ಮಧ್ಯಾಹ್ನವೇ ಇರುಳಾದರೆ ಏನು ಗತಿ? ಅಂಥ ಸ್ಥಿತಿಯನ್ನು ನಿರ್ದೇಶಕ ನಂದಕಿಶೋರ್ ತಂದಿದ್ದರು. ಬೆಂಗಳೂರಿನ ಹೃದಯಭಾಗದ ಮನೆಯೊಂದರಲ್ಲಿ ಸೂರ್ಯ ನಡುನೆತ್ತಿಗೆ ಏರಿದ್ದಾಗಲೇ ಕತ್ತಲು ಆವರಿಸಿತ್ತು. ದಂಪತಿಯ ಸರಸ ಸಲ್ಲಾಪಕ್ಕೆ ಪಲ್ಲಂಗ ಸಿದ್ಧವಾಗಿತ್ತು. ನಾಯಕನಿಗೆ ಹುರುಪೋ ಹುರುಪು.
ಆದರೆ ಚಿಕ್ಕಪ್ಪನಿಂದ ಹಲವು ಅಡೆತಡೆಗಳು... ನೋಡುಗರಿಗೆ ನಗು ತಡೆಯಲಾಗುತ್ತಿಲ್ಲ. `ಕಟ್ ಇಟ್...' ಅತ್ತಲಿಂದ ದೊಡ್ಡ ಸ್ವರ ಬರುತ್ತಿದ್ದಂತೆ ಅಣೆಕಟ್ಟೆಯಿಂದ ಒಮ್ಮೆಗೇ ನೀರು ನುಗ್ಗುವಂತೆ ನಗು ಅಲೆ ಅಲೆಯಾಗಿ ತೇಲಿ ಬಂತು.
ಪತ್ರಿಕಾಗೋಷ್ಠಿಯಲ್ಲಿ ಎರಡೂ ಬೆರಳೆತ್ತಿ ವಿಜಯದ ಸಂಕೇತವನ್ನು ತೋರಿದರು ನಟ ಶರಣ್. `ಇದು ಅನಧಿಕೃತ ವಿಜಯವೂ ಹೌದು. ನಾಯಕನಾಗಿ ಎರಡನೇ ಚಿತ್ರವೂ ಹೌದು' ಎಂದರು. ಜತೆಗೆ ವಿಕ್ಟರಿ ಎಂಬ ಹೆಸರಿಡುವ ಸುಳಿವನ್ನೂ ಬಿಟ್ಟುಕೊಟ್ಟರು. ಸದ್ಯಕ್ಕಂತೂ ವಿಜಯದ ಸಂಕೇತವೇ ಚಿತ್ರದ ಶೀರ್ಷಿಕೆ.
ಅರ್ಧ ಶತಕ ಬಾರಿಸಿದ್ದ `ರ್‍ಯಾಂಬೋ' 2012ರ ಯಶಸ್ವಿ ಚಿತ್ರಗಳಲ್ಲಿ ಒಂದು. ಆ ಗೆಲುವೇ ಹೊಸ ಚಿತ್ರಕ್ಕೂ ಮುನ್ನುಡಿ ಬರೆದಿದೆ.
ರ್‍ಯಾಂಬೋದಂತೆ ಹಾಸ್ಯಪ್ರಧಾನ ಚಿತ್ರವಾದರೂ ಇಲ್ಲಿ ಭಿನ್ನ ಯತ್ನ ನಡೆದಿದೆಯಂತೆ. ಪ್ರೇಕ್ಷಕರನ್ನು ಕೌತುಕದ ಆಸನ ಏರುವಂತೆ ಮಾಡುವ ದೃಶ್ಯಗಳೂ ಇವೆಯಂತೆ.
ದುಡುಕಿ ನಿರ್ಧಾರ ಕೈಗೊಂಡರೆ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ತಿರುಳು. ರ್‍ಯಾಂಬೋ ಚಿತ್ರದಲ್ಲಿ ಹಂದಿ ನಗಿಸಲು ಇತ್ತು. ಇಲ್ಲೇನಿದೆ ಎಂಬ ಪ್ರಶ್ನೆ ಪತ್ರಕರ್ತರ ಬಳಗದಿಂದ ತೂರಿಬಂತು. `ನಾನೇ ಇರುವೆನಲ್ಲಾ!' ಇದು ಶರಣ್ ಪ್ರತ್ಯುತ್ತರ. ಚಿತ್ರೀಕರಣದಲ್ಲಿ ಎದ್ದಿದ್ದ ನಗುವಿನ ಅಲೆ ಮರುಕಳಿಸಿತು.
