ADVERTISEMENT

`ಪ್ರೇಮ' ಪಲ್ಲಕ್ಕಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2013, 19:59 IST
Last Updated 25 ಜುಲೈ 2013, 19:59 IST

ಅಂದು ಗುರುಪೂರ್ಣಿಮೆ. ತಮ್ಮ ಯಶಸ್ಸಿಗೆ ಸಹಕರಿಸಿದ ಚಿತ್ರರಂಗ, ಹಿರಿಯರಿಗೆ ಒಂದು ಧನ್ಯವಾದ ಹೇಳಿಬಿಡಬೇಕು ಎಂಬ ಕಾತರ. `ನೆನಪಿರಲಿ' ಖ್ಯಾತಿಯ ಪ್ರೇಮ್ ವೇದಿಕೆಯ ಮೇಲಿದ್ದರು. ಕ್ಷಣ ಕಳೆದಂತೆ ನೆನಪುಗಳಿಗೆ ಜಾರಿದರು. ಬಣ್ಣದ ಬದುಕಿನ ಏರಿಳಿತಗಳನ್ನು ಕಣ್ಣ ಮುಂದೆ ತಂದರು. ಆರ್ದ್ರಗೊಂಡರು...

ಯಶಸ್ಸಿನ ಮೌಲ್ಯ ಗೊತ್ತಿಲ್ಲದ ಕಾಲದಲ್ಲಿ ನಾಯಕನಟನಾದೆ. `ನೆನಪಿರಲಿ', `ಜೊತೆಜೊತೆಯಲಿ', `ಪಲ್ಲಕ್ಕಿ'ಯಂಥ ಉತ್ತಮ ಸಿನಿಮಾಗಳಲ್ಲಿ ಅಭಿನಯಿಸಿದೆ.ಆದರೆ ಗೆಲುವಿನ ಬೆಲೆ ಗೊತ್ತಾದದ್ದೇ ಸೋತಾಗ. ಮತ್ತೊಂದು ಯಶಸ್ಸು ಸಿಗಲಿ ಎಂದು ಬಹುದಿನ ಕಾದೆ. `ಚಾರ್‌ಮಿನಾರ್' ಮೂಲಕ ಆ ಗೆಲುವು ಸಿಕ್ಕಿತು ಎಂದರು.

ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ `ಮತ್ತೆ ಬನ್ನಿ ಪ್ರೀತ್ಸೋಣ' ಗಲ್ಲಾಪೆಟ್ಟಿಗೆಯಲ್ಲಿ ಸೋತಿತ್ತು. ಆಗ ಅವರಿಗೆ ಧೈರ್ಯ ತುಂಬಿದವರಿಗೆ ಕೃತಜ್ಞತೆ ಸಲ್ಲಿಸಿದರು. ಹಿಂತಿರುಗಿ ನೋಡವಾಗ ಹೆಮ್ಮೆ ಅನ್ನಿಸುವಂಥ ಸಂಗತಿಗಳೇ ಕಂಡ ಬಗ್ಗೆ ಸಂತಸಗೊಂಡರು.

ಅವು ಪ್ರೇಮ್‌ರ ಬಾಲ್ಯದ ದಿನಗಳು. ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಹೊಣೆಗಾರಿಕೆ. ಹತ್ತನೇ ತರಗತಿ ಓದಿದ್ದೇ ದೊಡ್ಡ ಸಂಗತಿ ಎನ್ನುವಂತಾಗಿತ್ತು. ಆಗಿನ ವೃತ್ತಿ ನೇಕಾರಿಕೆ. ಲಾಳಿಗಳ ನಡುವೆ ಸುರುಳಿ ಸುರುಳಿಯಾಗಿ ಬೀಳುತ್ತಿದ್ದ ದಿನಪತ್ರಿಕೆಗಳ ತುಣುಕೇ ಅವರಿಗೆ ಜ್ಞಾನದ ಬೆಳಕಿಂಡಿ. ಓದುತ್ತ ಓದುತ್ತ ಸಾಹಿತ್ಯದ ಹುಚ್ಚು ಹತ್ತಿಸಿಕೊಂಡರು. ಪುಸ್ತಕಗಳ ನಂಟು ಬೆಳೆಸಿಕೊಂಡರು. ಅಪ್ಪ ಸಾಹಸಿ. `ಒಂದು ಹೊತ್ತಿನ ತುತ್ತು ಕಡಿಮೆಯಾದರೂ ಯಾರೂ ಕೇಳಲ್ಲ. ಆದರೆ ಸಿನಿಮಾದಲ್ಲಿ ಅಭಿನಯಿಸು' ಎಂದು ಹುರುಪು ತುಂಬಿದರಂತೆ.

ಆಗ ಪ್ರೇಮ್ ತಿಂಗಳ ದುಡಿಮೆ ಏಳುನೂರು ರೂಪಾಯಿ. ಆ ಹಣದಲ್ಲಿ ವರ್ಷಕ್ಕೆ 170 ಸಿನಿಮಾ ನೋಡುತ್ತಿದ್ದರಂತೆ. ನಟನಾಗಬೇಕು ಎಂಬ ಹುಚ್ಚು ಇಂಥ ಸಾಹಸಗಳನ್ನು ಮಾಡಿಸುತ್ತಿತ್ತಂತೆ. ಒಮ್ಮೆ ರೀಮೇಕ್ ಮಾಡಲ್ಲ ಎಂದು ಪ್ರೇಮ್ ಪಟ್ಟು ಹಿಡಿದಿದ್ದರು. ಅದೇ ಕಾರಣಕ್ಕೆ ಎರಡು ವರ್ಷ ಅವಕಾಶ ಸಿಗಲಿಲ್ಲ. ಆಗ ಉದ್ಯಮ ತಮ್ಮನ್ನು ನಿರ್ಲಕ್ಷಿಸಿದ್ದನ್ನು ನೆನಪಿಸಿಕೊಂಡರು.

