ಬೆಂಗಳೂರು: ಕಣ್ಣುಗಳಲ್ಲೇ ನಟಿಸುತ್ತಿದ್ದ, ಮಾತುಗಳೊಂದಿಗೇ ಭಾವವನ್ನೂ ದಾಟಿಸುತ್ತಿದ್ದ ಬಾಲಿವುಡ್‌ನ ಪ್ರತಿಭಾನ್ವಿತ ನಟ ಇರ್ಫಾನ್ ಖಾನ್. ತೆರೆಯ ಮೇಲೆ ಮಾತ್ರವಲ್ಲ ತೆರೆಯಿಂದಾಚೆಗೂ ನೇರ, ದಿಟ್ಟ ನಡೆಯಿಂದ ಅಪಾರ ಅಭಿಮಾನಿಗಳ ಮನಗೆದ್ದ ನಟ ಇವರು. ಯಾವುದೇ 'ಸ್ಟಾರ್'ಗಳ ಶಿಫಾರಸು ಇಲ್ಲದೆ ಅಥವಾ ಮನೆತನದ ಹೆಸರಿಲ್ಲದೆ ತನ್ನ ಪ್ರತಿಭೆಯಿಂದಲೇ ಸಿನಿಮಾರಂಗದಲ್ಲಿ ಬೆಳೆದು ನಿಂತ ಇವರುಎಲ್ಲರಿಗೂ ಸ್ಫೂರ್ತಿಯಾಗಿದ್ದವರು. ಇರ್ಫಾನ್ ಖಾನ್ ಅವರ ವ್ಯಕ್ತಿತ್ವ ಮತ್ತು ನಟನೆ ಸದಾ ನೆನಪಿನಲ್ಲಿ ಉಳಿಯುವಂತದ್ದು.
ಅವರು ನಟಿಸಿದ 12ಸಿನಿಮಾಗಳ ಪಟ್ಟಿ ಇಲ್ಲಿದೆ.
1.ಮಕ್ಬೂಲ್
ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಕತೆ ಆಧಾರಿತ ಸಿನಿಮಾ ಮಕ್ಬೂಲ್. ನಿರ್ದೇಶನ ವಿಶಾಲ್ ಭಾರದ್ವಾಜ್, ಮಕ್ಬೂಲ್ ಕಥಾಪಾತ್ರದಲ್ಲಿ ಕಾಣಿಸಿಕೊಂಡ ಇರ್ಫಾನ್ ಖಾನ್ ಜನಮನ ಗೆದ್ದಿದ್ದರು.ಭಾರತದಲ್ಲಿ ಈ ಚಿತ್ರಕ್ಕೆ ಅಷ್ಟೊಂದು ಉತ್ತಮವಾದ ಬೆಂಬಲ ಸಿಗದೇ ಇದ್ದರೂ 2003ರಲ್ಲಿ ಟೊರೊಂಟೊ ಅಂತರರಾಷ್ಟ್ಪೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.
