ADVERTISEMENT

‘ಬೆಟ್ಟದ ದಾರಿ’ ಚಿತ್ರೀಕರಣ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

‘ಬೆಟ್ಟದ ದಾರಿ’ ಚಿತ್ರೀಕರಣ ಮುಕ್ತಾಯ
ಹಳ್ಳಿ ಮಕ್ಕಳ ಸಾಹಸದ ಕಥನ ಹೊಂದಿರುವ ‘ಬೆಟ್ಟದ ದಾರಿ’ ಚಿತ್ರೀಕರಣ ಶಿವಗಂಗೆ, ಚನ್ನಪಟ್ಟಣ, ವಿಜಯಪುರ ಹಾಗೂ ಉತ್ತನಾಳ್ ಸುತ್ತಮುತ್ತ ನಡೆದಿದ್ದು, ಈಗ ಮಾತಿನ ಭಾಗದ ಹಾಗೂ ಒಂದು ಹಾಡಿನ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನುಳಿದ ಮೂರು ಹಾಡುಗಳ ಚಿತ್ರೀಕರಣ ಏಪ್ರಿಲ್ ತಿಂಗಳಲ್ಲಿ ವಿಜಯಪುರದ ಸುತ್ತಮುತ್ತ ನಡೆಯಲಿದೆ. ಮಾ. ಚಂದ್ರು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.

ಚಂದ್ರಕಲಾ ಟಿ.ಆರ್. ಮತ್ತು ಮಂಜುನಾಥ ನಾಯಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ವೀರ್ ಸಮರ್ಥ ಸಂಗೀತ, ಡಾ.ವಿ. ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಹಾಗೂ ವಿಜಯ ಭರಮ ಸಾಗರ ಅವರ ಸಾಹಿತ್ಯ ಇದೆ. ಚಿಣ್ಣರಾದ ನಿಶಾಂತ್ ಟಿ. ರಾಥೋಡ್, ಅಂಕಿತಾ ನವನಿಧಿ, ಬೇಬಿ ಲಕ್ಷ್ಮಿಶ್ರೀ, ರಂಗನಾಥ್ ಯಾದವ್, ರೋಹಿತ್, ವಿಜ್ಞೇಶ, ಬೇಬಿ ಮಾನ್ಯತಾ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ, ಎಂ.ನಾಯಕ್, ಮನ್‍ದೀಪ್ ರಾಯ್, ರಮೇಶ್ ಭಟ್, ಉಮೇಶ್, ಮೈಸೂರ್ ಮಲ್ಲೇಶ್, ನಿಶಿತ ರಾಘವೇಂದ್ರ, ಗಂಗಾಧರ್ ಗೌಡ, ಆರ್.ನಾಗೇಶ್ ಮುಂತಾದವರು ತಾರಾಬಳಗದಲ್ಲಿ ಇದ್ದಾರೆ.

‘ಆರೋಹಣ’ ಚಿತ್ರೀಕರಣ ಮುಕ್ತಾಯ
ಸುಶಿಲ್ ಕುಮಾರ್ ನಿರ್ಮಿಸುತ್ತಿರುವ ‘ಆರೋಹಣ’ ಚಿತ್ರದ ‘ಸ್ವೀಕರಿಸು ಹೃದಯ, ಸ್ವೀಕರಿಸು ನನ್ನ ಹೃದಯದಲ್ಲಿ ಮತ್ತೆ ಮರುಕಳಿಸು, ಪ್ರೀತಿಯೆಂಬ ಕಣ್ಣಿಲ್ಲದ ಕುದುರೆಯ ಓಟವಿದು’ ಹಾಡಿನ ಚಿತ್ರೀಕರಣ ಕಳೆದ ವಾರ ಸಕಲೇಶಪುರ, ರಾಮನಗರ, ಬಿಡದಿ ಸುತ್ತಮುತ್ತ ನಡೆಯಿತು.

