ADVERTISEMENT

ಸತ್ಯಾನ್ವೇಷಕನ ಕೃತಿಗಳ ಸಿಂಹಾವಲೋಕನ

ಜಿ.ಎಸ್.ಭಾಸ್ಕರ್
Published 2 ಫೆಬ್ರುವರಿ 2017, 19:30 IST
Last Updated 2 ಫೆಬ್ರುವರಿ 2017, 19:30 IST
ಸತ್ಯಾನ್ವೇಷಕನ ಕೃತಿಗಳ ಸಿಂಹಾವಲೋಕನ
ಸತ್ಯಾನ್ವೇಷಕನ ಕೃತಿಗಳ ಸಿಂಹಾವಲೋಕನ   

ಜಾಗತಿಕ ಮಟ್ಟದಲ್ಲಿ ಚಲನಚಿತ್ರ–ಜಗತ್ತು ಕಂಡ ಅಸಾಮಾನ್ಯ ಪ್ರತಿಭೆಗಳಲ್ಲಿ ಸೇರ್ಪಡೆಯಾಗುವ ಹೆಸರು ಅಮೆರಿಕೆಯ ಹ್ಯಾಸ್ಕೆಲ್ ವೆಕ್ಸ್‌ಲರ್ (1922–2015) ಅವರದು. ಷಿಕಾಗೋದ ಆಗರ್ಭ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿ ತನ್ನ ಹೃದಯಶ್ರೀಮಂತಿಕೆ ಹಾಗೂ ಮಾನವೀಯ ಕಾಳಜಿಯಿಂದಾಗಿ ವಿಶ್ವದ ಗಮನವನ್ನು ತನ್ನತ್ತ ಸೆಳೆದ ಮಹಾನುಭಾವ ಈತ.

ಎರಡನೇ ಜಾಗತಿಕ ಸಮರದಲ್ಲಿ ಮಿತ್ರರಾಷ್ಟ್ರಗಳ ನೌಕಾಪಡೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾಗ ಆತನ ಹಡಗು ಜರ್ಮನ್ ಸಬ್‌ಮೆರೀನ್‌ನ ದಾಳಿಗೆ ತುತ್ತಾಯಿತು. ಸಂಗಡಿಗರನ್ನು ಸಂರಕ್ಷಿಸಿದ ನಂತರ ಕಟ್ಟಕಡೆಯವನಾಗಿ ಬದುಕುಳಿದ ವೆಕ್ಸ್‌ಲರ್ ಜೀವರಕ್ಷಕ ದೋಣಿಯೊಂದಕ್ಕೆ ಹಾರಿಕೊಂಡ. ಆ ದೋಣಿಯು ಅಲೆಗಳ ಮೇಲೆ ತೇಲುತ್ತಾ ಸಾಗುತ್ತಿದ್ದಾಗ ಆಪ್ತಮಿತ್ರನಾಗಿದ್ದ ಸಹ ಸೈನಿಕನೋರ್ವನು ತನ್ನ ಮಡಿಲಲ್ಲೇ ಅಸು ನೀಗಿದ್ದನ್ನು ಕಂಡೂ ಸ್ಥೈರ್ಯಗೆಡದ ಧೀಮಂತನಾತ. ಸುಮಾರು ಇಪ್ಪತ್ತು ದಿನಗಳ ಕಾಲ ಅನ್ನಾಹಾರಗಳಿಲ್ಲದೆ, ದಿಕ್ಕು–ದೆಸೆ ತಿಳಿಯದೆ ಕಡಲಲ್ಲಿ ಪಯಣಿಸುವ ಸಾಹಸ ಮಾಡಿ ಕಡೆಗೂ ಬದುಕುಳಿದ ವೆಕ್ಸ್‌ಲರ್‌ನಿಗೆ ಆಗಿನ್ನೂ ಕೇವಲ ಇಪ್ಪತ್ತೊಂದರ ಹರೆಯ.

ಅಮೆರಿಕೆಯ ಅಧ್ಯಕ್ಷರಾಗಿದ್ದ ರೂಸ್‌ವೆಲ್ಟ್ ಆತನ ಶೌರ್ಯ–ಸಾಹಸಗಳನ್ನು ಕೊಂಡಾಡಿದರಾದರೂ ಅದರಿಂದ ಆತನ ಮನವು ಪುಳಕಿತವಾಗಲಿಲ್ಲ. ಯಾವುದೇ ಕದನವು ತನ್ನೊಟ್ಟಿಗೆ ಹೊತ್ತು ತರುವ ಅಪಾರ ಕಷ್ಟ–ನಷ್ಟಗಳನ್ನು ಕಣ್ಣಾರೆ ಕಂಡು ಅನುಭವಿಸಿದ್ದ ವೆಕ್ಸ್‌ಲರ್, ಜೀವನವಿಡೀ ಸತ್ಯ–ಹಿಂಸೆಗಳ ಪರಿಚಾರಕನಾಗಿ ಮಾನವತೆಯನ್ನು ಆರಾಧಿಸಿದನು.