2.ಪಾನ್ ಸಿಂಗ್ ತೋಮರ್
ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಹಿಟ್ ಆಗಿದ್ದ ಪಾನ್ ಸಿಂಗ್ ತೋಮರ್‌ನಲ್ಲಿ ಇರ್ಫಾನ್ ನಟನೆಗೆ ಸಾಟಿಯೇ ಇಲ್ಲ. ಪಾನ್ ಸಿಂಗ್ ತೋಮರ್ ಭಾರತೀಯ ಸೇನೆಗೆ ಸೇರಿರುತ್ತಾನೆ. ಅಲ್ಲಿ ಆತನಿಗಿದ್ದ ಕ್ರೀಡಾ ಪ್ರತಿಭೆ ಹಿರಿಯ ಅಧಿಕಾರಿಗಳ ಕಣ್ಣಿಗೆ ಬೀಳುತ್ತದೆ. ಕ್ರೀಡೆಯಲ್ಲಿ ಆಸಕ್ತಿ ಇಲ್ಲದೇ ಇದ್ದರೂ ಕ್ರೀಡೆಯತ್ತ ಗಮನ ಹರಿಸುವ ಆತ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನ ಗೆಲ್ಲುತ್ತಾರೆ. ಆಮೇಲೆ ಊರಿನಲ್ಲಿ ಆಗುವ ಅನ್ಯಾಯದ ಬಗ್ಗೆ ಕೇಳಿ ಸೇನಾ ಜೀವನಕ್ಕೆ ನಿವೃತ್ತಿ ಘೋಷಿಸಿ ಅಲ್ಲಿಂದ ಊರಿಗೆ ಮರಳುತ್ತಾನೆ. ಅಲ್ಲಿನ ಅನ್ಯಾಯವನ್ನು ಗಮನಿಸುತ್ತಾ ನಂತರ ಚಂಬಲ್ ಕಣಿವೆ ದರೋಡೆಕೋರರ ಜತೆಯಲ್ಲಿ ಸೇರಿಕೊಳ್ಳುತ್ತಾನೆ. ಮುಂದೆ ಪೊಲೀಸ್ ಶೂಟ್ ಔಟ್‌ನಲ್ಲಿ ಕೊನೆಯುಸಿರು ಎಳೆಯುತ್ತಾನೆ. ಈ ಕಥಾಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿ ಇರ್ಫಾನ್ ಮನಗೆದ್ದಿದ್ದರು. ಇರ್ಫಾನ್ ಬದುಕಿನ ಉತ್ತಮ ನಟನೆಗಳಲ್ಲಿ ಆ ಸಿನಿಮಾ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ.
3.ದಿ ಲಂಚ್ ಬಾಕ್ಸ್
ಸಾಜನ್ ಫರ್ನಾಂಡಿಸ್ ಎಂಬ ವಿಧುರನ ಪಾತ್ರವನ್ನು ನಿರ್ವಹಿಸಿದ ಇರ್ಫಾನ್ ಖಾನ್ ಲಂಚ್ ಬಾಕ್ಸಿನ ಜತೆ ತೆರೆದು ಓದುವ ಕಾಗದ, ಅದರಲ್ಲಿನ ಅಡುಗೆಯ ಸವಿಯೊಂದಿಗೆ ಮೂಡುವ ನವಿರಾದ ಪ್ರೇಮವನ್ನು ಮನಮುಟ್ಟುವಂತೆ ನಟಿಸಿ ತೋರಿಸಿದ್ದಾರೆ.ರಿತೇಶ್ಬಾತ್ರಾ ನಿರ್ದೇಶನದ ಈ ಚಿತ್ರದಲ್ಲಿ ಇರ್ಫಾನ್ ಅವರ ಪ್ರತಿಭೆ ಎದ್ದು ಕಾಣುತ್ತದೆ.
4.ತಲ್ವಾರ್
ಮೇಘನಾ ಗುಲ್ಜಾರ್ ಅವರ ಈ ಸಿನಿಮಾದಲ್ಲಿ ಅಶ್ವಿನ್ ಕುಮಾರ್ ಎಂಬ ಪಾತ್ರದ ಮೂಲಕ ಇರ್ಫಾನ್ ಖಾನ್ ತನಿಖಾ ಅಧಿಕಾರಿಯ ಪಾತ್ರಕ್ಕೆ ಜೀವತುಂಬಿದ್ದಾರೆ.
