ADVERTISEMENT

ಸಂದರ್ಶನ | ಇದು ಆ್ಯಕ್ಷನ್‌ ಸಿನಿಮಾ ಪ್ರಿಯರ ಕಾಲ ಎಂದ ನಟ ಶಿವರಾಜ್‌ಕುಮಾರ್‌

ವಿನಾಯಕ ಕೆ.ಎಸ್.
Published 19 ಅಕ್ಟೋಬರ್ 2023, 23:30 IST
Last Updated 19 ಅಕ್ಟೋಬರ್ 2023, 23:30 IST
ಶಿವರಾಜ್‌ಕುಮಾರ್‌
ಶಿವರಾಜ್‌ಕುಮಾರ್‌   
ನಟ ಶಿವರಾಜ್‌ಕುಮಾರ್‌ ಅನುಪಮ್ ಖೇರ್ ಜಯರಾಮ್ ಮೊದಲಾದ ದೊಡ್ಡ ತಾರೆಯರ ದಂಡನ್ನೇ ಹೊಂದಿರುವ ‘ಘೋಸ್ಟ್‌’ ಸಿನಿಮಾ ಅಕ್ಟೋಬರ್ 19ರಂದು ತೆರೆ ಕಂಡಿದೆ. ಸಿನಿಮಾದ ಕುರಿತು ತಮ್ಮ ಮುಂದಿನ ಯೋಜನೆಗಳ ಕುರಿತು ಶಿವಣ್ಣ ಮಾತಿಗೆ ಸಿಕ್ಕಿದ್ದು ಹೀಗೆ...

ಘೋಸ್ಟ್‌ ಸಿನಿಮಾದಲ್ಲಿ ಮತ್ತೆ ‘ಓಂ’ ಚಿತ್ರದ ಸತ್ಯನಾಗಿ ಕಾಣಿಸಿಕೊಳ್ಳುತ್ತಿದ್ದೀರಾ?

‘ಓಂ’ ನಡೆಯುವ ಕಾಲದ ಅವಧಿಯ ಲುಕ್‌ ಬೇಕಾಗಿತ್ತು. ಹೀಗಾಗಿ ಚಿತ್ರದ ಒಂದು ಶೇಡ್‌ನಲ್ಲಿ ಆ ರೀತಿ ಕಾಣಿಸಿಕೊಂಡಿದ್ದೇನೆ. ಎಲ್ಲರೂ ಅದನ್ನು ಗ್ರಾಫಿಕ್ಸ್‌ ಎಂದು ಭಾವಿಸುತ್ತಾರೆ. ಆದರೆ ಡಿ–ಏಜಿಂಗ್‌ ತಂತ್ರಜ್ಞಾನ ಬಳಸಿ ಅದನ್ನು ಚಿತ್ರೀಕರಿಸಿದ್ದು. ಕಣ್ಣಗಳು ಈಗಿನದ್ದು. ಮುಖಕ್ಕೆ ಮಾಸ್ಕ್‌ ಹಾಕಿ ಯುವಕನಂತೆ ತೋರಿಸುವ ತಂತ್ರಜ್ಞಾನವಿದು. ಹೀಗೆ ಮಾಡುವಾಗ ಮೊದಲಿಗೆ ನನಗೂ ಸ್ವಲ್ಪ ಭಯವಾಯ್ತು. ಆದರೆ ಭಿನ್ನವಾಗಿ ಕಾಣಿಸಲು ಕಥೆಗೆ ಇದರ ಅಗತ್ಯವಿತ್ತು.

ನೀವು ಚಿತ್ರದಲ್ಲಿ ‘ಘೋಸ್ಟ್‌’ ಆಗಿರುತ್ತೀರಾ?