ಕದನವೆನ್ನುವುದು ದಾನವತೆಯ ಪ್ರತೀಕವೆನ್ನುವುದು ಆತನ ಪ್ರತಿಪಾದನೆಯಾಗಿತ್ತು. ಜಾಗತಿಕ ಸ್ತರದಲ್ಲಾಗುವ ಎಲ್ಲ ಸಂಘರ್ಷಗಳನ್ನೂ ಸ್ವಾರ್ಥಪ್ರೇರಿತ ರಾಜಕಾರಣ ಮತ್ತು ಬಂಡವಾಳಶಾಹಿಯ ಅನೈತಿಕ ದಾಂಪತ್ಯದ ಫಲವೆಂದೇ ಬಣ್ಣಿಸುತ್ತಿದ್ದನು. ಶ್ವೇತಭವನದ ಅಧಿಕಾರಶಾಹಿ ಹಾಗೂ ಶಸ್ತ್ರಾಸ್ತ್ರಗಳ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಬಂಡವಾಳಶಾಹಿಯ ನಡುವಿನ ಕೊಡು–ಕೊಳ್ಳುವಿಕೆಯನ್ನು ನಿಕರಾಗುವಾ, ವಿಯೆಟ್ನಾಮ್‌ಗಳ ದುರಂತ ಕಥನಕ್ಕಷ್ಟೇ ಅಲ್ಲದೆ ಐಸಿಸ್ (ISIS) ಭಯೋತ್ಪಾದಕರ ಆವಿರ್ಭಾವಕ್ಕೂ ನೇರವಾಗಿ ಹೊಣೆಯಾಗಿಸಲು ವೆಕ್ಸ್‌ಲರ್ ಹಿಂಜರಿಯುತ್ತಿರಲಿಲ್ಲ. 9/11 ದಾಳಿಯ ನಂತರದಲ್ಲಿ ಯುದ್ಧಸಾಮಗ್ರಿಗಳನ್ನು ಉತ್ಪಾದಿಸುವ ಕಂಪನಿಗಳ ಶೇರುಗಳ ಬೆಲೆಯಲ್ಲಿ ಕಂಡುಬಂದ ಅಗಾಧ ಪ್ರಮಾಣದ ಏರಿಕೆಯನ್ನು ಆತನು ತನ್ನ ಮಾತಿಗೆ ಪೂರಕವಾಗಿ ಉದಾಹರಿಸುತ್ತಿದ್ದನು. ಆತನ ಎಡಪಂಥೀಯ ವಿಚಾರಧಾಟಿಯನ್ನು ಗಮನಿಸಿದ್ದ ಅಮೆರಿಕೆಯ ಬೇಹುಗಾರಿಕಾ ಸಂಸ್ಥೆಯಾದ ‘ಎಫ್‌ಬಿಐ’ ವೆಕ್ಸ್‌ಲರ್‌ನನ್ನು ತನ್ನ ಕಪ್ಪುಪಟ್ಟಿಯಲ್ಲಿಟ್ಟಿತ್ತು!