5.ಪೀಕೂ
ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಇರ್ಫಾನ್ ಖಾನ್ ನಟನೆಯ ಚಿತ್ರ ಪೀಕೂ. ಶೂಜಿತ್ ಸರ್ಕಾರ್ ನಿರ್ದೇಶನದ ಈ ಚಿತ್ರದಲ್ಲಿ ಟ್ಯಾಕ್ಸಿ ಬ್ಯುಸಿನೆಸ್ ಮಾಲೀಕ ರಾಣಾ ಚೌಧರಿ ಪಾತ್ರದಲ್ಲಿ ಇರ್ಫಾನ್ ಮಿಂಚಿದ್ದರು. ಅಪ್ಪ ಮತ್ತು ಮಗಳ ಸಂಬಂಧ, ಮಲಬದ್ಧತೆ ಸಮಸ್ಯೆ ಅನುಭವಿಸುತ್ತಿರುವ ಅಪ್ಪ, ಅಪ್ಪನಿಗೆ ಸದಾ ಜತೆಯಾಗಿರುವ ಮಗಳು.ಅವರ ಜೀವನದ ನಡುವೆ ಟ್ಯಾಕ್ಸಿ ಚಾಲಕನಾಗಿ ರಾಣಾ ಬರುತ್ತಾರೆ. ಕೊಲ್ಕತ್ತಾದಲ್ಲಿರುವ ಊರಿಗೆ ಅಪ್ಪ ಮಗಳನ್ನು ಕರೆದೊಯ್ಯುವ ಈತ ದಾರಿಮಧ್ಯೆ ಆಗುವ ಸಂಭಾಷಣೆ ಮತ್ತು ಮಾನವ ಸಂಬಂಧಗಳಿಗೆ ಕನ್ನಡಿಯಾಗುವ ಸಿನಿಮಾವೇ ಪೀಕೂ.
6.ಹಿಂದಿ ಮೀಡಿಯಂ
ಪಾಕಿಸ್ತಾನಿ ನಟಿ ಸಬಾ ಖಮರ್ ಜತೆ ಇರ್ಫಾನ್ ಖಾನ್ ನಟಿಸಿದ ಫ್ಯಾಮಿಲಿ ಡ್ರಾಮಾ ಇದಾಗಿದ್ದು ಮಕ್ಕಳನ್ನು ಶಾಲೆಗೆ ಸೇರಿಸುವ ಸಮಸ್ಯೆಯ ಕಥೆಯನ್ನು ಹೊಂದಿದೆ, ಇದರದ್ದೇ ಸೀಕ್ವೆಲ್ ಅಂಗ್ರೇಜ್ ಮೀಡಿಯಂ ಇತ್ತೀಚೆಗೆ ತೆರೆ ಕಂಡಿದೆ.
7. ಸ್ಲಮ್ ಡಾಗ್ ಮಿಲೇನಿಯರ್
2008ರಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಈ ಚಿತ್ರದಲ್ಲಿ ಇರ್ಫಾನ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು.
8. ಹಾಸಿಲ್
ತಿಮಾಂಗ್ಶು ದುಲಿಯಾ 2003ರಲ್ಲಿ ನಿರ್ದೇಶಿಸಿದ ಚಿತ್ರದಲ್ಲಿ ಇರ್ಫಾನ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬೆಸ್ಟ್ ನೆಗೆಟಿವ್ ಪಾತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದರು.
9. ಹೈದರ್
ವಿಲಿಯಂ ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್ ಆಧಾರಿತ ಚಿತ್ರವಾದ ಹೈದರ್‌ನಲ್ಲಿ ರೂಹ್ದಾರ್ ಆಗಿ ಸಣ್ಣ ಕಥಾ ಪಾತ್ರದಲ್ಲಿ ಅಭಿನಯಿಸಿದ್ದರೂ ಗಮನ ಸೆಳೆವ ನಟನೆ ಇಲ್ಲಿ ಕಾಣಬಹುದು.
10.ಲೈಫ್ ಆಫ್ ಪೈ
ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಎನಿಸಿದ ಆಸ್ಕರ್ ಮುಡಿಗೇರಿಸಿಕೊಂಡ ಚಿತ್ರ ’ಲೈಫ್ ಆಫ್ ಪೈ‘. ಸೂರಜ್ ಶರ್ಮಾ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ಇರ್ಫಾನ್ ಖಾನ್ ಅವರದ್ದು ಬಹುಕಾಲ ನೆನಪಿನಲ್ಲಿ ಉಳಿಯುವ ಮನೋಜ್ಞ ಅಭಿನಯ. ಸಮುದ್ರದ ನಡುವೆ ಜೀವರಕ್ಷಕ ದೋಣಿಯಲ್ಲಿ, ಏಕಾಂಗಿಯಾಗುವ ಬಾಲಕ ಪೈ ಬಂಗಾಳಿ ಹುಲಿಯೊಂದಿಗೆ ಹಲವು ದಿನಗಳನ್ನು ಕಳೆಯುವ ಚಿತ್ರಣವಿದೆ.
