ADVERTISEMENT

ಸಮಾನತೆ ಸಂಬಂಜದ ಕಥೆಗಳು...

ಮಾರಿಕೊಂಡವರ ಕುರಿತು ತಲ್ಲಣಿಸುತ್ತ...

ಡಿ.ಎಂ.ಕುರ್ಕೆ ಪ್ರಶಾಂತ
Published 23 ಜುಲೈ 2015, 19:30 IST
Last Updated 23 ಜುಲೈ 2015, 19:30 IST

ದೇವನೂರ ಮಹಾದೇವರ ಮೂರು ಕಥೆಗಳನ್ನು ಆಧರಿಸಿದ ‘ಮಾರಿಕೊಂಡವರು’ ಸಹೃದಯರ ಕುತೂಹಲ ಕೆರಳಿಸಿರುವ ಸಿನಿಮಾ. ಈ ಸಿನಿಮಾದ ಕ್ಲೈಮ್ಯಾಕ್ಸ್‌ ಚಿತ್ರೀಕರಣದ ವಿಶೇಷ ವರದಿ.

 ಹಳ್ಳಿಯ ಹಾದಿ. ಚೆಲ್ಲಾಪಿಲ್ಲಿಯಾಗಿ ಬಿದ್ದ ಡಾಂಬರು ಬ್ಯಾರೆಲ್‌ಗಳು... ರಸ್ತೆಗೆ ಬಿದ್ದ ಟಾರಿನ ಗುಂಡಿಯಲ್ಲಿ ಸಿಕ್ಕಿಕೊಂಡ ರಾಜನ ರಕ್ಷಣೆಗಾಗಿ ಹೆಣ್ಣು ಹೈಕಳ ಕಿರುಚಾಟ... ಏದುಸಿರಿನಲ್ಲಿ ಓಡೋಡಿ ಬರುತ್ತಿರುವ ಊರ ಯುವಕರು–ಗ್ರಾಮಸ್ಥರು. ಪಿಳಿ ಪಿಳಿ ಕಣ್ಣು ಬಿಡುತ್ತಿರುವ ರಾಜನನ್ನು ಆತುಕೊಂಡಂತೆ ಬಿದ್ದಿರುವ ಆಟದ ಗಾಲಿ. ರಾಜನ ಅವ್ವನ ಚೀರಾಟ... ಕೊಂಚ ಹೊತ್ತಿನಲ್ಲೇ ಲಚುಮಿ, ಬೀರ ಸೇರಿದಂತೆ ಹಳ್ಳಿ ಜನರ ಗುಂಪು. ಪಟೇಲ ಮತ್ತು ಆತನ ಮಗನ ಪ್ರವೇಶ.

ಮೇಲಿನ ವಿವರಗಳು ದೇವನೂರ ಮಹಾದೇವ ಅವರ ‘ಡಾಂಬರು ಬಂದುದು’ ಕಥೆಯನ್ನು ನೆನಪಿಸುತ್ತವೆ ಅಲ್ಲವೇ! ಹೌದು, ಇದು ಅದೇ ಕಥೆಯ ದೃಶ್ಯರೂಪ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನೀಲಕಂಠನಹಳ್ಳಿಯಲ್ಲಿ ಲಚುಮಿ, ಬೀರ, ಶಿವ, ಕಿಟ್ಟಪ್ಪ, ಪಟೇಲ ಹೀಗೆ ದೇವನೂರರ ‘ಮಾರಿಕೊಂಡವರು’, ‘ಡಾಂಬರು ಬಂದುದು’ ಮತ್ತು ‘ಗ್ರಸ್ತರು’ ಕಥೆಯ ಪಾತ್ರಗಳು ಕಲೆತಿದ್ದವು.