ಏಳುಬೀಳು ಎದುರಾದಾಗಲೆಲ್ಲಾ ಅವರ ಜೊತೆಗೆ ಇದ್ದದ್ದು ಬಾಳಸಂಗಾತಿ. ಚಿತ್ರಗಳು ಸೋತಾಗ ಪ್ರೇಮ್ ಅದಾಗಲೇ ನಾಯಕನಟನಾಗಿದ್ದರು. ಮತ್ತೆ ಕೆಲಸಕ್ಕೆ ಸೇರುವಂತಿರಲಿಲ್ಲ. ಸುಮ್ಮನೆ ಮನೆಯಲ್ಲಿ ಕೂರಬಾರದು ಎನ್ನುತ್ತ ಬಸ್‌ಪಾಸ್ ಮಾಡಿಸಿಕೊಟ್ಟದ್ದು ಹೆಂಡತಿ. ದಿನವಿಡೀ ಊರು ಸುತ್ತುವುದು, ನೋವು ಮರೆಯುವುದು ನಡೆದಿತ್ತು...

ಮಾತಿನ ನಡುವೆ ಪ್ರೇಮ್ ಕಣ್ಣು ತುಂಬಿಬಂದಿತ್ತು. ಅದರ ಬೆನ್ನಿಗೇ ಈಗ ಮೊದಲಿನ ಅಸ್ಥಿರತೆ ಇಲ್ಲ ಎಂಬ ಖುಷಿ. `ಇದನ್ನೆಲ್ಲಾ ಸೇರಿಸಿ ಯಾಕೆ ಒಂದು ಸಿನಿಮಾ ಮಾಡಬಾರದು?'- ಪತ್ರಕರ್ತರ ಪ್ರಶ್ನೆ. `ಕತೆ ತಯಾರಾಗುತ್ತಿದೆ'- ಪ್ರೇಮ್ ಉತ್ತರ. ಬದುಕಿನ ವಿವಿಧ ಮಗ್ಗುಲು, ಏಳುಬೀಳುಗಳನ್ನು ಸೇರಿಸಿ ಒಂದು ಪ್ರೇಮಕತೆ ಹೆಣೆಯುವ ಯತ್ನ ಅವರದ್ದು. ಅಂದಹಾಗೆ ಅವರದು ಪ್ರೇಮವಿವಾಹ.

ADVERTISEMENT

  ಅವರಿಗೆ ಕುಟುಂಬ ಇಷ್ಟ ಪಡುವಂಥ ಸಿನಿಮಾಗಳತ್ತ ಧ್ಯಾನ. ಹಾಗಾಗಿ ಪ್ರೇಮ ಹಾಗೂ ಆ್ಯಕ್ಷನ್ ಚಿತ್ರಗಳನ್ನು ಜೊತೆ ಜೊತೆಯಲ್ಲೇ ಕೊಂಡೊಯ್ಯುವ ಕನಸನ್ನು ಹಂಚಿಕೊಂಡರು. `ಚಾರ್‌ಮಿನಾರ್' ಜೋಡಿ ಹೊಸ ಪ್ರಯೋಗಕ್ಕಿಳಿದಿದೆ. ಪ್ರೇಮ್ ಅವರ ಹೊಸ ಚಿತ್ರ `ಮಳೆ'ಯ ನಿರ್ಮಾಪಕರು ಆರ್. ಚಂದ್ರು. ಸಾಕಷ್ಟು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿದ್ದ ತೇಜಸ್ `ಮಳೆ' ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

`ಚಂದ್ರ'ದ ಯಶಸ್ಸು ಅವರಿಗೆ ಮತ್ತಷ್ಟು ಅವಕಾಶಗಳನ್ನು ತಂದಿತ್ತಿದೆ. ಮೋಹನ ಮಾಳವಿ ಅವರ ಇನ್ನೂ ಹೆಸರಿಡದ ರೀಮೇಕ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ಚಂದ್ರ' ಚಿತ್ರದ ವಿವಾದದ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ವಿವಾದಗಳ ಕುರಿತು ಅವರದು ಅಂತರ ಕಾಯ್ದುಕೊಳ್ಳುವ ನಿಲುವು.

ಚಿತ್ರರಂಗ ಕೆಟ್ಟದ್ದಕ್ಕೆ ಬಳಕೆಯಾಗಬಾರದು ಎಂಬ ಎಚ್ಚರದ ನಡಿಗೆ. ವಿವಾದಗಳು ಬದುಕಿನಲ್ಲಿ ಸಹಜ ಎಂಬ ಸತ್ಯ ಅವರ ಅರಿವಿಗೆ ಬಂದಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು `ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದಿರುವೆ. ಮುಂದೆ ಐವರು ಅಸಹಾಯಕರಿಗೆ ನೆರವಾಗುವ ಆಸೆ ಇದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.