ADVERTISEMENT

‘ಮೊದಲ ಮಳೆ’ ಪುಳಕದಲ್ಲಿ ಹೃದಯಶಿವ

ಪದ್ಮನಾಭ ಭಟ್ಟ‌
Published 17 ಜುಲೈ 2015, 19:30 IST
Last Updated 17 ಜುಲೈ 2015, 19:30 IST

ಗೀತರಚನೆಕಾರರು ನಿರ್ದೇಶನದ ಟೋಪಿ ಧರಿಸುವುದು ಕನ್ನಡ ಚಲನಚಿತ್ರರಂಗಕ್ಕೆ ಹೊಸ ವಿಷಯವೇನಲ್ಲ. ಇತ್ತೀಚೆಗೆ ಕವಿರಾಜ್‌ ಅವರು ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರದ ಮೂಲಕ ನಿರ್ದೇಶಕನ ಪಟ್ಟಕ್ಕೇರಿರುವುದು ತಿಳಿದೇ ಇದೆ. ಇದೀಗ ಇನ್ನೊಬ್ಬ ಗೀತರಚನೆಕಾರ ಹೃದಯಶಿವ ಕೂಡ ಆಕ್ಷನ್‌ ಕಟ್‌ ಹೇಳಲು ತಯಾರಾಗಿದ್ದಾರೆ. ತಮ್ಮ ಚಿತ್ರಕ್ಕೆ ನೆನಪಿರಲಿ ಪ್ರೇಮ್‌ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ ಎಂದೂ ಅವರೇ ಖಚಿತಪಡಿಸಿದ್ದಾರೆ.

‘ನಾಯಕಿ ಮತ್ತು ಉಳಿದ ಪಾತ್ರಕ್ಕಾಗಿ ನಟರನ್ನು ಇನ್ನು ಒಂದೆರಡು ದಿನದಲ್ಲಿಯೇ ಅಂತಿಮಗೊಳಿಸಲಾಗುವುದು’ ಎಂದಿರುವ ಅವರು ‘ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿಯೊಬ್ಬರು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ’ ಎಂದು ಕುತೂಹಲದ ದೋಣಿಯನ್ನೂ ತೇಲಿಬಿಡುತ್ತಾರೆ.

ಅಂದಹಾಗೆ ಹೃದಯಶಿವ ಅವರ ಸಿನಿಮಾದ ಹೆಸರು ‘ಮೊದಲ ಮಳೆ’. ಈ ಮಳೆಗೆ ಹಣ ಸುರಿಯಲು ಸಿದ್ಧರಾಗಿರುವುದು ತಿಪಟೂರಿನ ಸೋಮಶೇಖರ್‌ ಎಸ್‌. ಅವರಿಗೂ ಇದು ಮೊದಲ ಸಿನಿಮಾ.

ಹೃದಯಶಿವ ಅವರಿಗೆ ನಿರ್ದೇಶನದ ಕನಸು ಇಂದು ನಿನ್ನೆಯದಲ್ಲ. ‘ನಿರ್ದೇಶಕನಾಗಬೇಕು ಎಂಬ ಆಸೆಯಿಂದಲೇ ನಾನು ಚಿತ್ರರಂಗಕ್ಕೆ ಬಂದಿದ್ದು. ಆರಂಭದ ದಿನಗಳಲ್ಲಿ ಅನೇಕ ಕಿರುಚಿತ್ರ, ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಆದರೆ ಮುಖ್ಯವಾಹಿನಿಯ ನಿರ್ದೇಶಕರ ಜತೆ ಕೆಲಸ ಮಾಡುವ ಅವಕಾಶ ಸಿಗಲಿಲ್ಲ. ನನಗೆ ಹಾಡು ಬರೆಯುವ ಅಭ್ಯಾಸವೂ ಇದ್ದಿದ್ದರಿಂದ ಗುರುಕಿರಣ್‌ ಅವರ ಮೂಲಕ ಗೀತರಚನೆಕಾರನಾಗಿ ಗುರುತಿಸಿಕೊಂಡೆ. ನಂತರ ಅದೇ ಕೆಲಸವೇ ಮುಖ್ಯವಾಗತೊಡಗಿ ನಿರ್ದೇಶನದ ಕನಸು ಹಿನ್ನೆಲೆಗೆ ಸರಿಯಿತು’ ಎನ್ನುವ ಇವರು ಕಳೆದ ಐದು ವರ್ಷಗಳಿಂದಲೂ ನಾಲ್ಕೈದು ಸಿನಿಮಾ ಕತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಮಾಪಕರಿಗಾಗಿ ಕಾಯುತ್ತಿದ್ದರು.