ಅದು ಶಿವರುದ್ರಯ್ಯ ಅವರು ನಿರ್ದೇಶಿಸುತ್ತಿರುವ ‘ಮಾರಿಕೊಂಡವರು’ ಚಿತ್ರದ ಕ್ಲೈಮ್ಯಾಕ್ಸ್‌. ದೇವನೂರರ ಮೂರು ಕಥೆಗಳನ್ನು ಒಗ್ಗೂಡಿಸಿಕೊಂಡು ಅವರು ‘ಮಾರಿಕೊಂಡವರು’ ಚಿತ್ರ ರೂಪಿಸುತ್ತಿದ್ದಾರೆ. ನಂಜನಗೂಡು ತಾಲ್ಲೂಕು ಸೇರಿದಂತೆ ಈಗಾಗಲೇ 33 ಹಳ್ಳಿಗಳಲ್ಲಿ 26 ದಿನಗಳ ಕಾಲ ಚಿತ್ರತಂಡ ಚಿತ್ರೀಕರಣ ಪೂರ್ಣಗೊಳಿಸಿದೆ.

ಕ್ಲೈಮ್ಯಾಕ್ಸ್‌ಗಾಗಿ ನೀಲಕಂಠನಹಳ್ಳಿ ಹೊರ ವಲಯದ ಆಲದ ಮರದ ತೋಪು ಮತ್ತು ಅದಕ್ಕೆ ಹೊಂದಿಕೊಂಡಂತಿರುವ ರಸ್ತೆಯಲ್ಲಿ ಕಲಾ ನಿರ್ದೇಶಕ ಶಶಿಧರ ಅಡಪ ಡಾಂಬರು ಗುಂಡಿ ನಿರ್ಮಿಸಿದ್ದರು. ಎಂಟ್ಹತ್ತು ಮಂದಿ ಗುಂಡಿಗೆ ಡಾಂಬರು ಸುರಿಯುತ್ತಿದ್ದರೆ ಛಾಯಾಗ್ರಹಕ ಮುರುಳಿ ಕೃಷ್ಣ ಕ್ಯಾಮೆರಾ ಕೋನ ಹೊಂದಿಸಿಕೊಳ್ಳುವ ಯೋಚನೆಯಲ್ಲಿದ್ದರು. ಬೆಳಗಿನ ಚಳಿಯ ಮಬ್ಬು ಹರಿದು ಸೂರ್ಯ ಆಲದ ಮರಗಳ ನಡುವೆ ಇಣುಕುತ್ತಿದ್ದ. ಕಲಾವಿದರು ಕಾಲಿಟ್ಟಾಗಲೇ ಚಿತ್ರೀಕರಣದ ಸ್ಥಳ ತುಂಬಿ ತುಳುಕಿದ್ದು. ಮಾಸಿದ, ಹರಿದ ಪಂಚೆಯುಟ್ಟ ಪುರುಷರು, ಹಳ್ಳಿ ಸೀರೆಯ ಮಹಿಳೆಯರಿಂದ ಆ ಸ್ಥಳದಲ್ಲಿ ಜೀವಸಂಚಾರ ಉಂಟಾಯಿತು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ದೊಗಲೆ ಪ್ಯಾಂಟು– ಅಂಗಿಯಲ್ಲಿದ್ದರೆ, ಬೀರನ ಪಾತ್ರಧಾರಿ ನಟ ಸತ್ಯ ಪಟಾಪಟಿ ನಿಕ್ಕರ್‌ ಮತ್ತು ಮಾಸಿದ ಅಂಗಿ ತೊಟ್ಟಿದ್ದರು. ಯುವನಟಿ ಸಂಯುಕ್ತಾ ಹೊರನಾಡು ಹಳ್ಳಿಯ ಸೀರೆಯಲ್ಲಿ ಲಚುಮಿಯಾಗಿದ್ದರು. ಟಾರಿನ ರಸ್ತೆಗೆ ವಿರೋಧ ವ್ಯಕ್ತಪಡಿಸಿದ್ದ ಹಳ್ಳಿಯ ಐದು ಮಂದಿ ಯುವಕರು ರಾಜ ಸಿಕ್ಕಿಕೊಂಡಿದ್ದ ಸ್ಥಳಕ್ಕೆ ಒಂದೇ ಉಸಿರಲ್ಲಿ ಓಡಿ ಬರುವ ಸನ್ನಿವೇಶದಿಂದ ಚಿತ್ರೀಕರಣಕ್ಕೆ ಚಾಲನೆ ಕೊಟ್ಟರು ಶಿವರುದ್ರಯ್ಯ. ವಿಜಯ್ ಈ ಗುಂಪಿನಲ್ಲಿ ಒಬ್ಬರು. ಗೌಡನೊಂದಿಗೆ ಹಳ್ಳಿಯ ಜನ ಅಲ್ಲಿಗೆ ಬಂದರು. ಈ ದೃಶ್ಯಗಳಿಗೆ ಕೊಂಚ ಬ್ರೇಕ್ ನೀಡಿ ಲಚುಮಿ (ಸಂಯುಕ್ತ ಹೊರನಾಡು) ಮತ್ತು ಬೀರನ (ಸತ್ಯ) ಉದ್ವೇಗದ ಓಟವನ್ನು ಚಿತ್ರೀಕರಿಸಲಾಯಿತು. ಗೌಡನ ವಿರುದ್ಧದ ಆಕ್ರೋಶಕ್ಕೆ ಟಾರು ಉರುಳಿಸಿದ್ದು ಯಾರು? ಎನ್ನುವುದನ್ನು ಬೀರನ ಕೈಗೆ ಟಾರನ್ನು ಮೆತ್ತಿ ಸೂಕ್ಷ್ಮವಾಗಿ ಹೇಳಿದ್ದರು ನಿರ್ದೇಶಕರು.