ADVERTISEMENT

ಸಿನಿಮಾಕ್ಕಾಗಿ ಒಟ್ಟು ನಾಲ್ಕು ಹಾಡುಗಳನ್ನು ಚಿತ್ರೀಕರಿಸುವುದರೊಂದಿಗೆ ಚಿತ್ರೀಕರಣ ಮುಕ್ತಾಯಗೊಂಡಿದ್ದು ಇದೀಗ ಚಿತ್ರದ ಪ್ರಥಮ ಪ್ರತಿ ಕೂಡ ಹೊರಬಂದಿದೆ. ಏಪ್ರಿಲ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಶ್ರೀಧರ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಕೆ.ವೈ. ಶಿವಪುತ್ರ ಛಾಯಾಗ್ರಹಣ, ಉತ್ತಮ್‍ರಾಜ್ ಆರ್.ಎನ್. ಹಾಗೂ ರಾಹುಲ್ ರಾಘವನ್ ಸಂಗೀತ, ಕೆ.ಕಲ್ಯಾಣ್, ಶ್ರೀಧರ್ ಶೆಟ್ಟಿ ಸಾಹಿತ್ಯ ಇದೆ.

ಸುಶಿಲ್‍ ಕುಮಾರ್, ರೋಹಿತ್ ಶೆಟ್ಟಿ, ಪ್ರೀತಿ, ಶ್ರೀಧರ್ ಶೆಟ್ಟಿ, ರುದ್ರೇಗೌಡ, ಉಮೇಶ್ ಪುಂಗ, ದೀಕ್ಷಾ, ಮೈತ್ರಿ, ರವಿ, ಮಣಿ, ಆಶಾ, ಜೂ. ಸಾಯಿಬಾಬಾ ಮತ್ತಿತರರು ತಾರಾಬಳಗದಲ್ಲಿ ಇದ್ದಾರೆ.

ತರುಣ್ ಟಾಕೀಸ್ ಮೂರನೇ ಚಿತ್ರ
ತರುಣ್ ಟಾಕೀಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸಾ ತರುಣ್ ನಿರ್ಮಿಸುತ್ತಿರುವ ‘ಪ್ರೊಡಕ್ಷನ್ ನಂ 3’ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ಈಚೆಗೆ ನಡೆಯಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಮಾನಸಾ ತರುಣ್ ಆರಂಭ ಫಲಕ ತೋರಿದರು.

ಅಲೆಮಾರಿ ಸಂತು ಎಂದೇ ಹೆಸರಾಗಿರುವ, ಯಶಸ್ವಿ ಚಿತ್ರ ‘ಕಾಲೇಜ್ ಕುಮಾರ್’ದ ನಿರ್ದೇಶಕ ಹರಿ ಸಂತು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ತರುಣ್ ಸುಧೀರ್ ಬರೆದಿದ್ದಾರೆ. ಗುರುಪ್ರಶಾಂತ್ ರೈ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ.

ಕಲಾ ನಿರ್ದೇಶಕ ಮೋಹನ್ ಬಿ. ಕೆರೆ ಅವರು ಈ ಚಿತ್ರಕ್ಕಾಗಿ ತಮ್ಮ ಸ್ಟುಡಿಯೋದಲ್ಲಿ ಒಂದು ತಿಂಗಳಿನಿಂದ ಬೃಹತ್ ಮನೆಯ ಸೆಟ್ ನಿರ್ಮಾಣ ಮಾಡುತ್ತಿದ್ದಾರೆ. ಶರಣ್, ರವಿಶಂಕರ್, ಸಾಧುಕೋಕಿಲ, ತಬಲನಾಣಿ, ಪ್ರಶಾಂತ್ ಸಿದ್ದಿ, ಅರಸು, ಕಲ್ಯಾಣಿ, ಅರುಣ ಬಾಲರಾಜ್, ಸುಂದರ್, ನಾಜರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರಕ್ಕೆ ಹಿನ್ನೆಲೆ ಸಂಗೀತ
ಜಿ.ಪಿ. ಪ್ರಕಾಶ್ ನಿರ್ಮಿಸುತ್ತಿರುವ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರೀಕರಣ ಮುಕ್ತಾಯವಾಗಿದೆ. ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ ಅಳವಡಿಸುವ ಕೆಲಸ ನಡೆಯುತ್ತಿದೆ. ಮೈಸೂರು, ಚಿಕ್ಕಮಗಳೂರು, ಉಡುಪಿ, ಬೆಂಗಳೂರು ಮುಂತಾದ ಕಡೆ ನಲವತ್ತೈದು ದಿನಗಳ ಚಿತ್ರೀಕರಣ ನಡೆದಿದೆ.

