ADVERTISEMENT

‘ಮ್ಯಾಗಿ’ ಅವತಾರದಲ್ಲಿ ವಾಗ್ಲೆ

ಪದ್ಮನಾಭ ಭಟ್ಟ‌
Published 14 ಜೂನ್ 2018, 12:21 IST
Last Updated 14 ಜೂನ್ 2018, 12:21 IST

ಖಡಕ್ ನೋಟ. ಕಿವಿ ಅರ್ಧ ಮುಚ್ಚುವ ಹಾಗೆ ಮುಚ್ಚುವಂತೆ ಕತ್ತರಿಸಿದ ಕೂದಲು. ಕಿಡಿಕಾರುವ ಕಣ್ಣೋಟ. ಕೈಯಲ್ಲಿ ಹೊಗೆಯುಗುಳುವ ಸಿಗರೇಟು...

ಹೌದು. ಸುಕೃತಾ ವಾಗ್ಲೆ ಬದಲಾಗಿದ್ದಾರೆ. ಈ ಎಲ್ಲ ನವೀನ ನೋಟದ ಆಟ ಅವರ ಹೊಸ ಸಿನಿಮಾ ‘ಮೇಘ ಅಲಿಯಾಸ್ ಮ್ಯಾಗಿ’ ಚಿತ್ರಕ್ಕಾಗಿ. ಈ ಬದಲಾವಣೆ ಬಗ್ಗೆ ಕೇಳಿದರೆ ಅವರು ‘ಬದಲಾಗಿರುವುದು ನಿಜ. ಆದರೆ, ಬದಲಾವಣೆ ಎನ್ನುವುದು ನನಗೆ ಹೊಸತೇನೂ ಅಲ್ಲ. ನನ್ನ ಮೊದಲ ಸಿನಿಮಾದಿಂದ ಇಲ್ಲಿಯವರೆಗೆ ಪ್ರತಿ ಪಾತ್ರದಲ್ಲಿಯೂ ನಾನು ಬದಲಾಗಿದ್ದೇನೆ. ಭಿನ್ನವಾಗಿದ್ದೇನೆ. ಹಾಗಾಗಿ, ಈಗಿನ ಬದಲಾವಣೆ ಅದಕ್ಕೊಂದು ಹೊಸ ಸೇರ್ಪಡೆ ಅಷ್ಟೆ’ ಎನ್ನುತ್ತಾರೆ.

‘ಜಟ್ಟ’ ಸಿನಿಮಾದಿಂದ ಶುರುವಾದ ಅವರ ಸಿನಿಪಯಣವನ್ನು ಇತ್ತೀಚೆಗಿನ ‘ದಯವಿಟ್ಟು ಗಮನಿಸಿ’ ಚಿತ್ರದವರೆಗೆ ಗಮನಿಸಿದರೆ ಅವರ ಮಾತು ಹುಸಿಯಲ್ಲ ಎನ್ನುವುದು ತಿಳಿಯುತ್ತದೆ. ಇದುವರೆಗೆ ಅವರು ನಟಿಸಿದ ಚಿತ್ರಗಳನ್ನು ಕೈಬೆರಳುಗಳನೆಲ್ಲ ಮಡಿಸಲಾಗುವುದಿಲ್ಲ. ಆದರೆ, ಅವುಗಳಲ್ಲಿನ ವೈವಿಧ್ಯ ಮಾತ್ರ ಕಣ್ಣಿಗೆ ಎದ್ದು ಕಾಣುತ್ತದೆ.