ಸತ್ಯ ಮತ್ತು ಅಹಿಂಸೆಯ ಪ್ರತಿಪಾದನೆಗೆ ಕಾರ್ಯತಃ ತಾನು ನೀಡಿದ ಪ್ರಾಧಾನ್ಯತೆಯಿಂದಾಗಿ ವೆಕ್ಸ್‌ಲರ್ ತನಗರಿಯದಂತೆಯೇ ಗಾಂಧೀಜಿಯ ತತ್ತ್ವಗಳಿಗೆ ಬದ್ಧನಾಗಿದ್ದನು. ‘Who is afraid of Virginia Woolf’ ಚಿತ್ರದ ಛಾಯಾಗ್ರಹಣಕ್ಕಾಗಿ 1966ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡ ಸಂದರ್ಭದಲ್ಲಿ, ಪ್ರಶಸ್ತಿ ಪ್ರದಾನ ಸಮಾರಂಭದ ಇತಿಹಾಸದಲ್ಲೇ ಅತಿ ಪುಟ್ಟ ಭಾಷಣವನ್ನು ಮಾಡಿದ ವೆಕ್ಸ್‌ಲರ್, ‘ನಾವು ನಮ್ಮ ಕಲೆಗಾರಿಕೆಯನ್ನು ಶಾಂತಿ ಮತ್ತು ಸಹಬಾಳ್ವೆಯ ಉಜ್ಜೀವನ ಮತ್ತು ಪ್ರಸಾರಕ್ಕಾಗಿ ಹೆಚ್ಚುಹೆಚ್ಚಾಗಿ ಬಳಸಬೇಕೆಂದು ಆಶಿಸುತ್ತೇನೆ’ ಎಂದು ನುಡಿದಿದ್ದನು. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಾಗಿ ಕೇವಲ ಛಾಯಾಗ್ರಹಣ ವಿಭಾಗದಲ್ಲಿಯೇ ಐದು ಬಾರಿ ನಾಮಾಂಕಿತನಾಗಿದ್ದ ವೆಕ್ಸ್‌ಲರ್, ಯಾವುದೇ ಹೊಸ ತಾಂತ್ರಿಕ ಅನ್ವೇಷಣೆಯನ್ನೂ ಕಲಾತ್ಮಕತೆಗೆ ಪೂರಕವಾಗುವಂತೆ ಬಳಸಿಕೊಳ್ಳುವಲ್ಲಿ ಹೆಸರುವಾಸಿಯಾಗಿದ್ದ.

ವೆಕ್ಸ್‌ಲರ್‌ಗೆ ಆಸ್ಕರ್ ಪ್ರಶಸ್ತಿಯನ್ನು ತಂದುಕೊಟ್ಟ ಮತ್ತೊಂದು ಚಿತ್ರ ‘Bound for Glory’. ಈ ಚಿತ್ರದಲ್ಲಿ ಆತನು ಮೊಟ್ಟಮೊದಲ ಬಾರಿಗೆ ‘ಸ್ಟೆಡಿಕ್ಯಾಮ್’ (Steadicam) ಎನ್ನುವ ಪರಿಕರವನ್ನು ಬಳಸಿ ಚಿತ್ರಿಕೆಯೊಂದನ್ನು ಸಂಯೋಜಿಸುವಲ್ಲಿ ಇನ್ನಿಲ್ಲದ ಸಾಧ್ಯತೆಗಳನ್ನು ತೆರೆದಿಟ್ಟನು. (ನಮ್ಮ ಸಿನಿಮಾಗಳಲ್ಲಿ ಈ ಸಾಧನವು ಅತಿ ಹೆಚ್ಚಾಗಿ ಫೈಟ್ ದೃಶ್ಯಗಳಲ್ಲಿ ಬಳಸಲಾಗುತ್ತದೆ ಎನ್ನುವುದು ಗಮನಾರ್ಹ ಅಂಶ!).

‘ಸೃಜನಶೀಲ ಕ್ರಿಯೆಯೊಂದರಲ್ಲಿ ತೊಡಗಿಸಿಕೊಳ್ಳುವ ಮೂಲ ಉದ್ದೇಶವು ಅಹಿಂಸಾಮಾರ್ಗದಲ್ಲಿ ನಡೆದು ಸಕಾರಾತ್ಮಕ ಸಾಮಾಜಿಕ ಪರಿವರ್ತನೆಯನ್ನು ಕೈಗೂಡಿಸಿಕೊಳ್ಳುವುದಾಗಿದೆ; ಅನ್ಯಾಯ ಹಾಗೂ ಶೋಷಣೆಗಳ ವಿರುದ್ಧದ ಹೋರಾಟವನ್ನು ನಿರಂತರವಾಗಿ ಮುನ್ನಡೆಸುವುದೇ ಆಗಿದೆ. ತಾಂತ್ರಿಕ ಪರಿಜ್ಞಾನ ಹಾಗೂ ಪರಿಕರಗಳು ಇದನ್ನು ಆಗುಮಾಡಿಕೊಳ್ಳುವ ಸಾಧನಗಳಷ್ಟೇ ಆಗಿವೆ. ಆದುದರಿಂದ ಅವುಗಳನ್ನು ವೈಭವೀಕರಿಸುವುದು ಸಲ್ಲದು’ ಎನ್ನುವುದು ವೆಕ್ಸ್‌ಲರ್‌ನ ಧೃಡನಿಲುವಾಗಿತ್ತು.

