ADVERTISEMENT

‘ಕ್ಲಾಸ್’ ತಿರುವು, ‘ಮಾಸ್’ ರಂಜನೆಯ ‘ಪೆಟ್ಟಾ’

ವಿಶಾಖ ಎನ್.
Published 10 ಜನವರಿ 2019, 9:29 IST
Last Updated 10 ಜನವರಿ 2019, 9:29 IST
‘ಪೆಟ್ಟಾ’ ಚಿತ್ರದಲ್ಲಿ ರಜನೀಕಾಂತ್
‘ಪೆಟ್ಟಾ’ ಚಿತ್ರದಲ್ಲಿ ರಜನೀಕಾಂತ್   

ಚಿತ್ರ: ಪೆಟ್ಟಾ (ತಮಿಳು)
ನಿರ್ಮಾಣ: ಕಲಾನಿಧಿ ಮಾರನ್
ನಿರ್ದೇಶನ: ಕಾರ್ತಿಕ್ ಸುಬ್ಬರಾಜ್
ತಾರಾಗಣ: ರಜನೀಕಾಂತ್, ನವಾಜುದ್ದೀನ್ ಸಿದ್ದಿಕಿ, ವಿಜಯ್ ಸೇತುಪತಿ, ಸಿಮ್ರನ್, ತ್ರಿಷಾ.

******

ಎರಡು ಗಂಟೆ 52 ನಿಮಿಷದ ಅವಧಿಯಲ್ಲಿ ಪದೇ ಪದೇ ಕುರ್ಚಿ ತುದಿಗೆ ಬಂದು ಕೂರಿಸುತ್ತಾ, ‘ರಜನಿಫೈಡ್’ ಮನರಂಜನೆಯನ್ನು ಮೊಗೆ ಮೊಗೆದು ಕೊಡುತ್ತದೆ ‘ಪೆಟ್ಟಾ’. ನಾಯಕನ ಸ್ಟಾರ್‌ಗಿರಿಯನ್ನು ಮುಡಿಗೆ ಸಿಕ್ಕಿಸಿಯೂ ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ತಮ್ಮತನದ ನಾಜೂಕುತನವನ್ನೂ ನಿರೂಪಣಾ ತಂತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಇದನ್ನು ಬರೀ ರಜನಿ ಸಿನಿಮಾ ಎನ್ನಲಾಗದು.

ADVERTISEMENT

ರೌಡಿಗಳು ಇರುವ ದೃಶ್ಯಗಳಲ್ಲೂ ಹಾಸ್ಯರಸವೊಂದನ್ನು ತುಳುಕಿಸುವ ಅಪರೂಪದ ಜಾಣತನ ನಿರ್ದೇಶಕರಿಗೆ ಇದೆ. ಹೀಗಾಗಿಯೇ ಪ್ರತ್ಯೇಕ ಹಾಸ್ಯದ ಟ್ರ್ಯಾಕ್‌ಗಳ ಹಂಗಾಗಲೀ, ಅನಗತ್ಯ ಹಾಡುಗಳ ವರಾತವಾಗಲೀ ಅವರಿಗೆ ಬೇಕಾಗಿಲ್ಲ. ‘ಬಾಷಾ’ ಸಿನಿಮಾದಲ್ಲಿನ ನಾಯಕನ ಇಮೇಜು ಇಲ್ಲಿಯೂ ಮೇಲುನೋಟಕ್ಕೆ ಕಾಣುತ್ತದೆ. ಆದರೆ, ಇಡೀ ಚಿತ್ರಕ್ಕೆ ಇರುವ ಬಂಧ ಅದರ ಸುದೀರ್ಘಾವಧಿಯ ಹೊರತಾಗಿಯೂ ನೋಡಿಸಿಕೊಳ್ಳುತ್ತದೆ.

ಹಾಗೆ ನೋಡಿದರೆ ಸಿನಿಮಾದ ಮೊದಲರ್ಧಕ್ಕೇ ಬೇರೆಯ ಜಾಯಮಾನವಿದೆ. ಎರಡನೇ ಅರ್ಧದಲ್ಲಿ ಪಕ್ಕಾ ತಮಿಳು ಸಂಸ್ಕೃತಿಯ ಸೇಡಿನ ಕಥನ. ರಜನಿ ವಯಸ್ಸಿಗೆ ತಕ್ಕ ಪಾತ್ರವನ್ನು ಬರೆದಿರುವ ನಿರ್ದೇಶಕರು, ಸಂಭಾಷಣೆಯಲ್ಲಿ ಎಲ್ಲೂ ಅನಗತ್ಯ ವಾಚಾಳಿತನ ತೋರಿಲ್ಲ. ಮಾತುಗಳಿಗಿಂತ ಹೆಚ್ಚು ಶಬ್ದವನ್ನು ಅನಿರುದ್ಧ್ ರವಿಚಂದರ್ ಸಂಗೀತವೇ ಮಾಡುತ್ತದೆ. ಪಾತ್ರದ ತೀವ್ರತೆಗೆ ಆ ಶಬ್ದದ ಅಗತ್ಯ ಇದೆ ಎಂದು ಪ್ರೇಕ್ಷಕರಾದ ನಾವೂ ಒಪ್ಪಿಕೊಳ್ಳುವಂತೆ ನಿರ್ದೇಶಕರು ಬೆಸೆದಿರುವುದು ಇನ್ನೊಂದು ಜಾಣ್ಮೆ.