ಟಾರಿನೊಳಗೆ...
ಕ್ಲೈಮ್ಯಾಕ್ಸ್‌ನ ಪ್ರಮುಖ ಘಟ್ಟ ರಾಜ ಟಾರಿನೊಳಗೆ ಸಿಕ್ಕಿಕೊಳ್ಳುವುದು. ಚಿತ್ರೀಕರಣ ಸ್ಥಳದಲ್ಲಿ ಗಮನ ಸೆಳೆದಿದ್ದು ಮಧು! ರಾಜನ ಪಾತ್ರದಲ್ಲಿರುವ ಮಧು ಕಿರುತೆರೆಯ ‘ಪುಟಾಣಿ ಪಂಟ್ರು’ ರಿಯಾಲಿಟಿ ಷೋ ವಿಜೇತ. ಎಂಟು ವರ್ಷದ ಈ ಹುಡುಗ ಮೈಗೆ ಕಪ್ಪು ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಡಾಂಬರ್ ಗುಂಡಿಯೊಳಗೆ ಇಳಿದೇ ಬಿಟ್ಟ. ‘ಕಣ್ಣು ಮುಚ್ಚು, ಕಣ್ಣು ಬಿಡು...’ ಎಂದು ನಿರ್ದೇಶಕರು ಹೇಳಿದ ಮಾತುಗಳನ್ನು ಮಧು ಯಥಾವತ್ತಾಗಿ ಪಾಲಿಸುತ್ತಿದ್ದ. ಡಾಂಬರು ಗುಂಡಿಯೊಳಗಿಂದ ಎದ್ದು ಬಂದು ಸಂಯುಕ್ತ ಹೊರನಾಡು ಸೇರಿದಂತೆ ಅಲ್ಲಿದ್ದ ನಟ–ನಟಿಯರನ್ನು ತಬ್ಬಿಕೊಳ್ಳಲು ಮಧು ಮುಂದಾದ.