ADVERTISEMENT

ಹೌದು, ಇದು ಭಯಪಡಿಸುವ ಪಾತ್ರ. ಚಿತ್ರದ ಟ್ರೇಲರ್‌ನಲ್ಲಿ ನೋಡಿದರೆ ಜೈಲು ಹೈಜಾಕ್‌ ಆಗಿರುತ್ತದೆ. ಅದನ್ನು ಮಾಡಿದ್ದು ಯಾರು ಎಂಬ ಚರ್ಚೆ ಆಗುತ್ತೆ. ನಾವೇ ನೋಡಿದ ವ್ಯಕ್ತಿ 10–15 ವರ್ಷಗಳ ನಂತರ ಕಾಣಿಸಿಕೊಂಡರೆ ‘ಘೋಸ್ಟ್‌’ ಆಗಿ ಬಂದಿರಬಹುದೆಂದು ಭಯಪಡುತ್ತೇವೆ. ಅದೇ ರೀತಿಯ ಪಾತ್ರ. ಜೀವನದಲ್ಲಿ ಭಯ, ಭಕ್ತಿ ಇದ್ದರೆ ಮುಂದುವರಿಯಬಹುದು ಎಂಬ ನಂಬಿಕೆ ಇದೆ. ಭಯಪಡಿಸಿ ವ್ಯವಸ್ಥೆಯನ್ನು ಸರಿಪಡಿಸಬಹುದೆಂಬ ನಂಬಿಕೆಯಲ್ಲಿರುವ ಪಾತ್ರ. 2 ಗಂಟೆ 10 ನಿಮಿಷದ ಸಿನಿಮಾ. ಬೇರೆ ರೀತಿಯ ಕಥೆಯ ನಿರೂಪಣೆ ಇದೆ. ಜನ ಹೇಗೆ ಸ್ವೀಕರಿಸುತ್ತಾರೆ ನೋಡಬೇಕು.

‘ಜೈಲರ್‌’ ನಂತರ ಬೇರೆ ಭಾಷೆಗಳ ಆಫರ್‌ ಹೆಚ್ಚಾಗಿದೆಯಾ?

ಮಾತೃಭಾಷೆಗೆ ಮೊದಲ ಆದ್ಯತೆ. ಅವಕಾಶಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ತಮಿಳಿನ ‘ಕ್ಯಾಪ್ಟನ್‌ ಮಿಲ್ಲರ್‌’ ಚಿತ್ರೀಕರಣ ಮುಗಿದಿದೆ. ತೆಲುಗಿನ ‘ಕಣ್ಣಪ್ಪ’ದಲ್ಲಿ ನಟಿಸುತ್ತಿರುವೆ. ಎರಡು ತಮಿಳು ಸಿನಿಮಾಗಳಿಗೆ ಸದ್ಯದಲ್ಲೇ ಸಹಿ ಹಾಕುವೆ. ಮಲಯಾಳದಲ್ಲಿ ಒಂದು ಸಿನಿಮಾ ಮಾತುಕತೆ ನಡೆದಿದೆ. ಬಾಲಿವುಡ್‌ನಿಂದ ಆಫರ್‌ ಬಂದಿರುವುದು ನಿಜ. ಅದನ್ನು ಒಪ್ಪಿಕೊಳ್ಳುತ್ತಿದ್ದೇನೆ. ಅರ್ಜುನ್‌ ಜನ್ಯ ನಿರ್ದೇಶನದ ‘45’ ಚಿತ್ರೀಕರಣ ನಡೆಯುತ್ತಿದೆ. ‘ಭೈರತಿ ರಣಗಲ್‌’ ಚಿತ್ರೀಕರಣ ಪ್ರಗತಿಯಲ್ಲಿದೆ.

ಎಲ್ಲ ನಿರ್ದೇಶಕರು ಶಿವಣ್ಣನ ಹತ್ತಿರ ಲಾಂಗು, ಮಚ್ಚು ಹಿಡಿಸಲು ಇಷ್ಟಪಡುತ್ತಾರೆ ಎಂದು ಹಿಂದೊಮ್ಮೆ ಹೇಳಿದ್ರಿ?

ಆ್ಯಕ್ಷನ್‌ ಸಿನಿಮಾಗಳು ಹೆಚ್ಚಾಗುತ್ತಿವೆ. ಆ್ಯಕ್ಷನ್‌ ಸಿನಿಮಾ ಪ್ರಿಯರ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಕಾರಣ. ಎಲ್ಲರೂ ಅದೇ ರೀತಿಯ ಕಥೆ ತೆಗೆದುಕೊಂಡು ಬರುತ್ತಾರೆ. ‘45’ ಸಿನಿಮಾದಲ್ಲಿ ಅಚ್ಚರಿಯ ಬದಲಾವಣೆಯನ್ನು ನೋಡಬಹುದು. ಬೇರೆ ರೀತಿಯದೇ ಪಾತ್ರ. ಖಂಡಿತ ಜನ ಅದನ್ನು ಶ್ಲಾಘಿಸುತ್ತಾರೆಂಬ ನಂಬಿಕೆ ಇದೆ.