ರ್‍ಯಾಂಬೋದ ಯಶಸ್ಸಿಗೆ ಕಾರಣರಾದವರಲ್ಲಿ ನಟ ತಬಲನಾಣಿ ಕೂಡ ಒಬ್ಬರು. ಆ ಮಹತ್ವದ ಅಂಶ ಅವರನ್ನು ಈ ಚಿತ್ರಕ್ಕೂ ಬಣ್ಣ ಹಚ್ಚುವಂತೆ ಮಾಡಿದೆ. ರ್‍ಯಾಂಬೋದಲ್ಲಿ ಸೋದರಮಾವನಾಗಿದ್ದ ಅವರು ಇಲ್ಲಿ ನಾಮ ಧರಿಸಿದ ಚಿಕ್ಕಪ್ಪ.
ಅದಕ್ಕಾಗಿ ಕೃತಕ ಮೀಸೆಗೆ ಶರಣಾಗಿದ್ದಾರೆ. ಚಿತ್ರದ ನಾಯಕಿ ಅಸ್ಮಿತಾ ಸೂದ್. ಹಿಮಾಚಲ ಪ್ರದೇಶದ ಈ ನಟಿ ತೆಲುಗಿನ `ಬ್ರಹ್ಮಗಾಡಿ ಕಥಾ' ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದವರು. ತೆಲುಗಿನಲ್ಲಿ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿರುವ ಇವರು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.
ನಟ ಸೋನು ಸೂದ್ ಅವರ ಸಂಬಂಧಿಯೇ ಎಂಬ ಪ್ರಶ್ನೆಗೆ ಇಲ್ಲ ಎಂಬ ಉತ್ತರ ಅವರಿಂದ. ಸಾಯಿಕುಮಾರ್ ಸಹೋದರ ರವಿಶಂಕರ್, ಸಾಧು ಕೋಕಿಲ, `ಕುರಿಗಳು' ಪ್ರತಾಪ್, ಅವಿನಾಶ್, ಗಿರಿಜಾ ಲೋಕೇಶ್, ರಮೇಶ್ ಭಟ್ ಮತ್ತಿತರರ ದೊಡ್ಡ ತಾರಾಗಣವೇ ಚಿತ್ರಕ್ಕಾಗಿ ದುಡಿಯುತ್ತಿದೆ. ಶೇ 50ರಷ್ಟು ಮಾತಿನ ಭಾಗಗಳ ಚಿತ್ರೀಕರಣ ಪೂರ್ಣಗೊಂಡಿದೆ.
`ರೌಡಿ ಅಳಿಯ' ಚಿತ್ರದ ಬಳಿಕ ನಿರ್ಮಾಣಕ್ಕೆ ಹಿಂಜರಿಯುತ್ತಿದ್ದ ನಿರ್ಮಾಪಕ ಹಾಗೂ ಆನಂದ್ ಆಡಿಯೋದ ಮಾಲೀಕ ಮೋಹನ್ ಛಾಬ್ರಿಯಾ ಕತೆಯನ್ನು ಒಪ್ಪಿ ಹಸಿರು ನಿಶಾನೆ ತೋರಿದ್ದಾರೆ. ಮತ್ತೆ ಮತ್ತೆ ಪ್ರೇಕ್ಷಕರು ನೋಡುವಂಥ ಚಿತ್ರ ಇದಾದ್ದರಿಂದ ಹೂಡಿದ ಬಂಡವಾಳ ವಾಪಸ್ ಬರಲಿದೆ ಎಂಬ ನಂಬಿಕೆ ಅವರದು.
ಇದುವರೆಗೆ ಆಕ್ಷನ್ ಚಿತ್ರಗಳಿಗೆ ಮಾತ್ರ ಕ್ಯಾಮೆರಾ ಆಡಿಸಿದ್ದ ಛಾಯಾಗ್ರಾಹಕ ಶೇಖರ್ ಚಂದ್ರು ಈ ಚಿತ್ರದ ಮೂಲಕ ಹಾಸ್ಯ ರಸಾಯನಕ್ಕೆ `ಕಣ್ಣಾಗಲಿದ್ದಾರೆ'. ತಾಂತ್ರಿಕ ವರ್ಗದಲ್ಲಂತೂ `ರ್‍ಯಾಂಬೋ'ದ ಸದಸ್ಯರು ತುಂಬಿ ತುಳುಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.