ಮುಂಬೈ: ಐಎಂಡಿಬಿಯ ಭಾರತದ ಟಾಪ್ 250 ಚಿತ್ರಗಳಲ್ಲಿ ಹಿಂದಿಯ ‘12th ಫೇಲ್’ ಸಿನಿಮಾ 9.2 ರೇಟಿಂಗ್ಸ್ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದೆ. ಆ ಮೂಲಕ ದೊಡ್ಡ ಬ್ಯಾನರ್ ಸಿನಿಮಾಗಳಿಗೆ ಸಡ್ಡು ಹೊಡೆದಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬೆಳ್ಳಿತೆರೆಗೆ ಬಂದ ಈ ಸಿನಿಮಾ ಸಿನಿರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ವಿದು ವಿನೋದ್ ಚೋಪ್ರಾ ನಿರ್ದೇಶನದ ಈ ಚಿತ್ರದಲ್ಲಿ ವಿಕ್ರಾಂತ್ ಮೆಸ್ಸಿ ಮತ್ತು ಮೇಧಾ ಶಂಕರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಒಟಿಟಿಯಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಐಎಂಡಿಬಿಯಲ್ಲಿ ಮಾತ್ರವಲ್ಲದೇ ‘ಲೆಟರ್ ಬಾಕ್ಸ್ ಡಿ’ಯ ‘ಹೈಎಸ್ಟ್ ರೇಟೆಂಡ್ ಡ್ರಾಮಾ’ ಪಟ್ಟಿಯಲ್ಲೂ ಸ್ಥಾನ ಪಡೆದುಕೊಂಡಿದೆ.
ಮನೋಜ್ ಶರ್ಮಾ ಎಂಬ ಐಪಿಎಸ್ ಅಧಿಕಾರಿಯ ಜೀವನಾಧಾರಿತ ಚಿತ್ರ 12th ಫೇಲ್, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪ್ರವೇಶ ಪರೀಕ್ಷೆ ಬರೆಯುವ ಸಾವಿರಾರು ವಿದ್ಯಾರ್ಥಿಗಳ ಪಾಡನ್ನು ವಿವರಿಸಿದೆ. ವೈಫಲ್ಯದ ನಡುವೆಯೂ ಭರವಸೆ ಕಳೆದುಕೊಳ್ಳಬಾರದು ಎಂಬ ಸಂದೇಶವನ್ನು ನೀಡಿದೆ.
ಉಳಿದಂತೆ ಇಂಗ್ಲೀಷ್‌ನ ‘ಸ್ಪೈಡರ್ ಮ್ಯಾನ್–ಅಕ್ರಾಸ್ ದ ಸ್ಪೈಡರ್ ವರ್ಸ್’ ಸಿನಿಮಾ 8.6 ರೇಟಿಂಗ್ ಪಡದಿದೆ. ‘ಓಪನ್ ಹೈಮರ್’ 8.4, ‘ಗಾಡ್ಜಿಲ್ಲಾ ಮೈನಸ್ ಒನ್’ 8.2, ಕನ್ನಡದ ‘ಕೈವಾ’ 8.2 ರೇಟಿಂಗ್ ಪಡೆದುಕೊಂಡಿವೆ.
ಏನಿದು ಐಎಂಡಿಬಿ?
ಐಎಂಡಿಬಿ ಎಂದರೆ ಇಂಟರ್ನೆಟ್ ಮೂವಿ ಡೇಟಾ ಬೇಸ್ ಎಂದಾಗಿದೆ. ಐಎಂಡಿಬಿ ಸಿನಿಮಾ ರಂಗದ ಅತ್ಯಂತ ಉತ್ತಮ ಗುಣಮಟ್ಟದ ರೇಟಿಂಗ್ಸ್ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಅಂತರರಾಷ್ಟ್ರೀಯ ಚಲನಚಿತ್ರಗಳು, ದೂರದರ್ಶನ ಕಾರ್ಯಕ್ರಮಗಳು, ಸಿನಿ ರಂಗದ ಸೆಲೆಬ್ರಿಟಿಗಳು, ನಿರ್ದೇಶಕ, ನಿರ್ಮಾಪಕರ ಮಾಹಿತಿಗಳನ್ನು ಒಳಗೊಂಡ ಅಂತರ್ಜಾಲ ದತ್ತಾಂಶ ಸಂಗ್ರಹ ಜಾಲತಾಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.