ಯಾಕೆ ಮಾಸ್‌ ಸಿನಿಮಾಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುವಿರಿ?

ಸಾಕಷ್ಟು ಕಾದಂಬರಿ ಆಧಾರಿತ, ಪ್ರೇಮ ಕಥೆಗಳ ಸಿನಿಮಾಗಳನ್ನೂ ಮಾಡಿರುವೆ. ‘ಅಣ್ಣತಂಗಿ’, ‘ರಿಷಿ’, ‘ಚಿರುಗಿದ ಕನಸು’, ‘ಮಿಡಿದ ಶೃತಿ’ಯಂತಹ ಸಾಕಷ್ಟು ಭಾವಾನಾತ್ಮಕ, ಕಲಾತ್ಮಕ ಸಿನಿಮಾಗಳು ನನ್ನ ಸಿನಿಪಯಣದಲ್ಲಿವೆ. ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿಯೂ ಸಾಕಷ್ಟು ಸಿನಿಮಾ ಮಾಡಿರುವೆ. ಹಾಗೆ ನೋಡಿದರೆ ಮಾಸ್‌ ಸಿನಿಮಾಗಳೇ ಕಡಿಮೆ. ಇತ್ತೀಚಿನ ದಿನಗಳಲ್ಲಿ ಆ್ಯಕ್ಷನ್‌ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ.

ಈ ವಯಸ್ಸಿನಲ್ಲಿಯೂ ಆ ರೀತಿಯ ಸಾಹಸಗಳನ್ನು ಮಾಡಲು ಹೇಗೆ ಸಾಧ್ಯ?

ಹುಡುಗರು  ಹುರಿದುಂಬಿಸಿ, ಓಲೈಸಿ ಈ ರೀತಿ ಸಾಹಸಗಳನ್ನು ಮಾಡಿಸಿಬಿಡುತ್ತಾರೆ. ಆ ಕ್ಷಣಕ್ಕೆ ಸೆಟ್‌ನಲ್ಲಿ ಇವೆಲ್ಲ ಆಗಿಬಿಡುತ್ತವೆ. ದಿನ 8–10 ಕಿಲೋಮೀಟರ್‌ ವಾಕ್‌ ಮಾಡುತ್ತೇನೆ. ಒಂದೂವರೆ ಗಂಟೆ ವ್ಯಾಯಾಮ ಮಾಡುತ್ತೇನೆ. ಹೀಗಾಗಿ ಫಿಟ್‌ನೆಸ್‌ ಒಂದು ಮಟ್ಟಕ್ಕೆ ಇದೆ.

ಮಗಳು ನಿವೇದಿತಾ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತೀರಾ?

ಸದ್ಯಕ್ಕೆ ನನ್ನನ್ನು ಕರೆದಿಲ್ಲ. ನಮ್ಮ ನಿರ್ಮಾಣ ಸಂಸ್ಥೆ ಮತ್ತು ಮಗಳ ನಿರ್ಮಾಣ ಸಂಸ್ಥೆಯಿಂದ ಕಂಟೆಂಟ್‌ ಆಧಾರಿತ ನಮ್ಮದೇ ಮತ್ತು ಹೊರಗಿನವರ ಸಿನಿಮಾಗಳನ್ನು ಮಾಡುವ ಆಲೋಚನೆ ಇದೆ. ಮುಂದಿನ ದಿನಗಳಲ್ಲಿ ಆ ನಿಟ್ಟಿನಲ್ಲಿ ಕೆಲಸಗಳು ನಡೆಯಲಿವೆ.

ನೀವು ಕುಟುಂಬ ಸಮೇತರಾಗಿ ಇತ್ತೀಚೆಗೆ ಇಷ್ಟಪಟ್ಟ ಸಿನಿಮಾ ಯಾವುದು?

ಈ ನಡುವೆ ಫ್ಯಾಮಿಲಿ ಜೊತೆ ಸಿನಿಮಾ ನೋಡಲು ಸಮಯ ಸಿಗುತ್ತಿಲ್ಲ. ‘ಗದರ್‌–2’ ನೋಡಿದೆ. ಚೆನ್ನಾಗಿದೆ. ಒಳ್ಳೆ ಮನರಂಜನೆ ಇದೆ, ಇಷ್ಟವಾಯ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.