ADVERTISEMENT

‘ಬಂದ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳುತ್ತ ಹೋಗಿದ್ದರೆ ನಾನೂ ಇದುವರೆಗೆ ಕನಿಷ್ಠ ಇಪ್ಪತ್ತೈದು ಚಿತ್ರಗಳಲ್ಲಿ ನಟಿಸಿರುತ್ತಿದ್ದೆ. ಆದರೆ, ನಾನು ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಳ್ಳುವವಳಲ್ಲ. ಒಂದು ಪಾತ್ರದ ಛಾಯೆ ಇನ್ನೊಂದರಲ್ಲಿ ಚೂರೂ ಉಳಿಯದ ಹಾಗೆ ಎಚ್ಚರ ವಹಿಸುತ್ತೇನೆ. ಹಾಗಾಗಿಯೇ ನನಗೊಂದು ಇಮೇಜ್‌ ಅನ್ನುವುದು ಸೃಷ್ಟಿಕೊಂಡಿಲ್ಲ. ಪ್ರತಿಸಲವೂ ನನ್ನ ಹಳೆಯ ಪಾತ್ರದ ಇಮೇಜ್ ಅನ್ನು ನಾನೇ ಒಡೆಯುತ್ತೇನೆ. ಹಾಗೆ ಮಾಡುವುದರ ಮೂಲಕವೇ ಪ್ರತಿ ಪಾತ್ರದಲ್ಲಿಯೂ ನನ್ನದೇ ಆದ ವಿಭಿನ್ನ ಗುರುತೊಂದನ್ನು ಉಳಿಸಲು ಸಾಧ್ಯವಾಗಿದೆ. ಇದು ಬರೀ ಪಾತ್ರಗಳ ಆಯ್ಕೆಗೆ ಮಾತ್ರ ಸಂಬಂಧಿಸಿದ್ದಲ್ಲ. ಲುಕ್, ಕಾಸ್ಟ್ಯೂಮ್, ಸಂಭಾಷಣೆ, ಪಾತ್ರವನ್ನು ಕಟ್ಟುವ ರೀತಿ, ಡಬ್ಬಿಂಗ್, ಭಾಷೆಯ ಬಳಕೆ ಎಲ್ಲದೂ ಸೇರಿ ಆ್ಯಕ್ಟಿಂಗ್ ಆಗುತ್ತದೆ. ಆದ್ದರಿಂದ ಆ ಎಲ್ಲದರಲ್ಲಿಯೂ ನಾನು ಭಿನ್ನತೆ ಕಾಯ್ದುಕೊಳ್ಳುತ್ತೇನೆ’ ಎಂದು ಸುದೀರ್ಘವಾಗಿಯೇ ಯಾರೂ ತುಳಿಯದ ಹಾದಿಯಲ್ಲಿ ನಡೆಯುವ ತಮ್ಮ ಹಂಬಲವನ್ನು ವ್ಯಕ್ತಪಡಿಸುತ್ತಾರೆ ಸುಕೃತಾ.

ಹಾಗೆಂದು ತನ್ನ ಆಯ್ಕೆ ಎಲ್ಲ ಬಾರಿಯೂ ಸರಿಯೇ ಆಗಿರುತ್ತದೆ ಎಂಬ ಅಹಂಕಾರವೂ ಅವರಿಗಿಲ್ಲ. ‘ಕೆಲವು ಸಲ ನಾನು ಆಯ್ಕೆಯಲ್ಲಿ ಎಡವಿರಬಹುದು. ನಾನು ನಟಿಸಿದ ಸಿನಿಮಾ ಸೋತಿರಬಹುದು. ಆದರೆ, ಅಂಥ ಸಿನಿಮಾಗಳಲ್ಲಿಯೂ ನನ್ನ ಪಾತ್ರವನ್ನು ನಾನು ಸಮರ್ಥವಾಗಿಯೇ ನಿಭಾಯಿಸಿದ್ದೇನೆ. ನ್ಯಾಯ ಒದಗಿಸಿದ್ದೇನೆ ಎಂಬ ತೃಪ್ತಿ ಇದೆ’ ಎಂದು ವಿನಯದಿಂದಲೇ ಹೇಳಿಕೊಳ್ಳುತ್ತಾರೆ ಅವರು.

ಇಷ್ಟು ವರ್ಷಗಳ ಸಿನಿಮಾ ಪ್ರಯಾಣ ಅವರ ವ್ಯಕ್ತಿತ್ವವನ್ನೂ, ಅರಿವಿನ ಗಡಿರೇಖೆಗಳನ್ನೂ ಸಾಕಷ್ಟು ವಿಸ್ತರಿಸಿದೆಯಂತೆ. ‘ನಾನು ಚಿತ್ರರಂಗಕ್ಕೆ ಬಂದಾಗ ನಾಯಕಿಯರಿಗೆ ಹೆಚ್ಚಾಗಿ ಸಿನಿಮ್ಯಾಟಿಕ್ ರೀತಿಯ ಪಾತ್ರಗಳೇ ಇರುತ್ತಿದ್ದವು. ಆದರೆ, ಈಗ ರಿಯಲಿಸ್ಟಿಕ್ ಪಾತ್ರಗಳೇ ಹೆಚ್ಚಾಗಿ ಬರುತ್ತಿವೆ’ ಎಂದು ಚಿತ್ರರಂಗದಲ್ಲಿ ಆದ ಬದಲಾವಣೆಯನ್ನೂ ಗುರ್ತಿಸುತ್ತಾರೆ.

ಈ ವಾರ ಬಿಡುಗಡೆಯಾಗುತ್ತಿರುವ ‘ಮೇಘ ಅಲಿಯಾಸ್ ಮ್ಯಾಗಿ’ ಚಿತ್ರವೂ ತಮ್ಮ ವೃತ್ತಿಬದುಕಿನಲ್ಲಿ ಮತ್ತೊಂದು ಮಹತ್ವದ ಸಿನಿಮಾ ಆಗುತ್ತದೆ ಎಂಬ ತುಂಬು ವಿಶ್ವಾಸದಲ್ಲಿ ಸುಕೃತಾ ಇದ್ದಾರೆ.

