ADVERTISEMENT

ನಟ ರಜನಿಕಾಂತ್‌ಗೆ ದಾದಾಸಾಹೇಬ್‌ ಫಾಲ್ಕೆ

ಏಜೆನ್ಸೀಸ್
Published 1 ಏಪ್ರಿಲ್ 2021, 20:13 IST
Last Updated 1 ಏಪ್ರಿಲ್ 2021, 20:13 IST
ತಲೈವಾ ರಜನಿಕಾಂತ್‌
ತಲೈವಾ ರಜನಿಕಾಂತ್‌   

ನವದೆಹಲಿ: ಅಭಿಮಾನಿಗಳು ‘ತಲೈವಾ’ (ನಾಯಕ) ಎಂದು ಮೆಚ್ಚುಗೆಯಿಂದ ಕರೆಯುವ ತಮಿಳು ಸಿನಿಮಾ ತಾರೆ ರಜನಿಕಾಂತ್‌ ಅವರಿಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಗುರುವಾರ ಘೋಷಿಸಲಾಗಿದೆ.

ಭಾರತೀಯ ಸಿನಿಮಾದ ಪಿತಾಮಹ ದಾದಾಸಾಹೇಬ್‌ ಫಾಲ್ಕೆ ಹೆಸರಿನಲ್ಲಿ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. 2019ನೇ ಸಾಲಿನ ಈ ಪ್ರಶಸ್ತಿಯನ್ನು ರಜನಿಕಾಂತ್‌ ಅವರಿಗೆ ಮೇ 3ರಂದು ಪ್ರದಾನ ಮಾಡಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಪ್ರಕಟಿಸಿದ್ದಾರೆ. 70 ವರ್ಷದ ರಜನಿಕಾಂತ್‌ ಅವರು ಈ ಪ್ರಶಸ್ತಿ ಪಡೆಯಲಿರುವ 51ನೇ ಸಾಧಕ.

ಪ್ರಶಸ್ತಿಯ ಸಂಭ್ರಮವನ್ನು ರಜನಿಕಾಂತ್‌ ಅವರು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ. ‘ಪ್ರತಿಷ್ಠಿತ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಭಾರತ ಸರ್ಕಾರ, ಗೌರವಾನ್ವಿತ ಮತ್ತು ಆತ್ಮೀಯ ನರೇಂದ್ರ ಮೋದಿ, ಪ್ರಕಾಶ್‌ ಜಾವಡೇಕರ್‌, ಆಯ್ಕೆ ಸಮಿತಿಗೆ ಹೃತ್ಪೂರ್ವಕ ಧನ್ಯವಾದ. ನನ್ನ ಪಯಣದ ಭಾಗವಾಗಿರುವ ಎಲ್ಲರಿಗೂ ಈ ಪ್ರಶಸ್ತಿಯನ್ನು ಪ್ರಾಮಾಣಿಕವಾಗಿ ಅರ್ಪಿಸುತ್ತಿದ್ದೇನೆ’ ಎಂದು ರಜನಿಕಾಂತ್‌ ಹೇಳಿದ್ದಾರೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಜನಿಕಾಂತ್‌ ಅವರನ್ನು ಕೊಂಡಾಡಿದ್ದಾರೆ. ‘ತಲೆಮಾರುಗಳಿಂದ ಜನಪ್ರಿಯರಾಗಿರುವ, ನಾವು ಹೆಮ್ಮೆ ಪಡಬಹುದಾದಷ್ಟು ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿರುವ, ಅಕ್ಕರೆಯ ವ್ಯಕ್ತಿತ್ವದವರುರಜನಿಕಾಂತ್‌. ತಲೈವಾ ಅವರಿಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವುದು ಅಪಾರ ಸಂಭ್ರಮದ ವಿಚಾರ. ನಿಮಗೆ ಅಭಿನಂದನೆಗಳು’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.