ದಿನದಲ್ಲಿ ಹೆಚ್ಚಿನ ಅವಧಿಯನ್ನು ಉದ್ಯೋಗದ ಸ್ಥಳದಲ್ಲೇ ಕಳೆಯುವ ಅಪ್ಪ-ಅಮ್ಮನ ಪ್ರೀತಿಯಿಂದ ವಂಚಿತಳಾದ ಹೆಣ್ಣುಮಗಳೊಬ್ಬಳ ಜೀವನ ಈ ಚಿತ್ರದ ಕಥಾವಸ್ತು. ವಿವಿನ್ ಸೂರ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೊಂದು ಮಹಿಳಾ ಪ್ರಧಾನ ಹಾಗೂ ಕೌಟುಂಬಿಕ ಚಿತ್ರ ಎನ್ನುವ ನಿರ್ದೇಶಕರು, ಚಿತ್ರದ ಪ್ರಥಮಪ್ರತಿ ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.

ಆಶಿಕ್ ಅರುಣ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶಂಕರ್ ಛಾಯಾಗ್ರಹಣವಿದೆ. ಚಿತ್ರದ ತಾರಾಬಳಗದಲ್ಲಿ ಭಾರತಿ ವಿಷ್ಣುವರ್ಧನ್, ಎಡಕಲ್ಲು ಗುಡ್ಡ ಚಂದ್ರಶೇಖರ್, ಶ್ರೀನಾಥ್, ಸುಮಿತ್ರ, ದತ್ತಣ್ಣ, ಮುಗೂರು ಸುರೇಶ್, ಚಿದಾನಂದ್, ಭವ್ಯಶ್ರೀ ರೈ, ಜ್ಯೋತಿ ರೈ, ವೀಣಾ ಸುಂದರ್, ಲಕ್ಷ್ಮೀ ಸಿದ್ದಯ್ಯ, ಪದ್ಮಜಾ ರಾವ್, ಸಿಹಿಕಹಿ ಚಂದ್ರು, ರವಿ ಭಟ್, ಉಷಾ ಭಂಡಾರಿ, ಧರ್ಮೇಂದ್ರ, ಸ್ವಾತಿ ಶರ್ಮ, ಪ್ರಗತಿ, ವೈಭವಿ, ಮೇಘನ, ನಕುಲ್ ಮುಂತಾದವರಿದ್ದಾರೆ.

