ADVERTISEMENT

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 10 ‍ಪ್ರಶಸ್ತಿ ಬಾಚಿದ ತೆಲುಗು ಚಿತ್ರರಂಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2023, 17:15 IST
Last Updated 24 ಆಗಸ್ಟ್ 2023, 17:15 IST
   

ಹೈದರಾಬಾದ್‌: 69ನೇ ರಾಷ್ಟ್ರೀಯ ಚಲನಚಿತ್ರ ಪಶಸ್ತಿ ಇಂದು ಪ್ರಕಟವಾಗಿದ್ದು, ಒಟ್ಟು 10 ಪ್ರಶಸ್ತಿಗಳು ತೆಲುಗು ಚಿತ್ರರಂಗದ ಪಾಲಾಗಿವೆ. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರ ಒಟ್ಟು 6 ಪ್ರಶಸ್ತಿಗಳನ್ನು ಬಾಚಿಕೊಂಡರೆ, ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪಾ’ ಚಿತ್ರ ಎರಡು ಪ್ರಶಸ್ತಿಗಳನ್ನು ಪಡೆದಿದೆ.

ಈ ಬಾರಿಯ ಅತ್ಯುತ್ತಮ ಮನರಂಜನಾ ಚಿತ್ರ ‍ಪ್ರಶಸ್ತಿಯನ್ನು ‘ಆರ್‌ಆರ್‌ಆರ್’ ‍ಪಡೆದಿದೆ. ಇದರ ಜೊತೆಯಲ್ಲಿ ಚಿತ್ರದ ‘ನಾಟು ನಾಟು..’ ಹಾಡಿನ ನೃತ್ಯ ನಿರ್ದೇಶನಕ್ಕೆ ಪ್ರೇಮ್‌ ರಕ್ಷಿತ್‌ ಅವರಿಗೆ ಅತ್ಯುತ್ತಮ ನೃತ್ಯ ನಿರ್ದೇಶಕ ಪ್ರಶಸ್ತಿ ಸಂದಿದೆ. ಅತ್ಯುತ್ತಮ ಸಾಹಸ ನಿರ್ದೇಶನಕ್ಕೆ ಕಿಂಗ್‌ ಸೊಲೊಮನ್‌ ಹಾಗೂ ಸ್ಪೆಷಲ್‌ ಎಫೆಕ್ಟ್‌ಗಾಗಿ ವಿ.ಶ್ರೀನಿವಾಸ ಮೋಹನ್‌ ಅವರಿಗೆ ಪ್ರಶಸ್ತಿ ಲಭಿಸಿದೆ. ‘ಕೋಮುರಂ ಭೀಮುಡೋ...’ ಹಾಡಿದ ಕಾಲಭೈರವ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಬಂದಿದೆ. ಉತ್ತಮ ಬ್ಯಾಕ್‌ಗ್ರೌಂಡ್‌ ಸ್ಕೋರ್‌ಗಾಗಿ ಎಂ. ಎಂ. ಕಿರವಾಣಿಯವರಿಗೆ ಪ್ರಶಸ್ತಿ ಬಂದಿದೆ.

ಇನ್ನು ನಿರ್ದೇಶಕ ಸುಕುಮಾರ್‌ ಅವರ ‘ಪುಷ್ಪಾ’ ಚಿತ್ರಕ್ಕೆ ಎರಡು ಪ್ರಶಸ್ತಿಗಳು ಬಂದಿವೆ. ಅತ್ಯುತ್ತಮ ನಟ ಪ್ರಶಸ್ತಿ(ಅಲ್ಲು ಅರ್ಜುನ್‌), ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ(ದೇವಿ ಶ್ರಿ ಪ್ರಸಾದ್) ಅವರಿಗೆ ಪ್ರಶಸ್ತಿ ಲಭಿಸಿದೆ. 'ಕೋಡಂ ಪೋಲಂ' ಚಿತ್ರದ ಸಾಹಿತ್ಯಕ್ಕಾಗಿ ಗೀತರಚನೆಕಾರ ಚಂದ್ರಬೋಸ್ ಅವರಿಗೆ ಪ್ರಶಸ್ತಿ ಬಂದಿದೆ

ADVERTISEMENT

'ಉಪ್ಪೆನ’ ಸಿನಿಮಾಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಪ್ರಶಸ್ತಿ ಪಡೆದವರಿಗೆ ಅಭಿನಂದನೆ ತಿಳಿಸಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗಮೋಹನ್‌ ರೆಡ್ಡಿ, ’ಈ ಪ್ರಶಸ್ತಿಗಳು ತೆಲುಗು ಚಿತ್ರರಂಗಕ್ಕೆ ವರದಾನವಾಗಿವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.