ADVERTISEMENT

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಯಾರು ಏನೆಂದರು?

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 14:19 IST
Last Updated 16 ಆಗಸ್ಟ್ 2024, 14:19 IST
   

ಬೆಂಗಳೂರು: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡದ ಸಿನಿಮಾಗಳು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಪ್ರಶಸ್ತಿ ಪಡೆದವರು ಪ್ರಜಾವಾಣಿಗೆ ನೀಡಿದ ಪ್ರತಿಕ್ರಿಗೆ ಇಲ್ಲಿದೆ.

‘ಪ್ರಶಸ್ತಿ ದೈವಕ್ಕೆ ಅರ್ಪಣೆ’ 

‘ನಾನು ಈ ಸಿನಿಮಾದ ನಟನಾಗಿರಬಹುದು, ನಿರ್ದೇಶಕನಾಗಿರಬಹುದು, ಆದರೆ ಈ ಯಶಸ್ಸು ಇಡೀ ತಂಡಕ್ಕೆ ಸಲ್ಲುತ್ತದೆ. ಪ್ರಶಸ್ತಿಯನ್ನು ಅಪ್ಪು ಅವರಿಗೆ, ದೈವ–ದೈವ ನರ್ತಕರಿಗೆ, ಕನ್ನಡ ಜನತೆಗೆ ಅರ್ಪಿಸುತ್ತೇನೆ. ಹೊಂಬಾಳೆಗೆ ನಾಲ್ಕು ಪ್ರಶಸ್ತಿಗಳು ಬಂದಿವೆ. ಹೊಂಬಾಳೆ ಸಂಸ್ಥೆಯು ಬೆನ್ನೆಲುಬಾಗಿ ನಿಂತಿರುವುದು ಪುಣ್ಯ ಹಾಗೂ ಖುಷಿಯ ವಿಚಾರ. ನಾನು ಪ್ರಶಸ್ತಿಗೋಸ್ಕರ ಸಿನಿಮಾ ಮಾಡುವುದಿಲ್ಲ. ಈ ಸಿನಿಮಾದ ಚಿತ್ರೀಕರಣದ ವೇಳೆಯೂ ಯಾವುದೇ ನಿರೀಕ್ಷೆ ಇರಲಿಲ್ಲ. ಖ್ಯಾತ ನಟರ ಮುಂದೆ ನಿಲ್ಲುವಷ್ಟು ನಾನು ದೊಡ್ಡವನಲ್ಲ. ರಾಷ್ಟ್ರೀಯ ಪ್ರಶಸ್ತಿ ಪಡೆದ ನಾನು ಪುಣ್ಯವಂತ. ನಮ್ಮನ್ನು ಒಪ್ಪಿಕೊಂಡಿರುವುದು ಖುಷಿ ವಿಚಾರ. ನಾವು ಮಾಡಿದ ಕೆಲಸಗಳು ಅಲ್ಲಿಯವರೆಗೂ ತಲುಪುತ್ತಿವೆ. ಪ್ರಶಸ್ತಿಯು ಜವಾಬ್ದಾರಿ ಹೆಚ್ಚಿಸಿದೆ. ಇದು ನಾನು ನಾಯಕನಾಗಿ  ನಟಿಸಿರುವ ನಾಲ್ಕನೇ ಸಿನಿಮಾ. ಜನರು ಸಿನಿಮಾ ನೋಡಿ ಯಶಸ್ಸು ನೀಡಿದಾಗಲೇ ಅದು ದೊಡ್ಡ ಜವಾಬ್ದಾರಿಯಾಗುತ್ತದೆ. ‘ಸರ್ಕಾರಿ..’ ಸಿನಿಮಾಗೆ ಪ್ರಶಸ್ತಿ ಬಂದಾಗಲೂ ಮುಂದೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಹಂಬಲ ಇತ್ತು. ಒಂದು ಶುಕ್ರವಾರ ಏನು ಬೇಕಾದರೂ ಆಗಬಹುದು, ಒಂದು ಸಿನಿಮಾ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಇದು ಸಾಕ್ಷಿ. ಈ ಸಿನಿಮಾಗೆ ಬೆನ್ನೆಲುಬಾದ ಅರವಿಂದ್‌ ಕಶ್ಯಪ್‌, ಗರ್ಭಿಣಿಯಾಗಿದ್ದರೂ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿ ಜೊತೆಗೆ ನಿಂತ ಪತ್ನಿ ಪ್ರಗತಿ, ಸಂಗೀತದ ಮೂಲಕ ಸಿನಿಮಾದ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಿದ ಅಜನೀಶ್‌ಗೆ, ಸಹಕಲಾವಿದರಿಗೆ, ನನ್ನ ಬರಹಗಾರರಿಗೆ ಧನ್ಯವಾದ. ತುಂಬಾ ಮಹಾನ್‌ ಕಲಾವಿದರು ಇರುವಂತಹ ಚಿತ್ರರಂಗ ನಮ್ಮದು. ಇಷ್ಟೆಲ್ಲಾ ಶ್ರೇಯಸ್ಸಿಗೆ ಕಾಂತಾರ ಕಾರಣ. ಇದಕ್ಕಾಗಿ ಕಾಂತಾರಕ್ಕೆ ಋಣಿ.
– ರಿಷಬ್‌ ಶೆಟ್ಟಿ, ನಟ, ನಿರ್ದೇಶಕ 