ಸೃಜನಶೀಲ ಕಲಾವಿದರು ಕೇವಲ ಸಂಸ್ಕೃತಿಯ ಪರಿಚಾರಕರಲ್ಲ. ಬದಲಿಗೆ ಅವರನ್ನು ಸಮಕಾಲೀನ ಚರಿತ್ರೆಯ ರೂವಾರಿಗಳೆಂದು ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಾಮಾಜಿಕ ಪರಿವರ್ತನೆಯ ಹರಿಕಾರರೆಂದು, ಪ್ರವಾದಿಗಳೆಂದು ಪರಿಗಣಿಸಬೇಕು ಎನ್ನುವುದು ವೆಕ್ಸ್‌ಲರ್‌ನ ಪ್ರತಿಪಾದನೆಯಾಗಿತ್ತು. ಇದನ್ನು ಪ್ರತಿಪಾದಿಸಲೋಸುಗವೇ ಎಂಬಂತೆ ಆತನು ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲಿ ತನ್ನನ್ನು ತೀವ್ರವಾಗಿ ತೊಡಗಿಸಿಕೊಂಡು ಶೋಷಿತರ ದನಿಯಾಗಿ ಅವರ ಬವಣೆಯನ್ನು ಜಗದ ಕಣ್ಣೆದುರಿಗಿಟ್ಟನು. ‘ಟೆಲಿವಿಷನ್ ನ್ಯೂಸ್ ಅಥವಾ ಹಾಲಿವುಡ್ ಚಿತ್ರಗಳಲ್ಲಿ ಬಿಂಬಿತವಾಗದ ಸತ್ಯವನ್ನು ಜನರ ಕಣ್ಣೆದುರಿಗಿರಿಸಬೇಕಾದ ಮಹತ್ತರ ಜವಾಬ್ದಾರಿಯು ನಮ್ಮ ಹೆಗಲ ಮೇಲಿದೆ’ ಎನ್ನುವುದು ವೆಕ್ಸ್‌ಲರ್ ನಂಬಿಕೆಯಾಗಿತ್ತು.

ತನ್ನಿಂದ ಸಂದೇಶವೊಂದನ್ನು ಬಯಸಿ ಬಂದವರೆಲ್ಲರಿಗೂ ಆತನು ಹೇಳುತ್ತಿದ್ದ ಮಾತು ಒಂದೇ ಆಗಿತ್ತು: ‘ಸಮಾಜಮುಖಿಯಾಗಿರು; ನನ್ನ, ನಿನ್ನ ಹಾಗೂ ಸಮಾಜದ ಇತಿಹಾಸದ ಪುಟಗಳನ್ನು ಮರೆಯಬೇಡ; ಅದರಲ್ಲಿನ ಅನೇಕಾನೇಕ ಬಿಂದುಗಳನ್ನು ಜೋಡಿಸುತ್ತಲೇ ನೀನಾರೆನ್ನುವುದನ್ನು ಅರಿತುಕೋ; ನಿನ್ನ ಪೂರ್ವಜರು ನಡೆಸಿದ ಸಂಘರ್ಷಗಳ ಬುನಾದಿಯ ಮೇಲೆ ನಿನ್ನ ನಾಳೆಗಳನ್ನು ಕಟ್ಟುವುದನ್ನು ಕಲಿ’.

ವೆಕ್ಸ್‌ಲರ್ ಹಾಕಿಕೊಟ್ಟ ಮೇಲ್ಪಂಕ್ತಿಯು ಕೇವಲ ಚಲನಚಿತ್ರ ಜಗತ್ತಿನ ತಂತ್ರಜ್ಞರು ಹಾಗೂ ನಿರ್ಮಾಪಕ–ನಿರ್ದೇಶಕರಿಗಷ್ಟೇ ಮೀಸಲಾದುದಲ್ಲ. ಬದಲಿಗೆ ಸತ್ಯವು ನಿರ್ಭಿಡೆಯಿಂದ, ಹೆಮ್ಮೆಯಿಂದ ತಲೆಯೆತ್ತಿ ನಿಲ್ಲುವ ಜಗತ್ತಿನಲ್ಲಿ ಬದುಕನ್ನು ಕಟ್ಟಿಕೊಳ್ಳಬಯಸುವ ಎಲ್ಲರಿಗೂ ಆತನ ನಡೆ–ನುಡಿ, ಕೃತಿಗುಚ್ಛಗಳು ನಿರಂತರವಾಗಿ ಮಾರ್ಗದರ್ಶಕವಾಗಿವೆ.

