ವಿಜಯ್ ಭಾರದ್ವಾಜ್ ಕೆಲಸ ಮಾಡುತ್ತಿರುವುದು ಸಿಂಗಪುರದಲ್ಲಿ. ಆದರೆ, ಅವರಿಗೆ ಮಾತೃಭಾಷೆ ಕನ್ನಡದ ಮೇಲೆ ಅಪಾರ ಪ್ರೀತಿ. ಸಮಯ ಸಿಕ್ಕಿದಾಗಲೆಲ್ಲಾ ಭಾಷೆಯ ಋಣ ತೀರಿಸಲು ತಾಯ್ನಾಡಿಗೆ ಬರುತ್ತಾರೆ. ಈ ಹಿಂದೆ ಅವರು ವಾಹಿನಿಯೊಂದರಲ್ಲಿ ನಡೆಸಿಕೊಡುತ್ತಿದ್ದ ‘ಮಾತುಕತೆ ವಿನಯ್ ಜೊತೆ’ ಎಂಬ ಕಾರ್ಯಕ್ರಮ ಜನಪ್ರಿಯವಾಗಿತ್ತು.
ಸಿನಿಮಾ ತಾರೆಯರ ಮನದಾಳದ ಮಾತು ಕುರಿತಾದ ಕಾರ್ಯಕ್ರಮ ಇದಾಗಿತ್ತು. ಕಲಾವಿದರ ಸಂದರ್ಶನದ ವೇಳೆ ಅವರಾಡಿದ ಕೆಲವು ಮಾತುಗಳೇ ಈಗ ‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ದೃಶ್ಯರೂಪ ಪಡೆದಿವೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆಯನ್ನೂ ಅವರೇ ಹೊತ್ತಿದ್ದಾರೆ.
ಪ್ರೇಮ, ಸ್ನೇಹ, ವೃತ್ತಿಜೀವನ ಮತ್ತು ಭಾವೋದ್ರೇಕವನ್ನು ಕದಡುವ ಆಧುನಿಕ ಕಥೆ ಇದು. ಮೂರು ಪಾತ್ರಗಳ ಜೀವನ ಹಾಗೂ ಅವರ ಸವಾರಿ ಹೇಗೆ ಮುಂದಿನ ಹಂತಕ್ಕೆ ಹೋಗುತ್ತದೆ ಎನ್ನುವುದೇ ಕಥಾಹಂದರ. ಇಲ್ಲಿ ಒಂದೊಂದು ವರ್ಗದ ಪ್ರತಿನಿಧಿ ಕಾಣಸಿಗುತ್ತಾರೆ. ಹೊಸ ತಲೆಮಾರಿನವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಕಮರ್ಷಿಯಲ್ ದಾಟಿಯಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಹಂಬಲ ನಿರ್ದೇಶಕರದ್ದು.
ಪ್ರವೀಣ್ ತೇಜ್ಈ ಚಿತ್ರದ ನಾಯಕ. ಅವರು ಮೂರು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ರಂಗಿತರಂಗ’ ಖ್ಯಾತಿಯ ರಾಧಿಕಾ ಚೇತನ್ ಅವರದ್ದು ಕುಂಚ ಕಲಾವಿದೆಯ ಪಾತ್ರ. ಹೊಸ ಪ್ರತಿಭೆ ಅನನ್ಯ ಕಶ್ಯಪ್ ಯುವಜನರ ಆಲೋಚನೆಗಳನ್ನು ಪ್ರತಿಬಿಂಬಿಸುವ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿವೆ. ಛಾಯಾಗ್ರಹಣ ಅಭಿಮನ್ಯು ಸದಾನಂದ ಅವರದ್ದು. ಕಿರಣ್ ಕಾವೇರಪ್ಪ ಅವರ ಸಾಹಿತ್ಯವಿದೆ.
ಇಂಗ್ಲೆಂಡ್‌ನಲ್ಲಿ ವೈದ್ಯ ವೃತ್ತಿ ಮಾಡುತ್ತಿರುವ ಡಾ.ಸುರೇಶ್, ದುಬೈನ ತಾರನಾಥ್, ಸಿಂಗಪುರದ ಶೇಷ್ ಮತ್ತು ಬೆಂಗಳೂರಿನ ಮುರಳಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಜನವರಿ ತಿಂಗಳೊಳಗೆ ಬೆಂಗಳೂರಿನ ಸುತ್ತಮುತ್ತ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.