‘ಒಳ್ಳೆಯ ಸಿನಿಮಾ ನೀಡಲು ಪ್ರೋತ್ಸಾಹ’

ಕೆ.ಜಿ.ಎಫ್‌ ಹಾಗೂ ಕಾಂತಾರಕ್ಕೆ ಸಿಕ್ಕಿರುವ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು ಕನ್ನಡ ಜನತೆ ಹಾಗೂ ಕನ್ನಡ ಚಿತ್ರರಂಗಕ್ಕೆ ಸೇರಬೇಕು. ಈ ಎರಡೂ ಸಿನಿಮಾ ತಂಡದ ಸದಸ್ಯರ ಶ್ರಮ ಇದು. ಪ್ರಶಸ್ತಿಗಳು ಖುಷಿ ಕೊಟ್ಟಿವೆ. ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಒಳ್ಳೆಯ ಸಿನಿಮಾ ನೀಡಲು ಪ್ರೋತ್ಸಾಹ ನೀಡಿದಂತಾಗಿದೆ. ಜವಾಬ್ದಾರಿ ಜಾಸ್ತಿಯಾಗಿದೆ. ‘ಕೆ.ಜಿ.ಎಫ್‌’ಗೆ ದೊರಕಿರುವ ಪ್ರಶಸ್ತಿ ಯಶ್‌ ಹಾಗೂ ಪ್ರಶಾಂತ್‌ ನೀಲ್‌ಗೆ ಸಲ್ಲಬೇಕು. ಯಶ್‌ ಆ್ಯಕ್ಷನ್‌ ಸೀಕ್ವೆನ್ಸ್‌ ಹಿಂದೆ ಅನ್ಬುಮಣಿ ಹಾಗೂ ಅರಿವುಮಣಿ ಕೈಚಳಕವಿದೆ. ‘ಕಾಂತಾರ’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿನ ರಿಷಬ್‌ ಅವರ ನಟನೆಯನ್ನು ನೋಡಿ ಎಲ್ಲರೂ ಮೆಚ್ಚಿದ್ದರು. ಅದಕ್ಕಾಗಿ ಅವರಿಗೆ ಈ ಗೌರವ ದೊರಕಿದೆ. ಚಿತ್ರದ ರಫ್‌ ಪೋರ್ಷನ್‌ ನೋಡಿದಾಗ ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎನ್ನಿಸಿತ್ತು. ಆದರೆ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಹೋಗಲಿದೆ ಎನ್ನುವ ಊಹೆಯೂ ಇರಲಿಲ್ಲ. ಚಿತ್ರ ಬಿಡುಗಡೆಯಾದ ಮೊದಲ ದಿನವೇ ಇದು ಎಲ್ಲೆಡೆ ವ್ಯಾಪಿಸಲಿದೆ ಎಂದು ಅರ್ಥವಾಯಿತು. ಹೀಗಾಗಿ ಎರಡು ವಾರದ ಬಳಿಕ ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಿದವು. ಹೊಂಬಾಳೆ ಫಿಲ್ಮ್ಸ್‌ ಅನ್ನು ರಾಷ್ಟ್ರವ್ಯಾಪಿ ವಿಸ್ತರಿಸುವ ಯೋಜನೆ ಇನ್ನೊಂದು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ‘ಕಾಂತಾರ’ ಪ್ರೀಕ್ವೆಲ್‌ ಶೂಟಿಂಗ್‌ ಶೇ 30ರಷ್ಟು ಪೂರ್ಣಗೊಂಡಿದೆ. ಸೆಪ್ಟೆಂಬರ್‌ನಿಂದ ಚಿತ್ರೀಕರಣ ಪುನರಾರಂಭವಾಗಲಿದೆ. 2025ರ ಮಧ್ಯದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಕೆ.ಜಿ.ಎಫ್‌.–3 ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಆಗುತ್ತದೆ. 
–ವಿಜಯ್‌ ಕಿರಗಂದೂರು, ಹೊಂಬಾಳೆ ಫಿಲ್ಮ್ಸ್‌ ಸಂಸ್ಥಾಪಕ.