ಕಪ್ಪು ಮೆತ್ತಿಕೊಂಡ ಹುಡುಗನ ತುಂಟತನಕ್ಕೆ ಎಲ್ಲರೂ ದೂರ ದೂರ. ಲಿಂಗದೇವರು ಹಳೇಮನೆ ಅವರು ಬರೆದಿರುವ ‘ಡಾಂಬರು ಬಂದುದು’ ರಂಗಗೀತೆಯನ್ನು ಚಿತ್ರಕ್ಕೆ ಬಳಸಿಕೊಳ್ಳಲಾಗಿದ್ದು, ಅದಕ್ಕೆ ಜನ್ನಿ ಧ್ವನಿ ನೀಡಿದ್ದಾರೆ. ಗೊಲ್ಲಳ್ಳಿ ಶಿವಪ್ರಸಾದ್ ಮತ್ತೊಂದು ಹಾಡು ಬರೆದಿದ್ದಾರೆ. ಸೋನು, ದಿಲೀಪ್ ರಾಜ್ ಸೇರಿದಂತೆ ನಲವತ್ತಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿದ್ದಾರೆ. ಸುಲೀಲ್‌ಗೆ ದೇವನೂರರ ಪೋಷಾಕು! ವೆಂಕಟೇಶ್ ಮತ್ತು ಗುರುರಾಜ್ ಚಿತ್ರಕ್ಕೆ ಹಣ ತೊಡಗಿಸಿದ್ದಾರೆ. ಮುರುಳಿ ಕೃಷ್ಣ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ.

ಕಾಲೇಜು ದಿನಗಳಲ್ಲಿದ್ದಾಗಲೇ ದೇವನೂರರ ‘ಡಾಂಬರು ಬಂದುದು’ ಕಥೆಗೆ ಸಿನಿಮಾ ರೂಪಕೊಡಬೇಕು ಎಂದು ಆಲೋಚಿಸಿದ್ದೆ. ನಾನು ಮತ್ತು ಕವಿ ಸಿದ್ಧಲಿಂಗಯ್ಯ ಅವರು ಈ ಬಗ್ಗೆ ನಿರ್ದೇಶಕ ಶಂಕರಪ್ಪ ಅವರನ್ನು ಭೇಟಿ ಮಾಡಿದ್ದೆವು. ಈ ಯೋಚನೆ ವಿವಿಧ ಕಾರಣಗಳಿಂದಾಗಿ ನನಸಾಗಲಿಲ್ಲ. ನಂತರ ಶಿವರಾಜ್‌ಕುಮಾರ್ ಅವರನ್ನು ಇಟ್ಟುಕೊಂಡು ಹಳೆಯ ಚಿತ್ರಕಥೆಯನ್ನು ತಿದ್ದುವ ಮತ್ತೊಂದು ಪ್ರಯತ್ನ ಮಾಡಿದೆವು. ಇಲ್ಲಿ ನಾಲ್ಕೈದು ಕಥೆಗಳು ಸೇರಿಕೊಂಡಿದ್ದವು.

ಒಂದು ದಿನ ದೇವನೂರರು ಫೋನ್ ಮಾಡಿ ‘ಪ್ರಕೃತಿ ಸಿನಿಮಾ ನಿರ್ದೇಶಕ ಪಂಚಾಕ್ಷರಿ ಎನ್ನುವವರು ಡಾಂಬರು ಬಂದುದು ಕಥೆಯನ್ನು ಸಿನಿಮಾ ಮಾಡುವೆ ಎಂದು ಬಂದಿದ್ದಾರೆ. ಅದನ್ನು ನೀನು ಮಾಡುವುದು ಎಂದಾಗಿತ್ತಲ್ಲವಾ’ ಎಂದರು. ‘ಇಲ್ಲ, ಅವರಿಗೆ ಆ ಕಥೆ ಕೊಟ್ಟು ಬಿಡಿ’ ಎಂದೆ. ಆಗ ಮಹಾದೇವ ಅವರು ‘ಇಲ್ಲ... ಆ ಕಥೆ ನಿನ್ನದು. ನಾನು ಹೇಗೆ ಬೇರೆಯವರಿಗೆ ಕೊಡಲಿ’ ಎಂದರು. ‘ಡಾಂಬರು ಬಂದುದು’ ಕಥೆಯ ಹಕ್ಕನ್ನು ನಾನೇನು ದುಡ್ಡುಕೊಟ್ಟು ಪಡೆದಿಲ್ಲ. ಆದರೆ ‘ಆ ಕಥೆ ನಿನ್ನದು’ ಎಂದ ದೇವನೂರರ ಮಾತುಗಳು ನನ್ನನ್ನು ತುಂಬಾ ಕಾಡಿದವು. ಅದೇ ಸಮಯದಲ್ಲಿ ವೆಂಕಟೇಶ್ ಮತ್ತು ಗುರುರಾಜ್ ದೇವನೂರರ ಸಿನಿಮಾ ಮಾಡೋಣ ಎಂದರು. ಅದರ ಫಲವೇ ‘ಮಾರಿಕೊಂಡವರು’.