‘ನನ್ನ ಬಳಿ ನಾಲ್ಕೈದು ಕತೆಗಳಿವೆ. ಪ್ರೇಮಕಥೆ, ಹಾಸ್ಯ, ಹಾರರ್‌ ಎಲ್ಲ ರೀತಿಯ ಕತೆಗಳೂ ಇವೆ. ಅವುಗಳನ್ನು ಸಿನಿಮಾ ಮಾಡುವುದಕ್ಕೋಸ್ಕರ ಕನ್ನಡದ ಅನೇಕ ಮುಖ್ಯ ನಿರ್ಮಾಪಕರನ್ನು ಸಂಪರ್ಕಿಸಲು ಯತ್ನಿಸಿದೆ. ಅವರಿಗೆ ಸಮಯದ ಅಭಾವವೋ ಅಥವಾ ಇವನು ಗೀತರಚನೆಕಾರನಾಗಿಯೇ ಇರಲಿ ಎಂಬ ಭಾವವೋ ಗೊತ್ತಿಲ್ಲ. ಯಾರೂ ಚಿತ್ರನಿರ್ಮಾಣಕ್ಕೆ ಮುಂದಾಗಲಿಲ್ಲ. ಸೋಮಶೇಖರ್‌ ನನಗೆ ಮೊದಲಿನಿಂದಲೂ ಪರಿಚಿತರು ನನ್ನ ಈ ಕಥೆಯನ್ನು ಕೇಳಿ ಪ್ರಭಾವಿತರಾಗಿ ತಕ್ಷಣವೇ ಹಣ ಹೂಡಲು ಮುಂದಾದರು’ ಎಂದು ತಮ್ಮ ಕನಸು ನನಸಾಗುತ್ತಿರುವ ಸಂಗತಿಯನ್ನು ಖುಷಿಯಿಂದ ವಿವರಿಸುತ್ತಾರೆ ಹೃದಯಶಿವ.

ಆದರೆ ‘ಮೊದಲ ಮಳೆ’ಯ ಕತೆ ಹುಟ್ಟಿದ್ದು ಈಗ ಐದಾರು ತಿಂಗಳ ಹಿಂದೆ. ನಟ ಪ್ರೇಮ್ ಕೂಡ ಈ ಕಥೆಯನ್ನು ತುಂಬ ಇಷ್ಟಪಟ್ಟು ನಟಿಸಲು ಮುಂದಾಗಿದ್ದು ಅವರ ಉತ್ಸಾಹವನ್ನು ಇಮ್ಮಡಿಸಿದೆ.

ಮಳೆಯೆಂಬುದು ರೂಪಕ..
ತಮ್ಮ ಮೊದಲ ಚಿತ್ರದ ಬಗ್ಗೆ ಹೃದಯಶಿವ ವಿವರಿಸುವುದು ಹೀಗೆ. ‘‘ಮೊದಲ ಮಳೆ’ ಒಂದು ಸರಳ ಪ್ರೇಮಕಥೆ. ಮಳೆಯ ಹಿನ್ನೆಲೆಯಲ್ಲಿ, ಮಲೆನಾಡಿನಲ್ಲಿ ನಡೆಯುವ ಪ್ರೇಮಕಥೆ. ತುಂಬಾ ಪ್ರಯೋಗಾತ್ಮಕ ಚಿತ್ರವೇನಲ್ಲ. ಕಥೆ ಸರಳವಾಗಿಯೇ ಇದೆ. ಆದರೆ ನಿರೂಪಣೆಯಲ್ಲಿ ವಿಶಿಷ್ಟತೆಯನ್ನು ಕಾಣಬಹುದು’ ಎನ್ನುವ ಅವರು ‘ಮಳೆ ಎಂಬುದು ಈ ಸಿನಿಮಾದಲ್ಲೊಂದು ಪಾತ್ರವಾಗಿದೆ  ಎಂದೆಲ್ಲ ಸುಳ್ಳು ಹೇಳಲ್ಲ. ಇಲ್ಲಿ ಮಳೆ ಒಂದು ರೂಪಕವಾಗಿ ಬಳಕೆಯಾಗಿದೆ ಅಷ್ಟೆ’ ಎಂದು ಸ್ಪಷ್ಟಗೊಳಿಸುತ್ತಾರೆ.