ರಜನಿ ಕುತ್ತಿಗೆ ಭಾಗದಲ್ಲಿ ಸುಕ್ಕುಗಳಿದ್ದರೂ ಅವರು ತಮ್ಮ ಹರಿತಾದ ಕಣ್ಣೋಟ ಹಾಗೂ ಹಳೆಯ ಶೈಲಿಯ ಆಂಗಿಕ ಅಭಿನಯದಿಂದ ಆವರಿಸಿಕೊಳ್ಳುತ್ತಾರೆ. ಮೊದಲರ್ಧದಲ್ಲಿ ಸರಳರೇಖೆಯಂತೆ ಸಾಗುವ ನವಿರು ದೃಶ್ಯಗಳಲ್ಲಿ ಕಾಲೇಜ್ ವಾರ್ಡನ್ ಕಾಣಿಸಿಕೊಳ್ಳುವ ರಜನಿ, ಮಧ್ಯಂತರದ ಹೊತ್ತಿಗೆ ದೊಡ್ಡ ತಿರುವಿನ ಬಿಂದುವಿನ ಮೇಲೆ ನಿಲ್ಲುತ್ತಾರೆ. ಆಮೇಲಿನದ್ದು ಬಂದೂಕುಗಳ ಶಬ್ದ, ಹೊಡೆದಾಟದ ಅಬ್ಬರ. ಅದರಲ್ಲೂ ಅನಿರೀಕ್ಷಿತ ಆಟಗಳನ್ನು ಇಟ್ಟಿರುವ ನಿರ್ದೇಶಕರು ಚಲನಚಿತ್ರದ ಗತಿಯಲ್ಲೂ ಸ್ಥಿರತೆ ಸಾಧಿಸಿದ್ದಾರೆ.

ರಜನಿಕಾಂತ್ ಪೂರ್ಣಪ್ರಮಾಣದಲ್ಲಿ ಅಭಿಮಾನಿಗಳನ್ನು ರಂಜಿಸುತ್ತಾರೆ. ಆದರೆ, ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವ ವಿಲಕ್ಷಣ ಪಾತ್ರಧಾರಿಯಾಗಿ ವಿಜಯ್ ಸೇತುಪತಿ ಹೆಚ್ಚು ಸಹಜವೆನ್ನಿಸುತ್ತಾರೆ. ನವಾಜುದ್ದೀನ್ ಸಿದ್ದಿಕಿ ಕ್ರೌರ್ಯವನ್ನೆಲ್ಲ ಆವಿರ್ಭವಿಸಿಕೊಂಡಂತೆ ನಟಿಸಿದ್ದಾರೆ.

ಸಿಮ್ರನ್, ತ್ರಿಷಾ ಇಬ್ಬರೂ ನಾಯಕಿಯರಿಗೆ ಸಿನಿಮಾದಲ್ಲಿ ಹೆಚ್ಚೇನೂ ಅವಕಾಶಗಳಿಲ್ಲ. ಇಬ್ಬರನ್ನೂ ‘ರಿಲೀಫ್’ ಎಂದಷ್ಟೇ ಭಾವಿಸಬೇಕು. ಪೀಟರ್‌ ಹೀನ್ ಸಾಹಸ ಸಂಯೋಜನೆ ಗಮನಾರ್ಹವಾಗಿದ್ದು, ರಜನಿ ವಯಸ್ಸನ್ನು ಪೂರ್ತಿ ಮುಚ್ಚಿಹಾಕಿದೆ. ಸಿನಿಮಾಟೊಗ್ರಾಫರ್ ತಿರು ಬಳಸಿರುವ ಮಂದ ಲೈಟಿಂಗ್‌ಗೂ ರಜನಿ ಅಭಿಮಾನಿಗಳ ಬಯಕೆಯೇನು ಎನ್ನುವುದು ಗೊತ್ತಿದೆ.

‘ಜಿಗರ್‌ಥಂಡ’ದಂಥ ಭಿನ್ನ ಮನರಂಜನೆಯ ಸಿನಿಮಾ ಕೊಟ್ಟಿದ್ದ ಕಾರ್ತಿಕ್ ಸುಬ್ಬರಾಜ್ ಹಳೆಯ ಕಥೆಗಳನ್ನೇ ಹೊಸತನದಲ್ಲೂ ಹೇಳಲು ಸಾಧ್ಯವಿದೆ ಎನ್ನಲು ಹಲವು ಸುಳುಹುಗಳನ್ನು ಈ ಸಿನಿಮಾದಲ್ಲಿ ಬಿಟ್ಟಿದ್ದಾರೆ. ಅವನ್ನು ರಜನಿ ಪ್ರಭಾವಳಿಯಿಂದ ಹೆಕ್ಕಿಕೊಳ್ಳಬೇಕಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.