ಈ ಕಥೆ 75–80ರ ದಶಕದ ಅವಧಿಯದ್ದು. ಸಮಕಾಲೀನ ವಿಷಯವಾದ ಮರಳು ಮಾಫಿಯಾವನ್ನು ಚಿತ್ರಕಥೆಯ ಜತೆ ಲಿಂಕ್ ಮಾಡಿದ್ದೇನೆ. 1980–82ರಲ್ಲಿ ನಂಜನಗೂಡಿನ ಹೊಳೆಗಳಲ್ಲಿ ಎತ್ತುಗಳ ಕೊರಳು ಮುಳುಗುವವರೆಗೂ ನಿಲ್ಲಿಸಿಕೊಂಡು ಮರಳು ತೆಗೆಯುತ್ತಿದ್ದರು. ಅದು ಇಂದಿಗೂ ಮುಂದುವರೆದಿದೆ. ಈ ವಿಷಯ ಚಿತ್ರದ ಹಿನ್ನೆಲೆಯಲ್ಲಿ ಬರುತ್ತದೆ. ‘ಮಾರಿಕೊಂಡವರು’ ಚಿತ್ರದಲ್ಲಿ ದೇವನೂರರ ಪಾತ್ರವಿದೆ. ಅವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಆಯ್ದ ಸಾಲುಗಳನ್ನು ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ಜಾತಿ ವ್ಯವಸ್ಥೆಯ ಸೂಕ್ಷ್ಮಗಳು ಸಿನಿಮಾದಲ್ಲಿ ಕಾಣಲಿವೆ.

ವ್ಯವಸ್ಥೆಯಲ್ಲಿನ ತಳ ಸಮುದಾಯಗಳು ತಮ್ಮ ಅರಿವಿಗೆ ಬಾರದಂತೆ ತಮ್ಮನ್ನು ತಾವೇ ಹೇಗೆ ಮಾರಿಕೊಳ್ಳುತ್ತವೆ ಎನ್ನುವುದನ್ನು ಇಲ್ಲಿ ಕಾಣುತ್ತೇವೆ. ಒಂದು ಹಳ್ಳಿಯಿಂದ ಮತ್ತೊಂದು ಕಡೆಗೆ ಟಿಕೆಟ್ ಇಲ್ಲದೆ ಪ್ರಯಾಣಿಸುವ ಬೀರ ಮತ್ತೊಬ್ಬ ಗೌಡನ ಮನೆಯ ಆಳು ಹೇಗಾಗುತ್ತಾನೆ ಎನ್ನುವುದು ಸಿನಿಮಾದಲ್ಲಿದೆ. ನಮ್ಮೂರಿನಲ್ಲಿಯೇ ದಲಿತರ ಮನೆಗಳು ಊರಿನ ಆರಂಭದಲ್ಲಿ ಇದ್ದವು. ಈ ಕೇರಿಯನ್ನು ದಾಟಿಕೊಂಡು ಮೇಲ್ವರ್ಗದ ಜನರು ಮುಂದಿನ ಊರುಗಳಿಗೆ ಹೋಗಬೇಕಿತ್ತು. ಆ ಮನೆಗಳ ಹತ್ತಿರ ಮೂಗು ಮುಚ್ಚಿಕೊಂಡು ಹೋಗುತ್ತಿದ್ದರು. ಇಲ್ಲವೆ ಅಸ್ಪೃಶ್ಯತೆಯ ಭ್ರಮೆಯಲ್ಲಿ ಸಾಗುತ್ತಿದ್ದರು. ಚಿತ್ರದಲ್ಲೂ ಇಂಥ ಅಂಶಗಳನ್ನು ಕಾಣಿಸಲಾಗಿದೆ.

