ಮುಂಬೈ: ‘ರೆಹಮಾನ್ ಅವರು ನಾನು ಅತ್ಯಂತ ವಿಶ್ವಾಸ ಇಡುವ ಅದ್ಭುತ ವ್ಯಕ್ತಿ. ನನ್ನ ಜೀವನದಲ್ಲಿ ಯಾರನ್ನಾದರೂ ನಂಬುತ್ತೇನೆ ಎಂದರೆ ಅದು ಅವರನ್ನು ಮಾತ್ರ’ ಎಂದು ಅವರ ವಿಚ್ಛೇದಿತ ಪತ್ನಿ ಸಾಯಿರಾ ಬಾನು ಹೇಳಿದ್ದಾರೆ.
ನವೆಂಬರ್ 19ರಂದು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಸಾಯಿರಾ ಬಾನು ಅವರು 29 ವರ್ಷಗಳ ವೈವಾಹಿಕ ಬದುಕಿಗೆ ವಿಚ್ಛೇದನದ ಮೂಲಕ ಅಂತ್ಯ ಹಾಡಿದ್ದರು. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಹೊಸ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಸಾಯಿರಾ ‘ಇನ್ನೂ ಯಾವುದೂ ಅಧಿಕೃತವಲ್ಲ’ ಎಂದು ಬರೆದುಕೊಂಡಿದ್ದಾರೆ.
‘ನಾನು ಚಿಕಿತ್ಸೆಗಾಗಿ ಚೆನ್ನೈನಿಂದ ಹೊರಟಿದ್ದೇನೆ. ಆರೋಗ್ಯದ ಕಾರಣಗಳಿಂದ ರೆಹಮಾನ್ ಅವರಿಂದ ತುಸು ವಿರಾಮ ತೆಗೆದುಕೊಂಡಿದ್ದೇನೆ. ಚಿಕಿತ್ಸೆ ಪಡೆದು ಚೆನ್ನೈಗೆ ಹಿಂತಿರುಗಿದ ಬಳಿಕ ಎಲ್ಲಾ ವಿಷಯಗಳನ್ನು ಸ್ಪಷ್ಟಪಡಿಸುತ್ತೇನೆ’ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ಮತ್ತು ತಮ್ಮ ಕುಟುಂಬದವರನ್ನು ಗುರಿಯಾಗಿಸಿಕೊಂಡು ಮಾನನಷ್ಟ ಮತ್ತು ಆಕ್ಷೇಪಾರ್ಹ ವಿಚಾರಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವುದಾಗಿ 57 ವರ್ಷದ ಎ.ಆರ್. ರೆಹಮಾನ್ ಅವರು ‘ಎಕ್ಸ್’ನಲ್ಲಿ ಪೋಸ್ಟ್‌ವೊಂದನ್ನು ಶನಿವಾರ ಹಂಚಿಕೊಂಡಿದ್ದರು.
ಈಚೆಗೆ ರೆಹಮಾನ್–ಸಾಯಿರಾ ಬಾನು ದಂಪತಿ ವಿಚ್ಛೇದನದ ಸಂಗತಿಯನ್ನು ಜಂಟಿ ಪತ್ರಿಕಾ ಹೇಳಿಕೆಯಿಂದ ಸ್ಪಷ್ಟಪಡಿಸಿದ್ದರು.
‘ಸಂಬಂಧದಲ್ಲಿ ಭಾವುಕ ನೆಲೆಗಟ್ಟಿನಲ್ಲಿ ಒತ್ತಡ ಉಂಟಾಗಿದ್ದರಿಂದ ಬೇರೆಯಾಗಲು ನಿರ್ಧರಿಸಿದರು’ ಎಂದು ಅವರ ವಕೀಲೆ ವಂದನಾ ಶಾ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.