ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗೆ ನಟ ಅನಂತನಾಗ್ ಅವರನ್ನು ನಾಮನಿರ್ದೇಶನ ಮಾಡಿ ಟ್ವಿಟರ್‌ನಲ್ಲಿ ಅಭಿಯಾನ ಆರಂಭಿಸಿದ್ದ ನಟ ರಿಷಬ್ ಶೆಟ್ಟಿ ಅವರು, ಇದೀಗ ಅನಂತನಾಗ್ ಅವರ ಕುರಿತು ‘ಅಭಿಮಾನ’ದ ಕಿರುಚಿತ್ರವೊಂದನ್ನು ತಮ್ಮ ಯೂಟ್ಯೂಬ್ ಚಾನೆಲ್ ‘ರಿಷಬ್ ಶೆಟ್ಟಿ ಫಿಲ್ಮ್ಸ್’ನಲ್ಲಿ ಬಿಡುಗಡೆಗೊಳಿಸಿದ್ದಾರೆ.
‘ಅನಂತನಾಗ್–ಎ ಗ್ರ್ಯಾಂಡ್ ವಾಯ್ಸ್ ಆಫ್ ಆರ್ಡಿನರಿ’ ಹೆಸರಿನ ಈ 3.54 ನಿಮಿಷದ ಚಿತ್ರದಲ್ಲಿ ಅನಂತನಾಗ್ ಅವರ ಜನ್ಮಸ್ಥಳದ ವಿವರ, ಮುಂಬೈನಲ್ಲಿ ಶಿಕ್ಷಣ ಹಾಗೂ ಅಲ್ಲಿಯೇ ರಂಗಭೂಮಿಯ ನಂಟು, ಕನ್ನಡ ಚಿತ್ರರಂಗಕ್ಕೆ ಪ್ರವೇಶ, ರಾಜಕೀಯ ಕ್ಷೇತ್ರದಲ್ಲಿನ ನಡೆಯ ಮಾಹಿತಿ ಇದೆ. ‘ತಮ್ಮ ಅಭಿನಯ, ಸಜ್ಜನಿಕೆ, ಔದಾರ್ಯ ಮತ್ತು ಪ್ರತಿಭೆಯಿಂದ ಪ್ರಭಾವಿಸಿದ ಮೇರು ನಟ ಅನಂತನಾಗ್. ಅವರು ನಮ್ಮ ಪಾಲಿಗೆ ಯಾವತ್ತಿಗೂ ಹೀರೋ. ಜನಸಾಮಾನ್ಯನ ಗಟ್ಟಿ ದನಿಯಾದ ಅನಂತನಾಗ್ ಅವರ ಕುರಿತು ಇದೊಂದು ಅಭಿಮಾನದ ಚಿತ್ರ’ ಎಂದಿದ್ದಾರೆ ರಿಷಬ್ ಶೆಟ್ಟಿ.
ಪದ್ಮ ಪ್ರಶಸ್ತಿಗೆ ಸೂಕ್ತ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಬೆನ್ನಲ್ಲೇ ಅನಂತನಾಗ್ ಅವರನ್ನು ನಾಮನಿರ್ದೇಶಿಸಿ ಟ್ವೀಟ್ ಅಭಿಯಾನವನ್ನು ರಿಷಬ್ ಶೆಟ್ಟಿ ಆರಂಭಿಸಿದ್ದರು. ‘ಅರ್ಹ ಪ್ರತಿಭೆಗಳ ಕೈ ಸೇರಿದಾಗಲೇ ಪ್ರಶಸ್ತಿಗಳಿಗೆ ಶೋಭೆ. ನಮ್ಮಲ್ಲಿ ಅಂತಹ ಹಲವಾರು ಬೃಹತ್ ಪ್ರತಿಭೆಗಳಿಗೆ ಕೊರತೆಯಿಲ್ಲ. ಈ ನಾಡು ಕಂಡ ಅತ್ಯಂತ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾದ ಹಿರಿಯ ನಟ, ಅನಂತನಾಗ್ ಕೂಡಾ ಅಂತಹ ಮಹಾನ್ ಪ್ರತಿಭೆಗಳಲ್ಲಿ ಒಬ್ಬರು.
ಚಿತ್ರನಟರಾಗಿ, ಕನ್ನಡ ಭಾಷೆಗೆ, ನಾಡಿಗೆ, ಚಿತ್ರರಂಗಕ್ಕೆ ಇವರು ನೀಡಿರುವ, ನೀಡುತ್ತಿರುವ ಕೊಡುಗೆ ಚಿರಸ್ಮರಣೀಯ. ಯಾವುದೇ ಪಾತ್ರವಾಗಲಿ ಲೀಲಾಜಾಲವಾಗಿ ಅಭಿನಯಿಸಿ, ಚಿತ್ರರಸಿಕರ ಮನಗೆಲ್ಲುತ್ತಾ ಬಂದಿರುವ ಈ ‘ಅಭಿನಯ ಬ್ರಹ್ಮ’ನಿಗೆ ಪದ್ಮಪ್ರಶಸ್ತಿಯೊಂದು ಸಲ್ಲಬೇಕಾದದ್ದು ನ್ಯಾಯವೇ ಸರಿ’ ಎಂದು ಅವರು ಉಲ್ಲೇಖಿಸಿದ್ದರು. ಇದಕ್ಕೆ ಸಾವಿರಾರು ಜನರು ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪೂರಕವಾಗಿ ಇದೀಗ ಆಂಗ್ಲ ಭಾಷೆಯಲ್ಲಿ ಈ ‘ಅಭಿಮಾನ’ದ ಕಿರುಚಿತ್ರವನ್ನು ರಿಷಬ್ ಬಿಡುಗಡೆಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.