ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂದು ಎಷ್ಟೋ ಯುವಕ–ಯುವತಿಯರು ವರ್ಷಗಟ್ಟಲೆ ತಪಸ್ಸಿಗೆ ಕುಳಿತಂತೆ ಅಧ್ಯಯನ ಮಾಡುವುದನ್ನು ಕಂಡಿದ್ದೇವೆ. ಉತ್ತರ ಪ್ರದೇಶದ ಒಬ್ಬ ಹುಡುಗ ಇನ್ನೊಂದು ಹೆಜ್ಜೆ ಇಟ್ಟಿದ್ದರೆ ಆ ಪರೀಕ್ಷೆಯಲ್ಲಿ ಸುಲಭವಾಗಿ ತೇರ್ಗಡೆಯಾಗಿಬಿಡುತ್ತಿದ್ದ. ಆದರೆ, ಅವನ ಮನಸ್ಸಿನ ತುಂಬ ನಟನಾಗಬೇಕು ಎಂಬ ಗೀಳು. ಅಪ್ಪ ಕೂಡ ಚಾರ್ಟರ್ಡ್ ಅಕೌಂಟೆಂಟ್. ಸಾಮಾನ್ಯವಾಗಿ ಇಂತಹ ತಂದೆ ಮಗನ ನಟನಾಗುವ ಬಯಕೆಗೆ ತಣ್ಣೀರೆರಚುವುದೇ ಹೆಚ್ಚು. ಆದರೆ, ಈ ಹುಡುಗನ ಅಪ್ಪ ಹಾಗೆ ಮಾಡಲಿಲ್ಲ. ‘ಎರಡು ಹೊತ್ತಿನ ಊಟಕ್ಕೇನೂ ಚಿಂತೆ ಇಲ್ಲ. ನೀನೇನು ದುಡಿದು ನಮ್ಮನ್ನು ಸಾಕಬೇಕಾಗಿಲ್ಲ. ನಿನ್ನ ಕನಸುಗಳನ್ನು ಮಾತ್ರ ಮುರುಟಗೊಡಬೇಡ. ಅಂದುಕೊಂಡಿದ್ದೇ ಆಗಿ ತೋರಿಸು’ ಎಂದು ಮೈದಡವಿದರು. ಆರಡಿ ಎರಡಿಂಚು ಎತ್ತರದ ಆ ಹುಡುಗನ ಹೆಸರು ಸಿದ್ಧಾಂತ್ ಚತುರ್ವೇದಿ.
‘ಗಲ್ಲಿ ಬಾಯ್’ ಹಿಂದಿ ಸಿನಿಮಾದಲ್ಲಿ ಎಂ.ಸಿ. ಶೇರ್ ಪಾತ್ರದ ಮೂಲಕ ಕಾಡಿದವರು ಸಿದ್ಧಾಂತ್. ಅದಾದ ಮೇಲೆ ಹತ್ತು ತಿಂಗಳು ಅವರು ಮನೆಗೆ ಬಂದ ಚಿತ್ರಕಥೆಗಳನ್ನು ಅಳೆದೂ ತೂಗಿ, ‘ಅದು ಬೇಡ... ಇದು ಸರಿ ಇಲ್ಲ’ ಎನ್ನುತ್ತಲೇ ಕೂತವರು. ಆಗಲೂ ಅವರ ಅಪ್ಪ ಬೇಸರಿಸಲಿಲ್ಲ. ಇದ್ದ ಸಣ್ಣ ಆತಂಕವನ್ನು ಅಮ್ಮ ಸೆರಗಿಗೆ ಕಟ್ಟಿಕೊಂಡೇ ಓಡಾಡಿದರು.
ಸಿದ್ಧಾಂತ್ ಚತುರ್ವೇದಿ ಅಪ್ಪ–ಅಮ್ಮನ ಮುದ್ದಿನ ಮಗ. ಓದಿನಲ್ಲಿ ಮುಂದು. ವಯಸ್ಸು ಹತ್ತೊಂಬತ್ತು ಆಗುವ ಹೊತ್ತಿಗೆ ತಾನು ನಾಯಕ ನಟನೇ ಆಗಬೇಕು ಎಂದು ಸಂಕಲ್ಪ ಮಾಡಿದರು. ಎಂಟ್ಹತ್ತು ತಿಂಗಳು ರಂಗಭೂಮಿಯಲ್ಲಿ ತೊಡಗಿದರು. ಟೈಗರ್ ಶ್ರಾಫ್ ಕಲಿತ ಶಾಲೆಗೆ ಹೋಗಿ ಮಾರ್ಷಲ್ ಆರ್ಟ್ಸ್ ಕೂಡ ಕಲಿತರು.
