ADVERTISEMENT

ಸೆಟ್ಟೇರಿದ ಹಾರರ್, ಸಸ್ಪೆನ್ಸ್ ಕಥಾಹಂದರದ 1900 ಚಿತ್ರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 10:22 IST
Last Updated 10 ಅಕ್ಟೋಬರ್ 2022, 10:22 IST
ಡಾ.ಪೂಜಾ ರಮೇಶ್‌
ಡಾ.ಪೂಜಾ ರಮೇಶ್‌   

ಹಾರರ್, ಸಸ್ಪೆನ್ಸ್ ಕಥಾಹಂದರದ ‘1900’ ಚಿತ್ರದ ಮುಹೂರ್ತವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಮೊದಲ ದೃಶ್ಯಕ್ಕೆ ‘ಲವ್ ಮಾಕ್ಟೆಲ್’ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಪದ್ಮಾವತಿ ಪ್ರೊಡಕ್ಷನ್ ಅಡಿಯಲ್ಲಿ ರಾಜೇಶ್‌ ಬಿ. ಮತ್ತು ಉಮೇಶ್‌ ಕೆ.ಎನ್. ಬಂಡವಾಳ ಹೂಡುತ್ತಿದ್ದಾರೆ. ಮೂಡಬಿದಿರೆಯ ರಾಜೇಶ್‌ ಬಿ. ಮೂಲತಃ ನಟ. ಇದರ ಅನುಭವದಿಂದಲೇ ಸಿನಿಮಾಕ್ಕೆ ಕಥೆ, ನಿರ್ದೇಶನ ಮಾಡುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಉಮೇಶ್‌ ಕೆ.ಎನ್. ದುಡಿದ ಹಣವನ್ನು ಚಿತ್ರಕ್ಕೆ ವಿನಿಯೋಗಿಸುತ್ತಿದ್ದು ಅಲ್ಲದೆ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ‘ಶಾಪ ಎನ್ನುವುದು ಇನ್ನೂ ಜೀವಂತವಾಗಿ ಉಳಿದಿದೆ’ ಎಂದು ಇಂಗ್ಲಿಷ್‌ನಲ್ಲಿ ಅಡಿಬರಹವಿದೆ.

1900ರಲ್ಲಿ ಶುರುವಾಗುವ ಕಥೆಯು ಶಿವಪುರ ಗ್ರಾಮದಲ್ಲಿ ತೆರೆದುಕೊಳ್ಳುತ್ತದೆ. ಅತೀಂದ್ರೀಯ ವಿದ್ಯೆಗಳನ್ನು ಕಲಿತಿರುವ ಹುಂಬನೊಬ್ಬ ಅಲ್ಲಿನ ಹಿತಕ್ಕಾಗಿ ನರಬಲಿ ಕೊಡುತ್ತಿರುತ್ತಾನೆ. ಇದನ್ನು ತಿಳಿದ ಜನರು ಈತನನ್ನು ಜೀವಂತ ಸುಡುತ್ತಾರೆ. ಆ ಸಂದರ್ಭದಲ್ಲಿ ಇವನು ಶಾಪ ಕೊಡುತ್ತಾನೆ. ಅದೇ ಶಾಪವು ಪ್ರಸಕ್ತ ಕಾಲಕ್ಕೂ ಮುಂದುವರಿದಿರುತ್ತದೆ. ಇದನ್ನು ತನಿಖೆ ಮಾಡಲು ಪ್ರಾಚ್ಯವಸ್ತು ಮತ್ತು ವಸ್ತು ಸಂಗ್ರಹಾಲಯಗಳ ಇಲಾಖೆಯ ಅಧಿಕಾರಿ ನೇಮಕಗೊಳ್ಳುತ್ತಾರೆ. ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ನಡೆಯುವ ಘಟನೆಗಳು, ಕೊನೆಗೆ ಗ್ರಾಮವನ್ನು ಕಷ್ಟದಿಂದ ಪಾರು ಮಾಡುತ್ತಾರಾ? ಎಂಬುದು ಕಥೆಯ ಎಳೆ.

ADVERTISEMENT

ಕಿರುತೆರೆ ನಟಿ ಡಾ.ಪೂಜಾ ರಮೇಶ್ ಈ ಹಿಂದೆ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದು, ಇದರ ಮುಖಾಂತರ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ವಿ.ಮನೋಹರ್, ಮಿಮಿಕ್ರಿಗೋಪಿ, ಮಜಾಭಾರತ ಚಂದ್ರಪ್ರಭಾ, ಗುರುದೇವ್, ಮದನ್‌ರಾಜ್, ಮೀರಶ್ರೀ, ಚೈತನ್ಯಶೆಟ್ಟಿ ತಾರಾಬಳಗವಿದೆ. ಸಂಗೀತ ಸಂಯೋಜಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಛಾಯಾಗ್ರಹಣ ಅರುಣ್‌ನಾಗ್, ಸಂಕಲನ ನಾನಿಕೃಷ್ಣ ಅವರದಾಗಿದೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಮೂಡಿಗೆರೆ, ಕನಕಪುರ ಕಡೆಗಳಲ್ಲಿ ಅಕ್ಟೋಬರ್ ಕೊನೆಯವಾರದಿಂದ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.