ದಿನದಿಂದ ದಿನಕ್ಕೆ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾದ ವ್ಯಾಪ್ತಿ ಹೆಚ್ಚಾಗುತ್ತಾ ಇದೆ. ಶಿವರಾಜಕುಮಾರ್, ಹಿಂದಿ ಸಿನಿಮಾಗಳ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್, ತಮಿಳು ನಟ ಶರತ್ ಕುಮಾರ್ ಅವರ ಸೇರ್ಪಡೆಯ ಜೊತೆಗೆ ಇದೀಗ ನಟ ಅನಂತ್ ನಾಗ್ ಸೇರ್ಪಡೆಯಾಗಿದ್ದಾರೆ.
‘ಕಬೀರ’ನ ಗುರು ರಮಾನಂದನ ಪಾತ್ರದಲ್ಲಿ ಅಭಿನಯಿಸುತ್ತಿರುವ ಅನಂತ್ ನಾಗ್, ಶ್ರೀರಂಗಪಟ್ಟಣದಲ್ಲಿ ನಡೆದ ಚಿತ್ರೀಕರಣದಲ್ಲಿ ಹಲವಾರು ದೃಶ್ಯಗಳಿಗೆ ಕ್ಯಾಮೆರಾ ಎದುರಿಸಿದ್ದಾರೆ.
ನಾಲ್ಕು ಹಂತಗಳಲ್ಲಿ ಚಿತ್ರೀಕರಣ ಮುಗಿಸಿದ ‘ಸಂತೆಯಲ್ಲಿ ನಿಂತ ಕಬೀರ’ ಇದೀಗ ಐದನೇ ಹಂತಕ್ಕೆ ಬಂದು ನಿಂತಿದೆ. ಕಥಾ ನಾಯಕ ಶಿವರಾಜಕುಮಾರ್ ಹಾಗೂ ನಾಯಕಿ ಸನುಷ ಅಭಿನಯದ ಮತ್ತೊಂದು ಗೀತೆಯ ಚಿತ್ರೀಕರಣ ಸಹ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ ಎಂದು ನಿರ್ದೇಶಕ ಇಂದ್ರ ಬಾಬು ತಿಳಿಸಿದ್ದಾರೆ.
ಇಸ್ಮಾಯಿಲ್ ದರ್ಬಾರ್ ಅವರ ಸಂಗೀತ ನಿರ್ದೇಶನದಲ್ಲಿ ಕಬೀರರ ‘ದೋಹಾ’ಗಳನ್ನು ಪ್ರಮುಖವಾಗಿ ಸಿನಿಮಾದಲ್ಲಿ ಅಳವಡಿಸಲಾಗಿದೆ. ಸುಬ್ರಹ್ಮಣ್ಯ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರದಲ್ಲಿ ಶರತ್ ಕುಮಾರ್, ದತ್ತಣ್ಣ, ಅನಂತ್ ನಾಗ್, ಅವಿನಾಶ್, ಶರತ್ ಲೋಹಿತಾಶ್ವ, ಭಾಗೀರಥಿ ಬಾಯಿ ಕದಂ, ಸುನೀತಾ ರಾಮಾಚಾರಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಗೋಪಾಲ ವಾಜಪೇಯಿ ಅವರ ಚಿತ್ರ ಕಥೆ, ಸಂಭಾಷಣೆಗೆ ಮೂಲ ಆಧಾರ ಭೀಷ್ಮ ಸಾಹ್ನಿ ಅವರ ಕಥೆ. ಪ್ರಭು ರಾಘವೇಂದ್ರ ಅವರ ಕಲಾ ನಿರ್ದೇಶನ, ನವೀನ್ ಕುಮಾರ್ ಛಾಯಾಗ್ರಹಣ, ವಿಶ್ವ ಸಂಕಲನ ಒದಗಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.