ಹಾಡಿನ ಧಾರೆ..
ಹೇಳಿ ಕೇಳಿ ಹೃದಯಶಿವ ಕವಿ. ಅಂದಮೇಲೆ ಅವರ ನಿರ್ದೇಶನದ ಸಿನಿಮಾದಲ್ಲಿ ಹಾಡಿಗೇನೂ ಬರವಿರುವುದಿಲ್ಲ. ‘ಮೊದಲ ಮಳೆ’ಯಲ್ಲಿ ಐದು ಹಾಡುಗಳಿವೆ. ಎಲ್ಲವನ್ನೂ ಮೊದಲು ಸಾಹಿತ್ಯ ರಚನೆ ಮಾಡಿ ನಂತರ ಅದಕ್ಕೆ ಸಂಗೀತ ಸಂಯೋಜಿಸಲಾಗಿದೆ. ‘ಇದು ಕಡಿಮೆ ಮಾತು–ಹೆಚ್ಚು ಭಾವವಿರುವ ಸಿನಿಮಾ. ಸಂಗೀತ ಮತ್ತು ಹಾಡುಗಳ ಮೂಲಕವೇ ಭಾವನೆಯನ್ನು ವ್ಯಕ್ತಪಡಿಸುವ ಪ್ರಯತ್ನ. ನಾನು ಈ ಮೊದಲೇ ಬರೆದಿದ್ದ ಕೆಲವು ಹಾಡುಗಳನ್ನೂ ಇದರಲ್ಲಿ ಬಳಸಿಕೊಳ್ಳಲಾಗಿದೆ’ ಎಂದು ವಿವರಿಸುವ ಹೃದಯಶಿವ ಅವರೇ ಚಿತ್ರದ ಎಲ್ಲ ಹಾಡುಗಳಿಗೂ ಪದ ಪೋಣಿಸಿದ್ದಾರೆ.

‘ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿ ಜಿಟಿ ಜಿಟಿ ಮಳೆಹಾಡಿಗೆ ಒಲಿದೆದೆಗಳ ತನನ
ಎಡಬಲದಲಿ ಹಸಿರಿನ ಸಿರಿ ಎದುರಿಗೆ ಜಲಪಾತ

ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ’ ಎಂದು ಹಾಡಿನ ಸಾಲುಗಳನ್ನು ಗುನುಗಿ ಸ್ಯಾಂಪಲ್‌ ಅನ್ನೂ ಕೊಡುತ್ತಾರೆ.
‘ಫಸ್ಟ್‌ ರ್‍ಯಾಂಕ್‌ ರಾಜು’ ಚಿತ್ರಕ್ಕೆ ಸಂಗೀತ ನಿರ್ದೇಶಿಸಿರುವ ಕಿರಣ್‌ ರವೀಂದ್ರನಾಥ್‌ ಅವರೇ ಮೊದಲ ಮಳೆಗೂ ಸಂಗೀತ ನೇಯ್ದಿದ್ದಾರೆ. ಖ್ಯಾತ ಸಿನಿಮಾಟೋಗ್ರಾಫರ್‌ ಸುಂದರ್‌ನಾಥ ಸುವರ್ಣ ಅವರ ಗರಡಿಯಲ್ಲಿ ಪಳಗಿರುವ ನಾಗಾರ್ಜುನ್‌ ಮಳೆಯ ಹನಿಗಳಿಗೆ ಕ್ಯಾಮೆರಾ ಕಣ್ಣಾಗಲಿದ್ದಾರೆ.

ಇದೇ 22ರಿಂದ ಸಿನಿಮಾ ಚಿತ್ರೀಕರಣ ಶುರುಮಾಡುವ ಉಮೇದಿನಲ್ಲಿದೆ ಚಿತ್ರತಂಡ. ‘ಚಿತ್ರೀರಣಕ್ಕೆ ಈಗಾಗಲೇ ಲೋಕೆಶನ್‌ಗಳನ್ನು ಆಯ್ಕೆ ಮಾಡಲಾಗಿದೆ. ಸಕಲೇಶಪುರ ಮತ್ತು ಚಿಕ್ಕಮಗಳೂರಿನ ಸುತ್ತಮುತ್ತಲಿನ ಜಾಗದಲ್ಲಿ ಪೂರ್ತಿ ಚಿತ್ರೀಕರಣ ನಡೆಯಲಿದೆ.
‘ಒಟ್ಟಾರೆ ಸಿನಿಮಾ ಮಲೆನಾಡಿನ ಆರ್ದ್ರ ವಾತಾವರಣದಂತಿರುತ್ತದೆ’ ಎಂದು ನಗುವ ಹೃದಯಶಿವ ಅವರಿಗೆ ತಮ್ಮ ಚಿತ್ರವನ್ನು ಜನರು ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.