‘ಶತಾಯ ಗತಾಯ’ ಪ್ರಥಮ ಪ್ರತಿ ಸಿದ್ಧ
‘ಶತಾಯ ಗತಾಯ’ ಚಿತ್ರಕ್ಕಾಗಿ ಸಂದೀಪ್ ಗೌಡ ಬರೆದಿರುವ ‘ಹುಡುಗರ ಎದೆಮೇಲೆ ಹುಡುಗೀರ ತಿರುಬೋಕಿ ಶೋಕಿ. ಪ್ರೀತಿಪ್ರೇಮ ಎಲ್ಲಾ ಓಳು ಬರೀ ಗೋಳು ಬಿಟ್ಟಾಕಿ’ ಎಂಬ ಹಾಡನ್ನು ಖ್ಯಾತ ಗಾಯಕ ವಿಜಯ ಪ್ರಕಾಶ್ ಮುಂಬೈನ ತಮ್ಮ ಸ್ಟುಡಿಯೊದಲ್ಲಿ ಹಾಡಿದ್ದಾರೆ. ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು, ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಸಂದೀಪ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಶಬರೀಶ್ ಅವರ ಛಾಯಾಗ್ರಹಣವಿದೆ. ರಘುನಂದನ್ ಜೈನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘುರಾಮಪ್ಪ, ಸೋನುಗೌಡ, ಸಂದೀಪ್ ಗೌಡ, ಎಂ.ಎಸ್.ಉಮೇಶ್, ಗಡ್ಡಪ್ಪ, ಮಂಜುಳಾ ರೆಡ್ಡಿ, ಪ್ರದೀಪ್, ದಿನೇಶ್ ಜೋಗಿ, ಮಾಸ್ಟರ್‌ ಮಧುಸೂಧನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸೆನ್ಸಾರ್ ಮುಂದೆ ‘ವರ್ತಮಾನ’
ಮನು ಬಿಲ್ಲೆಮನೆ ಹಾಗೂ ಹೇಮಾವತಿ ಟಿ.ಸಿ. ನಿರ್ಮಿಸಿರುವ ‘ವರ್ತಮಾನ’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಲಿದೆ.
***
ನಾರಾಯಣ್ ಆಡಿಷನ್!
ಎಸ್. ನಾರಾಯಣ್ ನಿರ್ದೇಶಿಸುತ್ತಿರುವ ಹೊಸ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದ್ದು, ನಾಯಕಿಯ ಪಾತ್ರಕ್ಕೆ ಆಡಿಷನ್ ನಡೆಸಲು ತಂಡ ಮುಂದಾಗಿದೆ. ನಾರಾಯಣ್ ಅವರು ಹೊಸ ಪ್ರತಿಭೆಗೆ ಅವಕಾಶ ಕೊಡಲು ತೀರ್ಮಾನಿಸಿದ್ದಾರಂತೆ. ಆಡಿಷನ್‌ ಪ್ರಕ್ರಿಯೆ ಶುಕ್ರವಾರ (ಮಾರ್ಚ್ 9) ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಆಡಿಷನ್‍ನಲ್ಲಿ ಪಾಲ್ಗೊಳ್ಳುವ ಯುವತಿಯರು ನಟನೆಯ ಬಗ್ಗೆ ಪ್ರಾಥಮಿಕ ಜ್ಞಾನ ಹಾಗೂ ಅದರ ಬಗ್ಗೆ ಪ್ರೀತಿ ಹೊಂದಿರಲೇಬೇಕು ಎಂದು ನಾರಾಯಣ್ ಹೇಳಿದ್ದಾರೆ. ಹದಿನೆಂಟರಿಂದ ಇಪ್ಪತೊಂದರೊಳಗಿನ ವಯಸ್ಸಿನ ಆಸಕ್ತ ಯುವತಿಯರು ಇದರಲ್ಲಿ ಭಾಗಿಯಾಗಬಹುದು. ಆಡಿಷನ್‌ಗೆ ಬರುವಾಗ ಇತ್ತೀಚಿನ ಎರಡು ಭಾವಚಿತ್ರಗಳನ್ನು ತರಬೇಕು. ಆಡಿಷನ್ ನಡೆಯುವ ಸ್ಥಳ: ನಂ.3, ಶ್ರೀಹರ್ಷ, 17ನೇ ಕ್ರಾಸ್, ಮಲ್ಲೇಶ್ವರ, ಬೆಂಗಳೂರು.
ಸಂಪರ್ಕ ಸಂಖ್ಯೆ: 8147 0573 35.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.