ತೆಲುಗು ನಟ ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರದ ಟೀಸರ್‌ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿಂದು ಬಿಡುಗಡೆಗೊಳ್ಳುತ್ತಿದೆ. ಹೀಗಾಗಿ ಅಯೋಧ್ಯೆಯಲ್ಲಿಂದು ಚಿತ್ರದ 50 ಅಡಿ ಎತ್ತರದ ಪೋಸ್ಟರ್ ರಾರಾಜಿಸುತ್ತಿದೆ. ಜೊತೆಗೆ ಇಲ್ಲಿನ ಜನ ಬಾಹುಬಲಿ ಖ್ಯಾತಿಯ ಪ್ರಭಾಸ್ ಬರುವಿಕೆಗಾಗಿ ಕಾದು ಕುಳಿತಿದ್ದಾರೆ. 10 ಸಾವಿರಕ್ಕೂ ಅಧಿಕ ಅಭಿಮಾನಿಗಳು ಸೇರುವ ನಿರೀಕ್ಷೆಯಿದ್ದು, 250 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಇಂದು ಸಂಜೆ 7.11ಕ್ಕೆ ಸರಯೂ ನದಿ ತಟದಲ್ಲಿ ಆದಿಪುರುಷ್ ಟೀಸರ್‌ಬಿಡುಗಡೆಗೊಳ್ಳಲಿದೆ. ಪ್ರಭಾಸ್, ಕೃತಿ ಸನನ್, ನಿರ್ದೇಶಕ ಓಂ ರಾವತ್, ನಿರ್ಮಾಪಕ ಭೂಷಣ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಶ್ರೀರಾಮನಾಗಿ ಕಾಣಿಸಿಕೊಂಡಿರುವ ಪ್ರಭಾಸ್, ಚಿತ್ರದ ಮೊದಲ ನೋಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಆರಂಭ. ಅಯೋಧ್ಯೆಯ ಸರಯೂ ನದಿಯ ತಟದಲ್ಲಿ ನಮ್ಮನ್ನು ಸೇರಿಕೊಳ್ಳಿ. ಅ.2ರಂದು ಚಿತ್ರದ ಮೊದಲ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದರು.
‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಸೈಫ್ ಅಲಿ ಖಾನ್ ರಾವಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೃತಿ ಸನನ್ ಸೀತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜ.12, 2023ರಂದು ಚಿತ್ರ ತೆರೆಗೆ ಬರಲಿದೆ ಎಂದು ಪ್ರಭಾಸ್ ಪೋಸ್ಟ್‌ನಲ್ಲಿ ಹೇಳಿದ್ದರು.
ಪೌರಾಣಿಕ ಕಥಾ ಹಂದರವುಳ್ಳ ಹಿಂದಿ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ‘ಆದಿಪುರುಷ್’ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಟಿ ಸೀರೀಸ್ ಪ್ರೊಡಕ್ಸನ್ ಕಂಪನಿ ಈ ಚಿತ್ರವನ್ನು ಸುಮಾರು ₹500 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ. ಅಜಯ್ ದೇವಗನ್ ಅಭಿನಯದ ‘ತಾನಾಜಿ’ ಸಿನಿಮಾ ನಿರ್ದೇಶಿಸಿದ್ದ ಓಂ ರಾವುತ್ ‘ಆದಿಪುರುಷ್’ ನಿರ್ದೇಶನ ಮಾಡುತ್ತಿದ್ದಾರೆ. ಇದು 3ಡಿ ಯಲ್ಲಿ ಮೂಡಿಬರುತ್ತಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.