ADVERTISEMENT

ಹಾಡುತ್ತ ಆಡುತ್ತ ಬಂದ ‘ಸುಂದರಾಂಗ ಜಾಣ’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2016, 19:30 IST
Last Updated 17 ನವೆಂಬರ್ 2016, 19:30 IST
ಸುಂದರಾಂಗ ಜಾಣ, ಗಣೇಶ್
ಸುಂದರಾಂಗ ಜಾಣ, ಗಣೇಶ್   
‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮ ನೆನಪಿದೆಯಲ್ಲ; ಅಲ್ಲಿ ರಮೇಶ್ ಅವರು ನೀಟಾಗಿ ಬಟ್ಟೆ ತೊಟ್ಟು, ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ತಮ್ಮ ಮನೆಗೇ ಬಂದವರೆಂಬಂತೆ ಲವಲವಿಕೆ ಯಿಂದ ಮಾತನಾಡಿಸುತ್ತಾರೆ. ಅವರ ನಿರ್ದೇಶನದ ‘ಸುಂದರಾಂಗ ಜಾಣ’ ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭದಲ್ಲೂ ಅಂಥದ್ದೇ ಆತ್ಮೀಯ ಸಂಭ್ರಮವಿತ್ತು.
 
‘ಸುಂದರಾಂಗ ಜಾಣ’ನ ಚಿತ್ರೀಕರಣ ಪೂರ್ತಿಗೊಳಿಸಿ, ಹಾಡುಗಳನ್ನು ಅನಾವರಣ ಮಾಡಿದ ಚಿತ್ರತಂಡದಲ್ಲಿ ಉತ್ಸಾಹವಿತ್ತು. ನಿರ್ಮಾಪಕರ ಬಗೆಗೆ ಮೆಚ್ಚುಗೆಯ ಮಾತನಾಡಿದ ರಮೇಶ್, ‘ನನ್ನ ಸೃಜನಶೀಲ ಉತ್ಸಾಹ, ಆಸಕ್ತಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು’ ಎಂದರು. 
 
ಈ ಚಿತ್ರವನ್ನು ರಮೇಶ್ ಅವರು ನಿರ್ದೇಶನ ಮಾಡಿದರೆ ಚೆನ್ನಾಗಿರುತ್ತದೆ ಎಂಬುದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಆಸೆಯಾಗಿತ್ತು. ‘ನಮಗೆ ಒಳ್ಳೆಯದಾಗುವ ಕಾಲ ಕೂಡಿ ಬಂದಿತ್ತು. ಹಾಗಾಗಿಯೇ ಈ ಸಿನಿಮಾ ಆಗಿದ್ದು’ ಎಂದರು ರಾಕ್‌ಲೈನ್ ವೆಂಕಟೇಶ್.
 
‘ಸುಂದರಾಂಗ ಜಾಣ’ದ ಮೂಲಚಿತ್ರ ತೆಲುಗಿನ ‘ಭಲೇ ಭಲೇ ಮಗಾಡಿವೋಯ್’ ನಿರ್ಮಿಸಿದ ಅಲ್ಲು ಅರವಿಂದ್ ಈ ಚಿತ್ರದಲ್ಲೂ ನಿರ್ಮಾಣ ಪಾಲುದಾರರು. ‘ಕನ್ನಡಿಗರು ಕೌಟುಂಬಿಕ ಮನರಂಜನಾ ಚಿತ್ರಗಳನ್ನು ಚೆನ್ನಾಗಿ ಆಸ್ವಾದಿಸುತ್ತಾರೆ. ಅದಕ್ಕೇ ಈ ಸಿನಿಮಾವನ್ನು ಕನ್ನಡದಲ್ಲಿ ನಿರ್ಮಿಸಲು ಮುಂದಾದೆ’ ಎಂದರು ಅವರು.
 
ನಾಯಕ ಗಣೇಶ್ ಈವರೆಗೆ ತಮ್ಮ ವೃತ್ತಿಬದುಕಿನಲ್ಲೇ ಈವರೆಗೆ ಮಾಡಿರದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದಾರಂತೆ. ಇಲ್ಲಿ ಅವರು ಎಲ್ಲವನ್ನೂ ಮರೆಯುವ ಸ್ವಭಾವದವರು. ಚಿತ್ರದ ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ನಗಿಸುವ ಕೆಲಸವನ್ನು ನಿರ್ವಹಿಸಿದ್ದಾರೆ. ನಾಯಕಿ ಶಾನ್ವಿ ಪ್ರಕಾರ ಅವರು ಈವರೆಗೆ ಕೆಲಸ ಮಾಡಿರುವ ನಿರ್ಮಾಪಕರ ಪೈಕಿ ಈ ಚಿತ್ರದ ಇಬ್ಬರು ನಿರ್ಮಾಪಕರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರಂತೆ. ಅಂದಹಾಗೆ, ಶಾನ್ವಿ ನಟನೆಯಿಂದ ಖುಷಿಯಾಗಿರುವ ರಮೇಶ್ ಅವರು ಈಗಾಗಲೇ ಅವರನ್ನು ಮತ್ತೊಂದು ಚಿತ್ರಕ್ಕೂ ರೆಕಮಂಡ್ ಮಾಡಿದ್ದಾರೆ.
 
ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ನಾಲ್ಕು ಹಾಡುಗಳಿವೆ. ಪ್ರದ್ಯುಮ್ನ ನರಹಳ್ಳಿ ಎರಡು ಹಾಡುಗಳನ್ನು ಬರೆದು, ನಟಿಸಿದ್ದಾರೆ. ಬಾಲಚಂದ್ರ ಟಿ.ಕೆ., ಜಯಂತ ಕಾಯ್ಕಿಣಿ ಒಂದೊಂದು ಹಾಡು ಬರೆದಿದ್ದಾರೆ. ಹರಿಚರಣ್, ಶ್ರೇಯಾ ಘೋಷಾಲ್, ಶಶಾಂಕ್ ಶೇಷಗಿರಿ, ಲಾವಣ್ಯ, ವಿಜಯ್ ಪ್ರಕಾಶ್, ಇಂದೂ ನಾಗರಾಜ್ ಹಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.