‘ಬೆಂಗಳೂರು ಚಿತ್ರೋತ್ಸವ’ವು ಸತ್ಯದ ಸಿಪಾಯಿಯೋರ್ವನ ಕೃತಿಗುಚ್ಛವನ್ನು ಅನಾವರಣಗೊಳಿಸುವ ಮೂಲಕ ಆತನಿಗೆ ಸೂಕ್ತ ಸ್ಮರಣಾಂಜಲಿಯನ್ನು ಸಲ್ಲಿಸುತ್ತಿದೆ. ಓರ್ವ ದೈತ್ಯಪ್ರತಿಭೆಯನ್ನು ಗುರುತಿಸಲು, ತನ್ನ ಸಹೋದ್ಯೋಗಿಗಳಿಂದ ಉದಾಸೀನಕ್ಕೊಳಗಾಗುವುದಷ್ಟೇ ಅಲ್ಲದೆ, ತನ್ನ ದೇಶದ ಅಧಿಕಾರಶಾಹಿಯ ಕೆಂಗಣ್ಣಿಗೆ ಗುರಿಯಾಗುವುದನ್ನೂ ಲೆಕ್ಕಿಸದೆ, ಶೋಷಿತರ ದನಿಯಾಗಿ ಮೆರೆದವನನ್ನು ಗುರುತಿಸಲು, ಓರ್ವ ಅಪ್ರತಿಮ ಸತ್ಯಾನ್ವೇಷಕನನ್ನು ಪರಿಚಯಿಸಲು ಇದಕ್ಕಿಂತಲೂ ಉತ್ತಮ ಮಾರ್ಗವಿನ್ನೇನಿದೆ?

ಫೆಬ್ರವರಿ 2ರಿಂದ 9ರವರೆಗೆ ಪ್ರತಿದಿನ ಸಂಜೆ 5,30ಕ್ಕೆ ಹ್ಯಾಸ್ಕೆಲ್ ವೆಕ್ಸ್‌ಲರ್ ನಿರ್ಮಿಸಿದ ಸಾಕ್ಷಚಿತ್ರಗಳ ಪ್ರದರ್ಶನವನ್ನು ಬೆಂಗಳೂರು ಚಿತ್ರೋತ್ಸವದ ‘ಕಲಾತ್ಮಕ ನಿರ್ದೇಶನ’ ವಿಭಾಗ ಆಯೋಜಿಸಿದೆ; ಈ ಮೂಲಕ ವೆಕ್ಸ್‌ಲರ್‌ನ ಕೃತಿಗುಚ್ಛವನ್ನು ಒಟ್ಟಾರೆಯಾಗಿ ಕಾಣುವ ಸದವಕಾಶವನ್ನು ಕಲ್ಪಿಸಿಕೊಟ್ಟಿದೆ.
ಹ್ಯಾಸ್ಕೆಲ್ ವೆಕ್ಸ್‌ಲರ್‌ನಂತಹ ಉದಾರ ಮಾನವತಾವಾದಿಗಳು ಅಪರೂಪಕ್ಕೊಮ್ಮೆ ನಮ್ಮಲ್ಲಿ ಕಾಣಿಸಿಕೊಳ್ಳುತ್ತಾರೆ. ನಮ್ಮೆಲ್ಲರ ಉದ್ಧಾರಕ್ಕಾಗಿ ಮೇಲ್ಪಂಕ್ತಿಯೊಂದನ್ನು ಹಾಕಿಕೊಟ್ಟು ಮತ್ತೆ ತಮ್ಮ ಉಪಸ್ಥಿತಿಯ ಅವಶ್ಯಕತೆ ಇರುವೆಡೆಗೆ ತೆರಳುವ ದೇವಮಾನವರಿವರು. ಸಾಮಾಜಿಕ ಕಳಕಳಿಯಿಂದೊಡಗೂಡಿ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಂಡ ಈ ರಸಋಷಿಗಳು ನಮ್ಮ ಪಾಲಿನ ದಾರಿದೀಪಗಳು.

ವೆಕ್ಸ್‌ಲರ್ ಕೃತಿಗುಚ್ಛ
Who is afraid of Virginia Woolf (1966), The Thomas Crown Affair (1968), Medium Cool(1969), American Graffiti(1973), Bound for Glory(1976), Coming Home(1978), Latino(1985)

ಚಿತ್ರೋತ್ಸವದ ಸಿಂಹಾವಲೋಕನ
The Bus (1963), Interviews with My Lai veterans (1970), Medium Cool (1969), Underground (1974), Brazil – A report on torture (1971), Target Nicaragua: Inside a secret war (1983), Latino (1985), The Sixth Sun (1996), Bus II (1983), Who needs sleep (2001)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT