ADVERTISEMENT

ಜನ ಮರೆತ ನಗೆನಟ

ಲಕ್ಷ್ಮಣ ಕೊಡಸೆ
Published 14 ಜುಲೈ 2011, 19:30 IST
Last Updated 14 ಜುಲೈ 2011, 19:30 IST

ನರಸಿಂಹರಾಜು ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಸ್ಯನಟ. ಜುಲೈ ತಿಂಗಳಿಗೂ ಅವರಿಗೂ ವಿಚಿತ್ರ ನಂಟು. ಅವರ ಜನಿಸಿದ್ದು, ನಿಧನರಾದದ್ದು ಜುಲೈನಲ್ಲಿಯೇ. ಕನ್ನಡ ಚಿತ್ರರಂಗದ ನಿರ್ಲಕ್ಷ್ಯಕ್ಕೆ ಒಳಗಾದ, ಜನರ ನೆನಪಿನಿಂದಲೂ ಮಾಸುತ್ತಿರುವ ಈ ಅದ್ಭುತ ಕಲಾವಿದನ ಸ್ಮರಣೆ, ಕನ್ನಡ ಚಿತ್ರರಂಗದ ಸದಭಿರುಚಿಯ ಹಾಸ್ಯಸಂಸ್ಕೃತಿಯೊಂದಿಗೆ ಇಂದಿನ ಹಾಸ್ಯ ಪರಿಕಲ್ಪನೆಯ ದುರವಸ್ಥೆಯನ್ನೂ ನೆನಪಿಸುವಂತಿದೆ.

`ನಗಿಸುವುದು ನನ್ನ ಕರ್ಮ, ನಗುವುದು ನಿಮ್ಮ ಧರ್ಮ~ ಎಂದು ತಮ್ಮ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದ ನರಸಿಂಹರಾಜು ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಸ್ಯನಟ. ತೀರ ಎತ್ತರವಲ್ಲದ ಸಪೂರ ಶರೀರ, ಸ್ವಲ್ಪವೇ ಉಬ್ಬಿದ ಹಲ್ಲಿನ ನರಸಿಂಹರಾಜು, ಸಂಭಾಷಣೆಯನ್ನು ದೇಹಭಾಷೆಯೊಂದಿಗೆ ಅನನ್ಯವಾಗಿ ಸಂಯೋಜಿಸಿಕೊಂಡಿದ್ದ ಅಪ್ರತಿಮ ಹಾಸ್ಯಕಲಾವಿದ.

ಕಳೆದ ಶತಮಾನದ ಅರವತ್ತು ಎಪ್ಪತ್ತರ ದಶಕಗಳಲ್ಲಿ ನಿರ್ಮಾಣವಾಗಿದ್ದ ಕನ್ನಡ ಚಿತ್ರಗಳಲ್ಲಿ ಅನಿವಾರ್ಯ ಪಾತ್ರವೆಂಬಂತೆ ಕಾಣಿಸಿಕೊಳ್ಳುತ್ತಿದ್ದ ನರಸಿಂಹರಾಜು ಹಾಸ್ಯಪಾತ್ರಗಳನ್ನು ನಾಯಕ ಪಾತ್ರಗಳ ಔನ್ನತ್ಯಕ್ಕೆ ಕೊಂಡೊಯ್ದಿದ್ದ ಪ್ರತಿಭಾವಂತ ನಟ.

ಆಗಿನ ಚಿತ್ರಗಳಲ್ಲಿ ನರಸಿಂಹರಾಜು ಪ್ರವೇಶವೇ ಪ್ರೇಕ್ಷಕರಲ್ಲಿ ನಗೆ ಉಕ್ಕಿಸುತ್ತಿತ್ತು. ಅವರ ಮಾತು, ಅದನ್ನು ಹೇಳುವಾಗಿನ ಧಾಟಿ, ಮಾತಾಡುವಾಗಿನ ಅಂಗವಿನ್ಯಾಸ - ಇವೆಲ್ಲ ಚಿತ್ರಗಳಲ್ಲಿ ಹಾಸ್ಯಪಾತ್ರಕ್ಕೆ ಒಂದು ಮಾದರಿಯನ್ನು ಕಟ್ಟಿಕೊಡುತ್ತಿತ್ತು.

ಹಾಸ್ಯವನ್ನು ಉಕ್ಕಿಸುತ್ತಿದ್ದರೂ ಅವರು ವಹಿಸಿದ್ದೆವಲ್ಲ ಉತ್ತಮ ನಡತೆಯ ಪಾತ್ರಗಳೇ. ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲಿ ರಾಜನ ಗೆಳೆಯನಾಗಿ, ಸಾಮಾಜಿಕ ಚಿತ್ರಗಳಲ್ಲಿ ನಾಯಕನಿಗೆ ಮಿತ್ರನಾಗಿ ಅವರ ಪಾತ್ರವಿರುತ್ತಿತ್ತು.

ಮುಕ್ಕಾಲು ಶತಮಾನ ಇತಿಹಾಸದ ಕನ್ನಡ ಚಿತ್ರರಂಗದ ಆರಂಭದ ದಶಕಗಳಲ್ಲಿ ಕನ್ನಡಕ್ಕೆ ಪ್ರೇಕ್ಷಕರ ಭದ್ರ ಬುನಾದಿಯನ್ನು ಹಾಕಿಕೊಡುವುದರಲ್ಲಿ ನರಸಿಂಹರಾಜು ಅವರ ಪಾತ್ರ ಹಿರಿಯದು. ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಕಥೆ, ನಾಯಕ, ನಾಯಕಿಯರಂತೆ ಹಾಸ್ಯನಟನ ಪಾತ್ರವೂ ಮುಖ್ಯ ಎಂಬುದನ್ನು ಅವರು ತಮ್ಮ ಅಭಿನಯ ವೈಶಿಷ್ಟ್ಯದಿಂದ ಸಾಬೀತುಪಡಿಸಿದವರು. ಅವರ ಹಾಸ್ಯಪ್ರಜ್ಞೆ ಅನನ್ಯವಾದದ್ದು. ಸನ್ನಿವೇಶಕ್ಕೆ ತಕ್ಕ ಭಾವಭಂಗಿ, ಆಂಗಿಕ ಚಲನೆ, ಒಮ್ಮೆಗೆ ನಗೆ ಉಕ್ಕಿಸುವಂಥ ಅಭಿನಯ. ಸಂಭಾಷಣೆ ಹೇಳುವುದರಲ್ಲಿಯೇ ನಗೆ ಉಕ್ಕಿಸುವ ಏರಿಳಿತದ ಧಾಟಿ ಅವರದು. ಸಣ್ಣ ಪುಟ್ಟ ಹಾಸ್ಯಪಾತ್ರಗಳಿಂದ ಆರಂಭಗೊಂಡು ನಾಯಕ ಪಾತ್ರಕ್ಕೆ ಕಡಿಮೆ ಇಲ್ಲದಂತಹ ಭೂಮಿಕೆಗಳವರೆಗೆ ತಮ್ಮ ವರ್ಚಸ್ಸನ್ನು ವಿಸ್ತರಿಸಿಕೊಂಡ ಅವರು ಭಾರತೀಯ ಚಿತ್ರರಂಗದಲ್ಲಿಯೇ ವಿರಳ ಎನಿಸಿದ ಹಾಸ್ಯನಟರು.

ಕನ್ನಡದಲ್ಲಿ ಹೊಸಬಗೆಯ ಪ್ರಯೋಗ, ವೈವಿಧ್ಯಪೂರ್ಣ ಕಥೆಗಳು, ಯಶಸ್ವೀ ಚಿತ್ರಗಳು ಹೊರಬಂದದ್ದು ಕಳೆದ ಶತಮಾನದ ಐದು, ಆರು ಏಳನೆಯ ದಶಕಗಳಲ್ಲಿ. ಈ ಅವಧಿ ಕನ್ನಡ ಚಿತ್ರರಂಗದ ಸುವರ್ಣ ಯುಗ. 1954ರಲ್ಲಿ ಬಿಡುಗಡೆಯಾದ `ಬೇಡರ ಕಣ್ಣಪ್ಪ~ನಿಂದ ಆರಂಭವಾದದ್ದು ಈ ಸಾಹಸಗಾಥೆ. 1954ರಿಂದ 1979ರವರೆಗಿನ 25 ವರ್ಷಗಳಲ್ಲಿ 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಹಾಸ್ಯನಟರಾಗಿ ಮೆರೆದ ಹಿರಿಮೆ ನರಸಿಂಹರಾಜು ಅವರದು.

ತಮ್ಮ ನಾಲ್ಕನೆಯ ವಯಸ್ಸಿನಲ್ಲಿ (ಜನನ 24 ಜುಲೈ 1926) ಸಿ.ಬಿ.ಮಲ್ಲಪ್ಪನವರ ಶ್ರೀಚಂದ್ರಮೌಳೀಶ್ವರ ನಾಟಕ ಸಭಾದಲ್ಲಿ ಬಾಲಕಲಾವಿದನಾಗಿ ಸೇರಿಕೊಂಡ ನರಸಿಂಹರಾಜು ಅವರಿಗೆ ಅಲ್ಲಿಯೇ ಬದುಕಿನ ಶಿಕ್ಷಣವೂ ಆರಂಭವಾಯಿತು. ಹಾಸ್ಯಪಾತ್ರಕ್ಕೆ ಹೇಳಿ ಮಾಡಿಸಿದಂತಹ ಮುಖ, ಶರೀರವನ್ನು ಸಹಜವಾಗಿ ಪಡೆದಿದ್ದ ನರಸಿಂಹರಾಜು ಅವರಿಗೆ ಹಾಸ್ಯಪಾತ್ರಗಳ ನಿರ್ವಹಣೆ ಸಹಜವಾಗಿತ್ತು. ರಂಗಮಂಚದ ಮೇಲೆ ಬಂದು ನಿಂತರೆ ಸಾಕು, ಪ್ರೇಕ್ಷಕರು ನಗೆಹೊನಲು ಹರಿಸುತ್ತಿದ್ದರು.

ನರಸಿಂಹರಾಜು ಅವರು ಪೌರಾಣಿಕ ಪಾತ್ರಗಳು. ವಿಶ್ವಾಮಿತ್ರ, ರಾಮ, ಕೆಲವೊಮ್ಮೆ ರಾವಣ. ಭರತ, ಇನ್ನು ಕೆಲವು ಸಲ ಲಕ್ಷ್ಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಆಗಲೇ ಜನಪ್ರಿಯತೆ ಪಡೆದಿದ್ದ `ಬೇಡರ ಕಣ್ಣಪ್ಪ~ ನಾಟಕದಲ್ಲಿ ಅರ್ಚಕನ ಪುತ್ರ ಕಾಶಿಯ ಪಾತ್ರದಲ್ಲಿ ನರಸಿಂಹರಾಜು ತುಂಬ ಜನಪ್ರಿಯತೆ ಪಡೆದರು.

`ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ~, `ಎಡತೊರೆಯ ಕಂಪೆನಿ~, `ಹಿರಣ್ಣಯ್ಯನವರ ಮಿತ್ರಮಂಡಲಿ~, `ಭಾರತ ಲಲಿತ ಕಲಾ ಸಂಘ~, ಬೇಲೂರಿನ `ಗುಂಡಾ ಜೋಯಿಸರ ಕಂಪೆನಿ~, ಗುಬ್ಬಿಯ `ಚೆನ್ನಬಸವೇಶ್ವರ ನಾಟಕ ಕಂಪೆನಿ~ಯ ನಾಟಕಗಳಲ್ಲಿ ತಮ್ಮ ಬಣ್ಣದ ಬದುಕಿನ ಆರಂಭದ 27 ವರ್ಷಗಳನ್ನು ನರಸಿಂಹರಾಜು  ಕಳೆದಿದ್ದರು.

ರಾಜ್‌ಕುಮಾರ್ ಅವರೊಂದಿಗೆ `ಬೇಡರ ಕಣ್ಣಪ್ಪ~ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ಅವರು ನಂತರವೂ ರಂಗಭೂಮಿಯನ್ನು ಕಡೆಗಣಿಸಲಿಲ್ಲ.

ಬಾಲನಟನಾಗಿ ರಂಗ ಪ್ರವೇಶಿಸಿದ ನರಸಿಂಹರಾಜು ಬೆಳೆಯುತ್ತಿದ್ದಂತೆ ದೊಡ್ಡವರ ಪಾತ್ರಗಳಿಗೆ ಬಡ್ತಿ ಪಡೆದರು. ತಮ್ಮ ವಿಶಿಷ್ಟ ಅಭಿನಯದಿಂದ ಹಾಸ್ಯನಟಶ್ರಿರಾಗಿ ರೂಪುಗೊಂಡರು. ರಂಗಭೂಮಿಯಲ್ಲಿ ಪಡೆದ ಎಲ್ಲ ಬಗೆಯ ಅನುಭವ ಅವರಿಗೆ ಸಿನಿಮಾ ಜಗತ್ತಿನಲ್ಲಿ ಉಪಯೋಗಕ್ಕೆ ಬಂದಿತು. ಚಿತ್ರರಂಗ ಪ್ರವೇಶಕ್ಕೆ ನಿಮಿತ್ತವಾದ `ಬೇಡರ ಕಣ್ಣಪ್ಪ~ದಲ್ಲಿನ ಕಾಶಿಯ ಪಾತ್ರ ಅವರಿಗೆ ಲೀಲಾಜಾಲವಾಗಿತ್ತು. `ಬೇಡರ ಕಣ್ಣಪ್ಪ~ ನಾಟಕದಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರದರ್ಶನಗಳಲ್ಲಿ ಅವರು ಕಾಶಿಯ ಪಾತ್ರ ವಹಿಸಿದ್ದರು. ಪ್ರತಿ ಪ್ರದರ್ಶನದಲ್ಲಿಯೂ ಅವರು ತೋರಿಸುತ್ತಿದ್ದ ತನ್ಮಯತೆ ಬೆರಗು ಮೂಡಿಸುವಂತಿತ್ತು ಎಂದು ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಾಸ್ಟರ್ ಹಿರಣ್ಣಯ್ಯ ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.

1953ರಿಂದ 1979ರ ಜುಲೈ 21ರ ವರೆಗಿನ ಅವಧಿಯಲ್ಲಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಅಭಿಜಾತ ಹಾಸ್ಯ ಪ್ರತಿಭೆಯನ್ನು ಕನ್ನಡಿಗರಿಗೆ ಉಣಬಡಿಸಿದ ಮಹಾನ್ ನಟ ನರಸಿಂಹರಾಜು.

ಶ್ರೇಷ್ಠ ಹಾಸ್ಯ ನಟ ಚಾರ‌್ಲಿ ಚಾಪ್ಲಿನ್ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದ ನರಸಿಂಹರಾಜು ಅವರ ಪೀಚು ಶರೀರ, ವಿಶಿಷ್ಟ ಬಗೆಯ ಹಾವಭಾವಗಳ ಮ್ಯಾನರಿಸಂಗಳು ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಿತ್ತು. ಅವರ ಚಿತ್ರಗಳನ್ನು ಟೆಂಟ್‌ಗಳಲ್ಲಿ ನೋಡುತ್ತಿದ್ದ ಗ್ರಾಮೀಣರು ಉಬ್ಬು ಹಲ್ಲಿನ ತಮ್ಮ ಮಿತ್ರರನ್ನು `ನರಸಿಂಹರಾಜು~ ಎಂದೇ ಕರೆಯುವಷ್ಟು ದಟ್ಟ ಪ್ರಭಾವವನ್ನು ನರಸಿಂಹರಾಜು ಮೂಡಿಸಿದ್ದರು. ಇದು ಜನಪದ ನಾಯಕನೊಬ್ಬ ಬೀರಿದ ಪ್ರಭಾವದಂತೆ ಈಗ ತೋರುತ್ತದೆ.

ಕೆಲವು ವರ್ಷ ಮದ್ರಾಸಿನಲ್ಲಿ ನೆಲೆಸಿದ್ದ ನರಸಿಂಹರಾಜು ಕನ್ನಡ ಚಿತ್ರಗಳ ನಿರ್ಮಾಣ ಚಟುವಟಿಕೆಗಳು ಬೆಂಗಳೂರಿನಲ್ಲಿ ಆರಂಭವಾದಾಗ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಿದರು. ಮಕ್ಕಳು ಮೊಮ್ಮಕ್ಕಳೊಂದಿಗೆ ನೆಲೆಸಿದ್ದ ಕುಟುಂಬವತ್ಸಲ ನರಸಿಂಹರಾಜು. ಅವರು ತಮ್ಮ 56ನೇ ವಯಸ್ಸಿನಲ್ಲಿ 1979ರ ಜುಲೈ 20 ರಂದು ಎಂದಿನಂತೆ ರಾತ್ರಿ ಉಪಹಾರ ಸೇವಿಸಿ ಮಲಗಿದ್ದರು. ಮುಂಜಾನೆ 4.30ರ ವೇಳೆಗೆ ತೀವ್ರ ಹೃದಯಾಘಾತದಿಂದ ನಿಧನರಾದರು.

ನರಸಿಂಹರಾಜು ಅವರು ಕನ್ನಡ ಚಿತ್ರರಂಗದ ಸುವರ್ಣ ಕಾಲ ಎನ್ನಬಹುದಾದ ಅರವತ್ತು ಎಪ್ಪತ್ತರ ದಶಕದಲ್ಲಿ ಹಾಸ್ಯಚಕ್ರವರ್ತಿಯಾಗಿ ಕನ್ನಡಿಗರನ್ನು ರಂಜಿಸಿದ್ದರು. ಆದರೆ, ಅವರಿಗೆ ಒಮ್ಮೆಯೂ ರಾಜ್ಯ ಸರ್ಕಾರದ ಪ್ರಶಸ್ತಿ ಬರಲಿಲ್ಲ. ಅವರ ಹೆಸರನ್ನು ನೆನಪು ಮಾಡಿಕೊಳ್ಳುವಂಥ ಯಾವೊಂದು ಕೆಲಸವನ್ನು ಸರ್ಕಾರ ಮಾಡಲಿಲ್ಲ. ಕೊನೆಗೆ ಒಂದು ರಸ್ತೆಗೂ ಅವರ ಹೆಸರನ್ನು ಇಡಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.