ಕನ್ನಡ ಸಿನಿಮಾ ಮಿಂಚುವ ಗಳಿಗೆ

ರಾಷ್ಟ್ರೀಯ ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿನಂದನೆಗಳು. ವಿಶೇಷವಾಗಿ ನಮ್ಮವರಾದ ರಿಷಬ್‌ ಶೆಟ್ಟಿ, ವಿಜಯ್‌ ಕಿರಗಂದೂರು, ಪ್ರಶಾಂತ್‌ ನೀಲ್‌ ಹಾಗೂ ಇಡೀ ಹೊಂಬಾಳೆ ಫಿಲ್ಮ್ಸ್‌ಗೆ ಅಭಿನಂದನೆ. ಇನ್ನಷ್ಟು ಎತ್ತರಕ್ಕೆ ಬೆಳೆಯಲು ಇದು ಮುನ್ನುಡಿಯಾಗಲಿ. ಇದು ರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಮಿಂಚಿದ ಗಳಿಗೆ.
–ಯಶ್‌, ನಟ  

‘ನಾನೀಗಿ ಸಂಭ್ರಮದಲ್ಲಿದ್ದೇನೆ’

ನಾನೀಗ ನೆಲದ ಮೇಲಿಲ್ಲ. ‘ಮಧ್ಯಂತರ’ ಒಂದು ಪೂರ್ಣ ಸಿನಿಮಾ. 1976ರಿಂದ 1985ರ ಅವಧಿಯಲ್ಲಿ ಇಬ್ಬರು ಸಿನಿಮಾ ಮೋಹಿಗಳು ಚಲನಚಿತ್ರವನ್ನು ನೋಡುವ ಹುಚ್ಚಿನಿಂದ ಸಿನಿಮಾ ಮಾಡುವ ಹುಚ್ಚಿನೆಡೆಗೆ ಬದಲಾಗುವ ಚಿತ್ರಕಥೆ ಇದರಲ್ಲಿದೆ. ಆರಂಭದಲ್ಲಿ ಇದರ ಒಂದು ಭಾಗವನ್ನು ಕಿರುಚಿತ್ರ ಮಾಡಿದೆ. 36 ನಿಮಿಷದ ಈ ಆ್ಯಕ್ಟ್‌ 1ನ ಮುಂದಿನ ಪೂರ್ಣಭಾಗದ ಸ್ಕ್ರಿಪ್ಟ್‌ ತಯಾರಿದೆ. ಇದನ್ನು ಸಿನಿಮಾವಾಗಿ ಹೊರತರಲು ಕಳೆದ ಒಂದೂವರೆ ವರ್ಷದಿಂದ ಪ್ರಯತ್ನಿಸುತ್ತಿದ್ದೇನೆ. ಈ ಪ್ರಶಸ್ತಿಯಿಂದ ನನಗೆ ನಿರ್ಮಾಪಕರು ಸಿಗುವುದು ಸುಲಭವಾಗಬಹುದು ಎಂಬ ವಿಶ್ವಾಸ ನನ್ನದು. 
–ದಿನೇಶ್‌ ಶೆಣೈ, ನಿರ್ದೇಶಕ (ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ–ನಾನ್‌ ಫೀಚರ್‌ ವಿಭಾಗ)   

‘ನಿರೀಕ್ಷೆ ಮಾಡಿರಲಿಲ್ಲ’

‘ಮಧ್ಯಂತರ’ ಕಿರುಚಿತ್ರದ ಸಂಕಲನಕ್ಕಾಗಿ ಪ್ರಶಸ್ತಿಯನ್ನು ನಿರೀಕ್ಷೆ ಮಾಡಿರಲಿಲ್ಲ. ತುಂಬ ಖುಷಿಯಾಗಿದೆ. ಸಾಕಷ್ಟು ಸಲ ನಿರೀಕ್ಷೆ ಮಾಡಿರುತ್ತೇವೆ. ಆದರೆ ಪ್ರಶಸ್ತಿ ಬಂದಿರುವುದಿಲ್ಲ. ಈ ಪ್ರಶಸ್ತಿಗೆ ಕಾರಣ ಶಶಿಧರ್‌ ಅಡಪ. ಅವರು ಈ ಕಿರುಚಿತ್ರದ ನಿರ್ದೇಶಕ ದಿನೇಶ್‌ ಶೆಣೈ ಅವರಿಗೆ ನನ್ನನ್ನು ಪರಿಚಯಿಸಿಕೊಟ್ಟರು. ಚಿತ್ರದಲ್ಲಿ ಸರಳವಾದ ಸಂಕಲನವಿದೆ. ಬಹುಶಃ ಕಥೆ ಹೇಳಿಕೊಂಡು ಹೋದ ವಿಧಾನ ತೀರ್ಪುಗಾರರಿಗೆ ಇಷ್ಟವಾಗಿರಬೇಕು.
–ಸುರೇಶ್‌ ಅರಸ್‌, ಸಂಕಲನಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.