2022ನೇ ಇಸವಿ ಅಂತ್ಯವಾಗಲು ಇನ್ನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಹೊಸ ವರ್ಷವನ್ನು ಸ್ವಾಗತ ಮಾಡಲು ಇಡೀ ಜಗತ್ತು ಎದುರು ನೋಡುತ್ತಿದೆ. ಕ್ರಿಸ್ಮಸ್‌ನ ಸಂಭ್ರಮ ಜಗತ್ತಿನಾದ್ಯಂತ ಮನೆ ಮಾಡಿದೆ. 2022ಕ್ಕೆ ವಿದಾಯ ಕೋರುವ ಸಂದರ್ಭದಲ್ಲಿ, ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿದ ಪ್ರಮುಖ ಐದು ಸಿನಿಮಾಗಳ ಸಂಕ್ಷಿಪ್ತ ವಿವರ ಇಲ್ಲಿದೆ.
1. ಮೇಜರ್
2008ರ ನವೆಂಬರ್ 26 ರ ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಕನ್ನಡಿಗ ಯೋಧ, ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಅವರ ಜೀವನಾಧಾರಿತ ‘ಮೇಜರ್‘ ಚಿತ್ರವು ಸಿನಿ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯ್ತು. ಬಹುಭಾಷೆಯಲ್ಲಿ ಹೊರಬಂದ ಈ ಚಿತ್ರದಲ್ಲಿ ಅದ್ವಿಶೇಷ್, ಸಂದೀಪ್ ಉಣ್ಣಿಕೃಷ್ಣನ್ ಅವರ ಪಾತ್ರದಲ್ಲಿ ನಟಿಸಿದ್ದರು. ಅದ್ವಿಶೇಷ್ ಅವರ ನಟನೆ ನೋಡುಗರ ಮನಸೂರೆಗೊಳಿಸಿತ್ತು. ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡ ಈ ಸಿನಿಮಾವು, ದೇಶದಾದ್ಯಂತ ಸಿನಿ ರಸಿಕರ ಮೆಚ್ಚುಗೆ ಗಳಿಸಿತ್ತು.
2. ಕಾಂತಾರ
ಕರ್ನಾಟಕದ ಕರಾವಳಿಯ ತಳ ಸಮುದಾಯದ ಜೀವನಚಿತ್ರ ಹಾಗೂ ತುಳುನಾಡಿನ ‘ಭೂತಾರಾಧನೆ‘ಯನ್ನು ಕಟ್ಟಿಕೊಟ್ಟ ‘ಕಾಂತಾರ‘ ಸಿನಿಮಾ ಈ ವರ್ಷದ ಭಾರತೀಯ ಸಿನಿರಂಗದ ಅಚ್ಚರಿಗಳಲ್ಲಿ ಒಂದು. ಹೆಚ್ಚಿನ ಪ್ರಚಾರ ಇಲ್ಲದೆ ಕನ್ನಡದಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಬಳಿಕ ಸಿಕ್ಕ ಪ್ರತಿಕ್ರಿಯೆ ಮಾತ್ರ ಅಭೂತಪೂರ್ವ. ಅದ್ಭುತ ಕ್ಲೈಮಾಕ್ಸ್ ಮೂಲಕ ಪ್ರೇಕ್ಷಕರಿಗೆ ವಿಶಿಷ್ಟ ಅನುಭೂತಿ ನೀಡಿದ ಈ ಚಿತ್ರವು, ಬಳಿಕ ಹಿಂದಿ, ತೆಲುಗು, ಮಲಯಾಳಂ, ತಮಿಳು ಹಾಗೂ ತುಳುವಿಗೂ ಡಬ್ ಆಯ್ತು. ರಿಷಭ್ ಶೆಟ್ಟಿ ನಾಯಕ ನಟನಾಗಿದ್ದ ಈ ಸಿನಿಮಾದ ನಿರ್ದೇಶಕರೂ ಕೂಡ ಅವರೇ.