‘ಈ ಚಿತ್ರದಲ್ಲಿ ನನ್ನದು ಖಳನಾಯಕಿ ಪಾತ್ರ. ಈ ಸಿನಿಮಾ ಖಳನಾಯಕಿಯದೇ ಕಥೆ. ನಾನು ನೋಡಿರುವ ಹಾಗೆ ಇಂಥ ಕಾನ್ಸೆಪ್ಟ್‌ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಬಂದಿಲ್ಲ. ಖಳನಾಗಿರುವ ನಾಯಕನೊಬ್ಬ ಒಳ್ಳೆಯವನಾಗಿ ಬದಲಾಗುವ ಕಥೆಗಳು ಸಾಕಷ್ಟು ಬಂದಿವೆ. ಆದರೆ, ಅಂಥದ್ದೇ ಛಾಯೆ ಇರುವ ನಾಯಕಿಯ ಕಥೆ ಬಂದಿಲ್ಲ. ಆದ್ದರಿಂದ ವಿಶಾಲ್ ಪುಟ್ಟಣ್ಣ ಅವರು ಈ ಚಿತ್ರದ ಕಥೆ ಹೇಳಿದಾಗಲೇ ಖುಷಿಯಿಂದ ಒಪ್ಪಿಕೊಂಡೆ’ ಎನ್ನುವ ಸುಕೃತಾ ಈ ಚಿತ್ರಕ್ಕಾಗಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಬೈಕ್ ಓಡಿಸಿದ್ದಾರೆ. ಸಿಗರೇಟು ಸೇದಲು ಕಲಿತಿದ್ದಾರೆ.‌

‘ಈಗ ಚೆನ್ನಾಗಿ ಸಿಗರೇಟು ಸೇದಲು ಕಲಿತಿದ್ದೀರಾ?’ ಎಂದು ಕೀಟಲೆಯ ಪ್ರಶ್ನೆ ಮುಂದಿಟ್ಟರೆ ಅವರು ‘ಸಿನಿಮಾಕ್ಕಾಗಿ ಚೆನ್ನಾಗಿಯೇ ಸೇದಲು ಕಲಿತೆ. ಈಗ ಬಿಟ್ಟಿದ್ದೂ ಆಗಿದೆ’ ಎಂದು ನಗುತ್ತಾರೆ. ಏಳನೇ ತರಗತಿಯಿಂದ ಬೈಕ್‌ ಓಡಿಸುತ್ತಿದ್ದುದರಿಂದ ಈ ಚಿತ್ರದಲ್ಲಿ ಬೈಕ್‌ ಓಡಿಸುವುದು ಅವರಿಗೆ ಅಷ್ಟೊಂದು ಕಷ್ಟ ಅನಿಸಿಲ್ಲ. ಆದರೆ ದೃಶ್ಯವೊಂದರಲ್ಲಿ ನಡೆದುಕೊಂಡು ಹೋಗಲೇ ಭಯವಾಗುವಂಥ ತೂಗುಸೇತುವೆಯ ಮೇಲೆ ಬೈಕ್‌ ಓಡಿಸುವಾಗ ಮಾತ್ರ ಭಯವಾಗಿತ್ತಂತೆ. ‘ಆದರೆ ಆ ಭಯ ಒಳ್ಳೆಯ ಮಜವನ್ನೂ ಕೊಟ್ಟಿತು’ ಎನ್ನುತ್ತಾರೆ ಅವರು.

ಈಗ ಮಾತುಕತೆಯ ಹಂತದಲ್ಲಿರುವ ತಮ್ಮ ಮುಂದಿನ ಸಿನಿಮಾದಲ್ಲಿ ಸುಕೃತಾ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನಲ್ಲಿಯೂ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದೆಯಂತೆ.

‘ಬರ್ಫಿ’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ, ‘ಪಾ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿರುವಂಥ ಪಾತ್ರಗಳಲ್ಲಿ ನಟಿಸುವ ಆಸೆ ಸುಕೃತಾ ಅವರಿಗಿದೆ. ಆದಷ್ಟು ಬೇಗ ಅಂಥದ್ದೊಂದು ಪಾತ್ರ, ಅದೂ ಕನ್ನಡ ಸಿನಿಮಾದಲ್ಲಿಯೇ ತಮಗೆ ಸಿಗಲಿ ಎಂದು ಅವರು ಬಯಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.