ಟೈಗರ್ ನಾಯಕ ನಟ ಆದಾಗ, ‘ಆ ಜಾಗ ತುಂಬಿಹೋಯಿತು. ನಾನು ಬೇರೆ ಏನಾದರೂ ಕಲಿಯಬೇಕು’ ಎಂದು ಮನಸ್ಸಿನಲ್ಲೇ ಅಂದುಕೊಂಡರು. ಹಿಡಿದುಕೊಳ್ಳಲು ಚಿತ್ರರಂಗದ ಯಾವ ಆಧಾರವೂ ಇಲ್ಲದೇ ಇದ್ದರೂ ತಮ್ಮಷ್ಟಕ್ಕೆ ತಾವು ಆಡಿಷನ್‌ಗಳನ್ನು ಕೊಟ್ಟುಬಂದರು. ಆಯ್ಕೆಯಾಗದೇ ಹೋದಾಗ ಮನೆಯಲ್ಲಿ ಕುಳಿತು ಕಣ್ಣೀರಿಟ್ಟರು. ಅಪ್ಪ ಬೆನ್ನುತಟ್ಟಿ ಸಮಾಧಾನ ಮಾಡಿದರೆ, ಅಮ್ಮ ಕಣ್ಣೀರನ್ನು ಒರೆಸಿದರು.
ಸಿದ್ಧಾಂತ್ ನಟನಾಗಬೇಕು ಎಂದು ಸ್ನೇಹಿತರ ಬಳಗದಿಂದ ಹೊರಗೆ ಉಳಿದರು. ಆಡಿಷನ್‌ಗಳಲ್ಲಿ ವಿಫಲರಾಗಿ ಬಂದಾಗ ಕೋಣೆಯಲ್ಲಿ ಕದವಿಕ್ಕಿಕೊಂಡು ಬಿಕ್ಕಿದರು. ಎಷ್ಟೋ ಸಲ ಬೆಳಗಿನಿಂದ ಸಂಜೆಯವರೆಗೆ ಮಲಗೇ ಇದ್ದುದೂ ಉಂಟು.
ಎಫ್‌ಟಿಐಐ (ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ)ನಲ್ಲಿ ಕಲಿಯಬೇಕು ಎಂದುಕೊಂಡ ಹೊತ್ತಿನಲ್ಲಿ ಅಲ್ಲಿ ಎರಡು ವರ್ಷ ಪ್ರವೇಶವೇ ಇರಲಿಲ್ಲ. ಹೀಗಾಗಿ ಕೋಣೆಯೇ ಅವರಿಗೆ ತಾಲೀಮಿನ ಅಂಗಳವಾಯಿತು. ಮನೆಯ ಪಡಸಾಲೆಯ ದಿವಾನ್ ಮಂಚ, ಅಕ್ಕ–ಪಕ್ಕದ ಎರಡು ಕುರ್ಚಿಗಳು ಮಂಥನದ ಸ್ಥಳ. ತಾನು ಕೇಳಿದ ಚಿತ್ರಕಥೆಯನ್ನು, ಎದುರಿಸಿದ ಆಡಿಷನ್ ಅನುಭವಗಳನ್ನು ಅಲ್ಲಿಯೇ ಅಪ್ಪ–ಅಮ್ಮ ಹಾಗೂ ಹದಿನಾಲ್ಕು ವರ್ಷದ ತಮ್ಮನ ಎದುರು ಸಿದ್ಧಾಂತ್ ಹೇಳಿಕೊಳ್ಳುತ್ತಾ ಇದ್ದುದು.
ಹೀಗೆ ಹೋರಾಡಿದ ಸಿದ್ಧಾಂತ್‌ಗೆ ‘ಗಲ್ಲಿ ಬಾಯ್’ ಜೀವಾನಿಲವಾಯಿತು. ಈಗ ಅವರ ಕೈಲಿ ಎರಡು ದೊಡ್ಡ ಬ್ಯಾನರ್‌ನ ಚಿತ್ರಗಳಿವೆ. ಒಂದು ಯಶ್ ಚೋಪ್ರಾ ಬ್ಯಾನರ್‌ನ ‘ಬಂಟಿ ಔರ್ ಬಬ್ಲಿ–2’. ಇನ್ನೊಂದಕ್ಕೆ ಹೆಸರಿಟ್ಟಿಲ್ಲ; ಅದು ಕರಣ್ ಜೋಹರ್ ನೇತೃತ್ವದ ಧರ್ಮ ಪ್ರೊಡಕ್ಷನ್ಸ್‌ನದ್ದು. ಆತ್ಮವಿಶ್ವಾಸವನ್ನು ನಖಶಿಖಾಂತ ತುಂಬಿಕೊಂಡಂತೆ ಕಾಣುವ ಸಿದ್ಧಾಂತ್ ‘ನೋಡ್ತಾ ಇರಿ...ನಾನು ಏನೆಲ್ಲ ಆಗುತ್ತೇನೆ’ ಎನ್ನುವಂತೆ ಕಣ್ಣರಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.