‘ಕಥೆ ಇಷ್ಟವಾಗಿದೆ ಎಂದರೆ ಸಿನಿಮಾ ಮಾಡು. ಪ್ರಶಸ್ತಿಗಾಗಿ, ಜನರಿಗಾಗಿ ಸಿನಿಮಾ ಮಾಡುವೆ ಎನ್ನುವುದನ್ನು ಮನಸ್ಸಿನಿಂದ ತೆಗೆದುಹಾಕು. ನಿನ್ನ ಆಲೋಚನೆಗಳಿಗೆ ಹೊಂದುತ್ತದೆಯಾ? ಯೋಚಿಸು, ನನಗೋಸ್ಕರ ಸಿನಿಮಾ ಮಾಡಬೇಡ, ನಿನಗಾಗಿ ಮಾಡಿಕೋ. ಇದು ನಿನಗೆ ಹೊಸ ಹುಟ್ಟು’ ಎಂದು ದೇವನೂರ ಮಹಾದೇವ ಅವರು ಹೇಳಿದ್ದರು. ಈ ವಿಷಯ ನನ್ನಲ್ಲಿ ಸ್ಪಷ್ಟವಾಗಿ ಕುಳಿತಿತ್ತು. ಮಹಾದೇವ ಅವರ ಕಥೆಗಳಲ್ಲಿ, ಕಥೆಯಲ್ಲಿನ ಉಡುಗೆ ತೊಡುಗೆಗಳಲ್ಲಿ ಮತ್ತು ಭಾಷೆಯಲ್ಲಿ ಒಂದು ‘ರಿದಂ’ ಇದೆ. ಅದನ್ನು ಒಂದು ಸರಿಯಾದ ಹಾದಿಯಲ್ಲಿ ಕೊಂಡೊಯ್ಯುವುದು ದೊಡ್ಡ ಸವಾಲಾಗಿತ್ತು.

ಸಿನಿಮಾ ಆರಂಭವಾಗುವುದು ‘ಸಮಾನತೆಯ ಕನಸು ಕಾಣುತ್ತ’ (ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ‘ಪ್ರಜಾವಾಣಿ’ಯ ಅತಿಥಿ ಸಂಪಾದಕರಾಗಿ ದೇವನೂರ ಮಹಾದೇವರು ಬರೆದ ಸಂಪಾದಕೀಯದ ಶೀರ್ಷಿಕೆ) ಎನ್ನುವ ಟೈಟಲ್ ಕಾರ್ಡಿನಿಂದ. ಕೊನೆಗೊಳ್ಳುವುದು ‘ಸಂಬಂಜ ಅನ್ನಾದು ದೊಡ್ಡದು ಕನಾ’ ಎನ್ನುವ ಸಾಲಿನಿಂದ.

