ADVERTISEMENT

ಹಲವು ಸುಳಿಗಳ ಮಹಾಪರ್ವ

​ಪ್ರಜಾವಾಣಿ ವಾರ್ತೆ
Published 27 ಜೂನ್ 2013, 19:59 IST
Last Updated 27 ಜೂನ್ 2013, 19:59 IST
ಹಲವು ಸುಳಿಗಳ ಮಹಾಪರ್ವ
ಹಲವು ಸುಳಿಗಳ ಮಹಾಪರ್ವ   

ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು ಮೂಡಿಸಿದ ಜಿಜ್ಞಾಸೆಯ ಫಲ `ಮಾಯಾಮೃಗ', `ಮುಕ್ತ', `ಮುಕ್ತ ಮುಕ್ತ'ದಂಥ ಧಾರಾವಾಹಿಗಳ ಸೃಷ್ಟಿ. ಸಾಮಾಜಿಕ ಬದಲಾವಣೆಗಳನ್ನು ಕಾಲ್ಪನಿಕತೆಯೊಂದಿಗೆ ಬೆರೆಸಿ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟ ನಿರ್ದೇಶಕ ಟಿ.ಎನ್. ಸೀತಾರಾಂ. ಅವರೀಗ ನವ ಪಲ್ಲಟಗಳ ಪ್ರಭಾವಳಿಗೆ ಒಳಗಾಗಿದ್ದಾರೆ. ಅವರ ನಿರ್ದೇಶನದ ಹೊಸ ಧಾರಾವಾಹಿ `ಮಹಾಪರ್ವ'ದ ಕುರಿತ ಅವರ ಮಾತುಗಳು, ಬದಲಾವಣೆಯ ಅನಿವಾರ್ಯತೆಗೆ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿಯನ್ನು ಧ್ವನಿಸುವಂತೆ ಕಾಣಿಸುತ್ತವೆ.

ಅಲ್ಪ ವಿರಾಮದ ಬಳಿಕ ಸೀತಾರಾಂ ಕಿರುತೆರೆಯಲ್ಲಿ ಮತ್ತೆ ಕರಿಕೋಟು ಧರಿಸಿ ಪ್ರತ್ಯಕ್ಷವಾಗುತ್ತಿದ್ದಾರೆ. ಕರಿಕೋಟು ಧರಿಸಿದ `ಸಿಎಸ್‌ಪಿ'ಯ ಪುನರಾಗಮನ ಚಾನೆಲ್‌ನ ಒತ್ತಾಸೆಯ ಮೇರೆಗೆ. ಆದರೆ ಅವರ ಕಥನದ ವಸ್ತು ಬದಲಾಗುತ್ತಿದೆ. ಮಾತ್ರವಲ್ಲ, ಅದನ್ನು ಕಟ್ಟಿಕೊಡುವ ಬಗೆಯೂ. ಇದುವರೆಗೆ ಚಿಂತನೆಗೆ ಒತ್ತು ನೀಡುತ್ತಿದ್ದ ಸೀತಾರಾಂ, ರಂಜನೆಯನ್ನೂ ಹದವಾಗಿ ಧಾರಾವಾಹಿಯಲ್ಲಿ ಬೆರೆಸಲಿದ್ದಾರೆ. ಸೀತಾರಾಂ ಹೆಜ್ಜೆಯಲ್ಲಿನ ಈ ಸ್ಥಿತ್ಯಂತರಗಳು ಕನ್ನಡ ಕಿರುತೆರೆಯಿಂದ ವಿಮುಖರಾಗುತ್ತಿರುವ ಯುವ ವೀಕ್ಷಕರಿಗೋಸ್ಕರ.

ಕನ್ನಡದ ಧಾರಾವಾಹಿಗಳನ್ನು ತಿರಸ್ಕರಿಸಿ ಹಿಂದಿ ಧಾರಾವಾಹಿಗಳತ್ತ ಮುಖ ಮಾಡುತ್ತಿರುವ ಯುವಜನಾಂಗ ಅವರ ಪಾಲಿಗೆ ಮಾಯಾಮೃಗ. ಅತ್ತ ಹಿಂದಿ ಧಾರಾವಾಹಿ ನೋಡುತ್ತಾ, ಇತ್ತ ಡಿಸ್ಕವರಿ ಚಾನೆಲ್‌ಅನ್ನೂ ನೋಡುವ ಪ್ರೇಕ್ಷಕ ಸಮುದಾಯ ಹಿರಿದಾಗಿದೆ. ಇದು ಚಿಂತನೆ ಮತ್ತು ರಂಜನೆ ಎರಡನ್ನೂ ಬಯಸಿ ನೋಡುವ ವರ್ಗ ಎನ್ನುವುದು ಅವರ ಅನಿಸಿಕೆ.