11.ಕ್ಯಾರವಾನ್
ಸಾವ ನೋವಿನ ಪಯಣದಲ್ಲಿ ಬದುಕಿನ ತತ್ತ್ವವನ್ನು ಬಿಚ್ಚಿಡುವ ಸಿನಿಮಾ ‘ಕ್ಯಾರವಾನ್’. ಎದೆತಂತಿ ಮೀಟುವಷ್ಟು ತೀವ್ರವಾದ ಸಂಗತಿಯನ್ನು ಲಘು ಧಾಟಿಯಲ್ಲಿ ಹೇಳಿರುವ ಕ್ರಮ ಕಾಡುತ್ತದೆ. ಸಣ್ಣ ಸಣ್ಣ ಸೂಕ್ಷ್ಮಗಳ ಮೂಲಕ ಹೊಸಕಾಲದ ತಲ್ಲಣಗಳನ್ನು ಗುಪ್ತಗಾಮಿನಿಯಂತೆ ಸಿನಿಮಾ ತುಳುಕಿಸುತ್ತದೆ. ಪ್ರಶ್ನೆ, ಚರ್ಚೆಗಳು ಕೂಡ ಎಲ್ಲೂ ವಾಚ್ಯವಾಗುವುದಿಲ್ಲ. ಕಣ್ಣು ಮಿಟುಕಿಸದೇ ಇರಲಿ, ಮೌನವಾಗಿಯೇ ಇರಲಿ ನಟನೆಯಲ್ಲಿ ಇರ್ಫಾನ್ ಅವರನ್ನು ಅವರಿಗಷ್ಟೇ ಹೋಲಿಸಲು ಸಾಧ್ಯ.
12.ಬ್ಲ್ಯಾಕ್‌ಮೇಲ್
ಮಧ್ಯಮವರ್ಗದವರ ಆಧುನಿಕ ಬದುಕಿನ ಆರ್ಥಿಕ ಜಂಜಡ, ಭಾವಜಗತ್ತಿನ ತಲ್ಲಣ, ವ್ಯಭಿಚಾರ, ಟಾಯ್ಲೆಟ್ ಪೇಪರ್‌ಗೆ ಮಾರುಕಟ್ಟೆ ಒದಗಿಸಲು ಪ್ರಯೋಗಿಸುವ ‘ಎಂಬಿಎ ತಂತ್ರ’ ಇವೆಲ್ಲವನ್ನೂ ನಾಟಕೀಯ ರೀತಿಯಲ್ಲಿ, ಹಾಸ್ಯದ ಧಾಟಿಯಲ್ಲಿ ಕಟ್ಟಿಕೊಡುವ ಚಿತ್ರವಿದು. ಊಹಾತೀತ ತಿರುವುಗಳಿರುವ ಚಿತ್ರದಲ್ಲಿ ನಾಯಕ ಇರ್ಫಾನ್ ಖಾನ್, ಅರ್ಧ ಪಾವಿನಷ್ಟೂ ಮಾತಾಡಲ್ಲ. ವಿಡಿಯೊ ಗೇಮ್ ಆಡುವಾಗ ಮನಸ್ಸಿನಲ್ಲಿ ಉತ್ಪಾದನೆಯಾ ಗಬಹುದಾದ ರಸಗಳನ್ನೇ ಈ ಸಿನಿಮಾ ಉಕ್ಕಿಸುತ್ತದೆ. ಎಂಥ ಪಾತ್ರಗಳಿಗೂ ಇರ್ಫಾನ್ ಖಾನ್ ಹೊಸ ಪ್ರಭೆ ನೀಡಬಲ್ಲರು ಎನ್ನುವುದಕ್ಕೆ ಈ ಸಿನಿಮಾದಲ್ಲಿ ಸಾಕಷ್ಟು ಉದಾಹಣೆಗಳು ಸಿಗುತ್ತವೆ. ಕಣ್ಣಿನಲ್ಲಿ ನಟಿಸಬೇಕು ಎನ್ನುವ ಅವರ ಸಂಕಲ್ಪವಿಲ್ಲಿ ಸಾಕಾರಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.