ’ ಚಿತ್ರದ ಅಭಿನಯಕ್ಕಾಗಿ ತೀರ್ಪುಗಾರರು ಅವರನ್ನು ಆಯ್ಕೆ ಮಾಡಿದ್ದಾರೆ’ ಎಂದು  ಹೇಳಿದ್ದಾರೆ.

ಪ್ರಶಸ್ತಿ ವಿಜೇತರ ವಿವರಗಳು

ಅತ್ಯುತ್ತಮ  ನಟ- ಅಕ್ಷಯ್ ಕುಮಾರ್ (ರುಸ್ತುಂ - ಹಿಂದಿ)

ಅತ್ಯುತ್ತಮ ನಟಿ- ಸುರಭಿ  (ಮಿನ್ನಾಮಿನ್‍ಙ್ - ಮಲಯಾಳಂ)

ವಿಶೇಷ ಜ್ಯೂರಿ ಅವಾರ್ಡ್  - ಮಲಯಾಳಂ ನಟ ಮೋಹನ್ ಲಾಲ್

ಪೋಷಕ ನಟಿ - ಝೈರಾ ವಸೀಂ (ದಂಗಲ್) 

ಸ್ಪೆಷಲ್ ಮೆನ್ಶನ್ ಅವಾರ್ಡ್- ಕಡ್ವಿ ಹವಾ, ಮುಕ್ತಿ ಭವನ್, ಅದಿಲ್ ಹುಸೇನ್ (ಮುಕ್ತಿ ಭವನ್ ) ಮತ್ತು ನೀರ್ಜಾ ಚಿತ್ರಕ್ಕಾಗಿ ಸೋನಂ ಕಪೂರ್

ಅತ್ಯುತ್ತಮ ತಮಿಳು ಚಿತ್ರ - ಜೋಕರ್, ನಿರ್ದೇಶನ ರಾಜು ಮುರುಗನ್

ಅತ್ಯುತ್ತಮ  ಗುಜರಾತಿ ಚಿತ್ರ -   ರಾಂಗ್ ಸೈಟ್ ರಾಜು

ಅತ್ಯುತ್ತಮ  ಮರಾಠಿ ಚಿತ್ರ - ದಶಕ್ರಿಯಾ

ಅತ್ಯುತ್ತಮ ಕನ್ನಡ ಚಿತ್ರ  - ರಿಸರ್ವೇಶನ್

ಅತ್ಯುತ್ತಮ  ಹಿಂದಿ ಚಿತ್ರ - ನೀರ್ಜಾ  (ರಾಮ್ ಮಧ್ವಾನಿ ನಿರ್ದೇಶಿತ)

ಅತ್ಯುತ್ತಮ  ಬಂಗಾಳಿ ಚಿತ್ರ  - ಬಿಸೋರ್ಜನ್ (ಕೌಶಿಕ್ ಗಂಗೂಲಿ ನಿರ್ದೇಶಿತ)

ಅತ್ಯುತ್ತಮ ಮಲಯಾಳಂ ಚಿತ್ರ- ಮಹೇಶಿಂಡೆ ಪ್ರತಿಕಾರಂ

ಸ್ಪೆಷಲ್ ಎಫೆಕ್ಟ್ಸ್  - ನವೀನ್ ಪೌಲ್  (ಶಿವಾಯ್ ಚಿತ್ರಕ್ಕಾಗಿ)

ವಸ್ತ್ರ ವಿನ್ಯಾಸ - ಮರಾಠಿ ಚಿತ್ರ ಸೈಕಲ್

ಪ್ರೊಡಕ್ಷನ್ ಡಿಸೈನ್ -ತಮಿಳು ಚಿತ್ರ 24

ಸಂಕಲನ - ಮರಾಠಿ ಚಿತ್ರ ವೆಂಟಿಲೇಟರ್

ರಿ ರೆಕಾರ್ಡಿಂಗ್ - ವೆಂಟಿಲೇಟರ್ ಚಿತ್ರಕ್ಕಾಗಿ ಪ್ರಿಯಾಂಕಾ ಚೋಪ್ರಾ

ಮಕ್ಕಳ  ಚಿತ್ರ- ಧನಕ್  (ನಾಗೇಶ್ ಕುಕನೂರ್ )

ಸಾಮಾಜಿಕ ಸಮಸ್ಯೆ  ವಿಷಯಾಧಾರಿತ ಚಿತ್ರ-  ಅನಿರುಧ್ದ ರಾಯ್ ಚೌಧರಿ ಅವರ 'ಪಿಂಕ್'

ಚೊಚ್ಚಲ ಚಿತ್ರಕ್ಕಾಗಿ ನೀಡುವ ಇಂದಿರಾ ಗಾಂಧಿ ಪ್ರಶಸ್ತಿ - ಕಲಿಫಾ (ಬಂಗಾಳಿ)

ಉತ್ತಮ ಚಿತ್ರ -  ಕಾಸವ್  (ಮರಾಠಿ)

ಆ್ಯಕ್ಷನ್ ನಿರ್ದೇಶಕ - ಪೀಟರ್ ಹೈನೆಸ್ ( ಪುಲಿಮುರುಗನ್ ಚಿತ್ರಕ್ಕಾಗಿ)

ಉತ್ತಮ  ಗಾಯಕ  -ಸುಂದರ ಅಯ್ಯರ್  (ತಮಿಳು ಚಿತ್ರ ಜೋಕರ್)

ಉತ್ತಮ ಗಾಯಕಿ - ಇಮಾನ್  ಚಕ್ರಬೊರ್ತಿ  (ಪ್ರಕ್ತಾನ್ ಚಿತ್ರದಲ್ಲಿನ ಜಾಕೆ ಬೊಲೊಬೊಶೊ ಹಾಡು)

ಸ್ಪೆಷಲ್ ಮೆನ್ಶನ್ ಅವಾರ್ಡ್ - The Eyes of Darkness

ನಾನ್ ಫೀಚರ್ ಫಿಲ್ಮ್  ವಿಭಾಗ
 ಶಾರ್ಟ್ ಫಿಕ್ಷನ್ ಚಿತ್ರ - ಅಬ್ಬಾ

ಅನಿಮೇಷನ್ ಚಿತ್ರ (ವಿಶೇಷ ಪ್ರಶಸ್ತಿ) - ಹಮ್ ಪಿಕ್ಚರ್ ಬನಾತೆ ಹೈ

ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಚಿತ್ರ - ಐ ಆ್ಯಮ್ ಜೀಜಾ ,ಸನತ್ (ಎರಡು ಚಿತ್ರಗಳು ಪ್ರಶಸ್ತಿ ಹಂಚಿಕೊಂಡಿವೆ)
ಪರಿಸ್ಥಿತಿ ವಿಷಯಾಧಾರಿತ ಚಿತ್ರ  - ದ ಟೈಗರ್ ಹೂ ಕ್ರಾಸ್ಡ್ ದ ಲೈನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.