ತಮ್ಮ ಹೊಸ ಧಾರಾವಾಹಿಯನ್ನು ತೆರೆಗೆ ತರುವ ಮುನ್ನ ಬದಲಾಗುತ್ತಿರುವ ವೀಕ್ಷಕ ವರ್ಗದ ಮನಃಸ್ಥಿತಿಯ ಕುರಿತು ಚಿಂತನ-ಮಂಥನ ನಡೆಸಿರುವ ಸೀತಾರಾಂ, ಹೊಸ ತಲೆಮಾರಿನ ಪ್ರೇಕ್ಷಕ ವರ್ಗವನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಸುಧಾ ಬೆಳವಾಡಿ, ಸುಂದರರಾಜ್, ಶ್ರೀನಿವಾಸಪ್ರಭು ಮುಂತಾದ ಹಿರಿಯ ಕಲಾವಿದರ ಜೊತೆಗೆ ಹೊಸ ಕಲಾವಿದರನ್ನು ಅವರು ಪರಿಚಯಿಸುತ್ತಿರುವುದು ಸಹ ಇದೇ ಉದ್ದೇಶದಿಂದ.

`ಮಹಾಪರ್ವ' ದೇಸಿ ಕನಸುಗಳು ಕಳೆದುಹೋಗುತ್ತಿರುವ ನೋವನ್ನು ಹೊಸ ಭಾಷೆಯಲ್ಲಿ ಹೇಳುವ ಪ್ರಯತ್ನ. ಸ್ವಾತಂತ್ರ್ಯ ಬಂದ ದಶಕ ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕ್ಷಿಪ್ರ ಬದಲಾವಣೆಗಳಾದವು. ಅದಕ್ಕೂ ಮೀರಿದ ವೇಗದ ಬದಲಾವಣೆ ಈ ದಶಕದಲ್ಲಿ ಆಗುತ್ತಿದೆ. ಆರಂಭದಲ್ಲಿ ಈ ಭಾವನಾತ್ಮಕ ಪಲ್ಲಟಗಳನ್ನು ರಂಜನೀಯವಾಗಿ ನೀಡುವ ಪ್ರಯತ್ನ ಮಾಡುತ್ತಿದ್ದೇನೆ ಎಂಬ ವಿವರಣೆ ಸೀತಾರಾಂ ಅವರದ್ದು.

ಆಯುರ್ವೇದಿಕ್ ಕಂಪೆನಿಯನ್ನು ನಡೆಸುವ ಕುಟುಂಬ ಎದುರಿಸುವ ತವಕ ತಲ್ಲಣಗಳು `ಮಹಾಪರ್ವ'ದಲ್ಲಿ ಬಿಂಬಿತವಾಗಲಿದೆ. ಮೂರು ಮಹಿಳಾ ಪಾತ್ರಗಳ ಮೇಲೆ ಧಾರಾವಾಹಿ ಕೇಂದ್ರಿತ.

ಸದ್ಯಕ್ಕೆ 300 ಕಂತುಗಳ ಗುರಿ ಹಾಕಿಕೊಂಡಿದ್ದಾರೆ ಟಿ.ಎನ್. ಸೀತಾರಾಂ. ಆದರೆ, `ಸೀತಾರಾಂ ಅವರ ಧಾರಾವಾಹಿಯ ಕಂತುಗಳಿಗೆ ಯಾವುದೇ ಮಿತಿ ಹೇರುವುದಿಲ್ಲ' ಎಂಬ ಭರವಸೆ ನೀಡಿದರು ಈ ಟೀವಿ ವಾಹಿನಿಯ ಪ್ರೋಗ್ರಾಮಿಂಗ್ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್.

ವೀಕ್ಷಕರಂತೆಯೇ ಪ್ರಾಯೋಜಕರೂ ಸೀತಾರಾಂ ಅವರ ಧಾರಾವಾಹಿಗೆ ತೋರುತ್ತಿರುವ ಒಲವು ಪರಮೇಶ್ವರ್ ಅವರಿಗೆ ವಿಶೇಷ ಅನ್ನಿಸಿದೆ, ವ್ಯವಹಾರದ ದೃಷ್ಟಿಯಿಂದಲೂ `ಮಹಾಪರ್ವ' ಗೆಲ್ಲಲಿದೆ ಎಂಬ ವಿಶ್ವಾಸ ಮೂಡಿಸಿದೆ.

ಈ ಟೀವಿ ವಾಹಿನಿಯಲ್ಲಿ ಜುಲೈ 1ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ `ಮಹಾಪರ್ವ' ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.