‘ಸಂಚಾರಿ’ ವಿಜಯ್ ಚಿತ್ರದಲ್ಲಿ ಅತ್ಯಂತ ಪುಟ್ಟ ಪಾತ್ರ ಮಾಡಿದ್ದಾರೆ. ವೃತ್ತಿಯ ಬಗೆಗೆ ಇರುವ ಬದ್ಧತೆ ಇದಕ್ಕೆ ಸಾಕ್ಷಿ. ಇಂಥ ಹಲವು ಅಪರೂಪಗಳು ‘ಮಾರಿಕೊಂಡವರು’ ಚಿತ್ರದಲ್ಲಿ ಸಿಕ್ಕುತ್ತವೆ. ಮಹಾದೇವರ ಕೃತಿಯನ್ನು ಸಿನಿಮಾ ಮಾಡಬೇಕು ಎಂದಾಗ ಸಂಭಾವನೆ ಪಡೆಯದೆ ಶಶಿಧರ ಅಡಪ ಕಲಾ ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣದಲ್ಲಿ ಒಂದು ಹಳೆಯ ಮನೆಯನ್ನು ಕೆಡವಬೇಕಿತ್ತು. ಆರಂಭದಲ್ಲಿ ಒಲ್ಲೆ ಎಂದವರು ಮಹಾದೇವರ ಕೃತಿಯ ಸಿನಿಮಾ ಎಂದಾಗ ಒಪ್ಪಿದರು.

ಒಂದು ತೋಟದಲ್ಲಿ ಚಿತ್ರೀಕರಣ ಆಗಬೇಕಿತ್ತು. ಶೂಟಿಂಗ್‌ಗೆ ಕೊಡುವುದಿಲ್ಲ ಎಂದರು. ಮಹಾದೇವರ ಕೃತಿಯ ಸಿನಿಮಾ ಎಂದ ತಕ್ಷಣವೇ ಸ್ವಲ್ಪವೂ ಹಿಂದು ಮುಂದು ನೋಡದೆ ಒಪ್ಪಿದರು. ಇದು ನನ್ನ ಎಂಟನೇ ಸಿನಿಮಾ. ಸಹಜವಾಗಿ ಎಲ್ಲ ಚಿತ್ರಗಳಲ್ಲೂ ಸಮಸ್ಯೆ ಇತ್ಯಾದಿ ಇದ್ದೇ ಇರುತ್ತವೆ. ಆದರೆ ಅತ್ಯಂತ ಸೂಕ್ಷ್ಮವಾಗಿ ನನ್ನ ಕೈಯಲ್ಲಿ ಸಾಗಿದ ಚಿತ್ರ ಎಂದರೆ ‘ಮಾರಿಕೊಂಡವರು’.

‘ಅಮಾಸ’, ‘ಚೈತ್ರದ ಚಿಗುರು’, ‘ಮಾಗಿಯ ಕಾಲ’, ‘ಬೆಳ್ಳಿ ಕಿರಣ’, ‘ದಾಟು’ ಸೇರಿದಂತೆ ಒಟ್ಟು ಎಂಟು ಚಿತ್ರಗಳನ್ನು ನಿರ್ದೇಶಿಸಿರುವ ಶಿವರುದ್ರಯ್ಯ ಸಮಕಾಲೀನ ವಿಷಯಗಳನ್ನು, ಸಾಮಾಜಿಕ ಸಮಸ್ಯೆಗಳ ಕುರಿತು ತಮ್ಮ ಸಿನಿಮಾ ಕಲಾಕೃತಿಗಳ ಮೂಲಕ ಪ್ರತಿಕ್ರಿಯಿಸುವ ಸೃಜನಶೀಲ ನಿರ್ದೇಶಕರು. ‘ಅಮಾಸ’ ದೇವನೂರರ ಕಥೆಯನ್ನೇ ಆಧರಿಸಿದ ಚಿತ್ರ. ‘ದಾಟು’ ವಿವಿಧ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಸಿನಿಮಾ. ‘ಮಾಗಿಯ ಕಾಲ’ ಅತ್ಯುತ್ತಮ ಚಿತ್ರ ರಾಜ್ಯಪ್ರಶಸ್ತಿ ಪಡೆದಿರುವ ಸಿನಿಮಾ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.