ADVERTISEMENT

ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ 20 ಆರೋಪ: ಪಾರದರ್ಶಕ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 13:47 IST
Last Updated 13 ಜನವರಿ 2021, 13:47 IST
ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು –ಪ್ರಜಾವಾಣಿ ಚಿತ್ರ
ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಚಲನಚಿತ್ರ ವಾಣಿಜ್ಯ ಮಂಡಳಿಯ ವಿರುದ್ಧ ಕೇಳಿಬಂದಿರುವ ಆಪಾದನೆಗಳ ಸತ್ಯಾಸತ್ಯತೆಯ ಪರಿಶೀಲನೆಗೆ ಪಾರದರ್ಶಕ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಾನ ಮನಸ್ಕ ನಿರ್ಮಾಪಕರು ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಆಗ್ರಹಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಸಮಾನಮನಸ್ಕ ನಿರ್ಮಾಪಕರ ಪರವಾಗಿ ಮಾತನಾಡಿದ ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು, ಈ ಸಂಬಂಧ ಸಹಕಾರ ಸಂಘಗಳ ಉಪ ನಿಂಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗೂ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.

‘ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪ್ರತಿ ವರ್ಷ ಲೆಕ್ಕಕ್ಕೆ ಮಾತ್ರ ಸರ್ವ ಸದಸ್ಯರ ಸಭೆ ನಡೆಯುತ್ತದೆ. ಅದರಲ್ಲಿ ಚಿತ್ರರಂಗದ ಅಭಿವೃದ್ಧಿಯ ಚರ್ಚೆಯಾಗಲಿ, ಲೆಕ್ಕಪತ್ರಗಳ ಕೂಲಂಕಶ ಪರಿಶೀಲನೆಯಾಗಲಿ ನಡೆಯದೆ, ಗದ್ದಲ ಗಲಾಟೆಯಲ್ಲಿ ಮುಗಿದು ಹೋಗುವುದು ಎಲ್ಲ ಸದಸ್ಯರಿಗೂ ತಿಳಿದಿರುವ ಕಹಿ ಸತ್ಯ. ಆದರೂ ಸಂಸ್ಥೆಯನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದ ಈವರೆಗೆ ಸಹಿಸಿಕೊಂಡಿದ್ದೇವೆ. ಸ್ವಜನಪಕ್ಷಪಾತ, ಹಣ ದುರುಪಯೋಗ, ಬೈಲಾ ಉಲ್ಲಂಘನೆ, ನಿಯಮ ಬಾಹಿರ ಚಟುವಟಿಕೆಗಳು ಸೇರಿದಂತೆ ಸುಮಾರು 20 ಅಂಶಗಳ ಗುರುತರ ಆಪಾದನೆಗಳನ್ನು ಮಾಡಿ ಕೆಲವರು ದೂರು ನೀಡಿದ್ದಾರೆ. ಈ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸುವಂತೆ ಸುಮಾರು 70 ಮಂದಿ ನಿರ್ಮಾಪಕರು, ವಿತರಕರು, ಪ್ರದರ್ಶಕರು ಹಾಗೂ ನಿರ್ದೇಶಕರು ಪತ್ರದಲ್ಲಿ ಒತ್ತಾಯಿಸಿದ್ದೇವೆ. ಮುಖ್ಯಮಂತ್ರಿಗೂ ದೂರು ಸಲ್ಲಿಸಲು ನಿರ್ಧರಿಸಿದ್ದೇವೆ’ ಎಂದರು.

ADVERTISEMENT

‘ಕೃಷ್ಣೇಗೌಡ ಮತ್ತು ಇತರರು ಸಹಕಾರ ಸಂಘಗಳ ಉಪ ನಿಬಂಧಕರಿಗೆ ನೀಡಿದ ದೂರಿನನ್ವಯ ಪರಿಶೀಲನೆಗೆ ಅಧಿಕಾರಿಯನ್ನು ನೇಮಿಸಲಾಗಿದೆ. ವಾಣಿಜ್ಯಮಂಡಳಿಯಲ್ಲಿ ಕೆಲವರು ಸಚಿವರು ಮತ್ತು ಶಾಸಕರನ್ನು ಮುಂದಿಟ್ಟುಕೊಂಡು ಈ ಆರೋಪಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್, ಕವಿತಾ ಲಂಕೇಶ್, ಜೋಸೈಮನ್, ರಾಮು, ಜೈಜಗದೀಶ್, ಶೈಲೇಂದ್ರ ಬಾಬು, ನಾಗತಿಹಳ್ಳಿ ಚಂದ್ರಶೇಖರ್‌ ಕೂಡ ಇದ್ದರು.

ಏನಿದು ಆರೋಪ?

ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪ್ರತಿ ವರ್ಷ ನಿಗದಿತ ಅವಧಿಗೆ ಚುನಾವಣೆ ನಡೆಸದೆ 3ರಿಂದ 6 ತಿಂಗಳು ಅಥವಾ ವರ್ಷಗಟ್ಟಲೆ ಚುನಾವಣೆ ಮುಂದೂಡಲಾಗುತ್ತಿದೆ. ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಮಗ ಅನುಪ್‌ ಅವರು ಮಂಡಳಿಯ ಪ್ರಾಥಮಿಕ ಸದಸ್ಯತ್ವ ಪಡೆಯದಿದ್ದರೂ ಅವರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಕಾನೂನು ಬಾಹಿರವಾಗಿ ನೇಮಿಸಲಾಗಿದೆ. ಎರಡು ಶೌಚಾಲಯಗಳ ದುರಸ್ತಿಗೆ ₹30 ಲಕ್ಷ ವಿನಿಯೋಗಿಸಿರುವ ಲೆಕ್ಕ ತೋರಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ ವೇಳೆ ಸರ್ಕಾರದಿಂದ ನೀಡಿದ ಆಹಾರ ಸಾಮಗ್ರಿ ವಿತರಣೆ ಮತ್ತು ಮಂಡಳಿಯಿಂದ ಹಣಕಾಸು ನೆರವು ನೀಡುವುದರಲ್ಲೂ ದುರುಪಯೋಗವಾಗಿದೆ ಎಂಬುದು ಸೇರಿದಂತೆ ಸುಮಾರು 20 ಲೋಪಗಳನ್ನು ಪಟ್ಟಿ ಮಾಡಿ, ತನಿಖೆ ನಡೆಸುವಂತೆ ಕೃಷ್ಣೇಗೌಡ ಮತ್ತು ಪ್ರದೀಪ್‌ ಎಂಬುವವರು ಸಹಕಾರ ಸಂಘಗಳ ಉಪ ನಿಂಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗೆ ದೂರು ಸಲ್ಲಿಸಿದ್ದರು.

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ವಿವರಣೆ ಕೇಳಿ ಉಪ ನಿಂಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ನೋಟಿಸ್‌ ನೀಡಿದ್ದಾರೆ. ವಾಣಿಜ್ಯ ಮಂಡಳಿಯ ಚಟುವಟಿಕೆಗಳಲ್ಲಿ ಹಲವಾರು ಗಂಭೀರ ಸ್ವರೂಪದ ನ್ಯೂನತೆಗಳು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಕಲಂ 25ರಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು 2020ರ ಡಿಸೆಂಬರ್‌ 24ರಂದು ಮಧ್ಯಂತರ ಆದೇಶ ಕೂಡ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.