ನವದೆಹಲಿ: 5ಜಿ ತಂತ್ರಜ್ಞಾನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜೂಹಿ ಚಾವ್ಲಾ ಅವರಿಗೆ ವಿಧಿಸಲಾಗಿದ್ದ ₹20 ಲಕ್ಷ ದಂಡವನ್ನು ₹2 ಲಕ್ಷಕ್ಕೆ ಇಳಿಸಿ ದೆಹಲಿ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.
ದೇಶದಲ್ಲಿ 5ಜಿ ನೆಟ್‌ವರ್ಕ್ ಅನ್ನು ಜಾರಿಗೊಳಿಸಬಾರದು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಚಾವ್ಲಾ ಅವರು ಕಳೆದ ವರ್ಷದ ಮೇ ತಿಂಗಳಲ್ಲಿ ದೆಹಲಿ ಹೈಕೋರ್ಟ್‌ನ ಮೊರೆಹೋಗಿದ್ದರು.
ಚಾವ್ಲಾ ಅವರ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜೆ.ಆರ್.ಮಿಧಾ, ‘ಅರ್ಜಿಯು ದೋಷದಿಂದ ಕೂಡಿದ್ದು, ಪ್ರಚಾರ ಪಡೆಯಬೇಕು ಎಂಬ ಉದ್ದೇಶ ಹೊಂದಿದೆ’ ಎಂಬುದಾಗಿ ತಿಳಿಸಿದ್ದರು. ಅಲ್ಲದೇ ಚಾವ್ಲಾ ಅವರಿಗೆ ₹20 ಲಕ್ಷ ದಂಡವನ್ನೂ ಸಹ ವಿಧಿಸಿದ್ದರು.
ಚಾವ್ಲಾಗೆ ದಂಡ ವಿಧಿಸಿದ್ದ ತೀರ್ಪಿನ ಕುರಿತ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರನ್ನು ಒಳಗೊಂಡ ನ್ಯಾಯಪೀಠವು ಕೈಗೆತ್ತಿಕೊಂಡಿತ್ತು.
'ಕ್ಷುಲ್ಲಕ ಕಾರಣಕ್ಕೆ ಹಾಗೂ ಸುಖಾಸುಮ್ಮನೆ' 5ಜಿ ವಿಚಾರವನ್ನು ಜೂಹಿ ಚಾವ್ಲಾ ಪ್ರಸ್ತಾಪಿಸಿಲ್ಲವೆಂದು ಈ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
5ಜಿ ತಂತ್ರಜ್ಞಾನ ವಿಕಿರಣವು ಮನುಷ್ಯರು, ಸಸ್ಯಗಳು ಮತ್ತು ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ತಡೆಯಬೇಕೆಂದು ಜೂಹಿ ಒತ್ತಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.