3. ಪೊನ್ನಿಯಿನ್ ಸೆಲ್ವಂ
ಸ್ಟಾರ್ ನಿರ್ದೇಶಕ ಮಣಿರತ್ನಂ ನಿರ್ದೇಶನದ ಸಿನಿಮಾ, ತಮಿಳು ಭಾಷೆಯಲ್ಲಿ ಬಿಡುಗಡೆಗೊಂಡು ದೇಶದಾದ್ಯಂತ ಸದ್ದು ಮಾಡಿತು. ಕಲ್ಕಿ ಕೃಷ್ಣಮೂರ್ತಿ ಅವರು ಬರೆದ ಚೋಳ ಸಾಮ್ರಾಜ್ಯದ ಮೊದಲನೇ ರಾಜರಾಜ ಚೋಳ ಅವರ ಜೀವನಾಧರಿತ ಈ ಚಿತ್ರದಲ್ಲಿ ಕಾರ್ತಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ಭಾರಿ ಯಶಸ್ಸು ಪಡೆದ ಈ ಚಿತ್ರವು ಬಳಿಕ ಹಿಂದಿ, ತೆಲುಗು, ಕನ್ನಡಕ್ಕೂ ಪೊನ್ನಿಯಿನ್ ಸೆಲ್ವಂ ಡಬ್ ಆಯ್ತು.
4. ಕೆ.ಜಿ.ಎಫ್ –2
ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರ ಒಂದು ಸಾವಿರ ಕೋಟಿಗೂ ಅಧಿಕ ಗಳಿಕೆ ಕಂಡು ದಾಖಲೆ ಬರೆಯಿತು. ಚಿತ್ರದ ಬಿಜಿಎಂ, ಗ್ರಾಫಿಕ್ಸ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯ್ತು. ‘ವೈಲೆನ್ಸ್ ವೈಲೆನ್ಸ್ ವೈಲೆನ್ಸ್‘ ಅನ್ನುವ ಯಶ್ ಅವರ ಡೈಲಾಗ್ ಸಿನಿ ಪ್ರೀಯರ ಬಾಯಲ್ಲಿ ತಿಂಗಳುಗಟ್ಟಲೆ ಹರಿದಾಡಿತ್ತು. ಕನ್ನಡ ಮೂಲದ ಸಿನಿಮಾವೊಂದ ಹಲವು ಭಾಷೆಗಳಲ್ಲಿ ತೆರೆ ಕಂಡು ಯಶಸ್ವಿ ಎನಿಸಿಕೊಂಡಿತು.
5. ಆರ್‌ಆರ್‌ಆರ್
ಬಾಹುಬಲಿ –2 ಬಳಿಕ ಎಸ್.ಎಸ್ ರಾಜಮೌಲಿ ನಿರ್ದೇಶನ ಮಾಡಿದ ಮತ್ತೊಂದು ಬ್ಲಾಕ್‌ಬಸ್ಟರ್ ಚಿತ್ರ ಇದು. ರಾಮ್ ಚರಣ್, ಜ್ಯೂನಿಯರ್ ಎನ್‌ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ ಮುಂತಾದ ಸ್ಟಾರ್ ನಟರು ಇದರಲ್ಲಿ ಅಭಿನಯಿಸಿದ್ದಾರೆ. ಕೇವಲ ಭಾರತದಲ್ಲ ಮಾತ್ರವಲ್ಲ, ವಿಶ್ವ ಮಟ್ಟದಲ್ಲೂ ಈ ಚಿತ್ರ ಭಾರಿ ಸದ್ದು ಮಾಡಿದೆ. ಚಿತ್ರದ ‘ನಾಟು ನಾಟು‘ ಹಾಡು ಭಾರೀ ಪ್ರಸಿದ್ಧಿ ಪಡೆಯಿತಲ್ಲದೆ, ಆಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.