ಮೆಲ್ಬರ್ನ್: ಭಾರತೀಯ ಚಲನಚಿತ್ರೋತ್ಸವವು ಈಗ 13 ನೇ ವರ್ಷಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಬೆಳಿಗ್ಗೆ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ತಾರೆಯರ ಸಮಾಗಮದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಆನ್‌ಲೈನ್‌ನಲ್ಲಿ ಎರಡು ವರ್ಷಗಳ ಕಾಲ ನಡೆದ ಕಾರ್ಯಕ್ರಮವು ಈ ವರ್ಷದಿಂದ ಭೌತಿಕವಾಗಿ ನಡೆಯುತ್ತಿದೆ. ಇಂದಿನಿಂದ ಆಗಸ್ಟ್ 20 ರವರೆಗೆ ಚಿತ್ರೋತ್ಸವ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‌ನ ಖ್ಯಾತನಾಮರಾದ ಅಭಿಷೇಕ್ ಬಚ್ಚನ್, ತಾಪ್ಸಿ ಪನ್ನು, ವಾಣಿ ಕಪೂರ್, ತಮನ್ನಾ ಭಾಟಿಯಾ, ಶೆಫಾಲಿ ಶಾ, ಗಾಯಕಿ ಸೋನಾ ಮಹಾಪಾತ್ರ ಮತ್ತು ಚಲನಚಿತ್ರ ನಿರ್ಮಾಪಕರಾದ ಅನುರಾಗ್ ಕಶ್ಯಪ್, ಕಬೀರ್ ಖಾನ್, ಅಪರ್ಣಾ ಸೇನ್, ನಿಖಿಲ್ ಅಡ್ವಾಣಿ ಮತ್ತು ಸುಜಿತ್ ಸಿರ್ಕಾರ್ ಉಪಸ್ಥಿತರಿದ್ದರು.
ತಾಪ್ಸಿ ಪನ್ನು ಅವರ ‘ದೋಬಾರಾ’ ಚಿತ್ರದ ಪ್ರದರ್ಶನದೊಂದಿಗೆ ಈ ವರ್ಷದ ಚಿತ್ರೋತ್ಸವ ಆರಂಭವಾಗಲಿದೆ. 120 ಕ್ಕೂ ಅಧಿಕ ಚಲನಚಿತ್ರಗಳ ಪ್ರದರ್ಶನದ ಹೊರತಾಗಿ ಸ್ವಾತಂತ್ರ್ಯ ದಿನಾಚರಣೆ, ವಿಶೇಷ ಚರ್ಚಾ ಕಾರ್ಯಕ್ರಮಗಳೂ ನಡೆಯಲಿವೆ.
‘ಅಂತೂ ನಾನು ಮೆಲ್ಬರ್ನ್‌ಗೆ ಬಂದಿದ್ದೇನೆ. ಈ ನಗರವನ್ನು ನಾನು ತುಂಬಾ ಪ್ರೀತಿಸುತ್ತೇನೆ. ‘ದೋಬಾರಾ’ಚಿತ್ರವನ್ನು ವೀಕ್ಷಿಸಲು ಉತ್ಸುಕನಾಗಿದ್ದೇನೆ. ನನ್ನ ಬಹುತೇಕ ಇಡೀ ಕುಟುಂಬ ಇಲ್ಲಿ ಭಾರತವನ್ನು ಪ್ರತಿನಿಧಿಸಿದೆ ಮತ್ತು ನಾನು ಅದರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ನಾನು ಎಲ್ಲಾ ಆಚರಣೆಗಳ ಭಾಗವಾಗಲು ಇಷ್ಟಪಡುತ್ತೇನೆ. ನನ್ನನ್ನು ಈ ಕಾರ್ಯಕ್ರಮದ ಭಾಗವಾಹಿಸಿದ್ದಕ್ಕಾಗಿ ಸರ್ಕಾರ ಮತ್ತು ಆಯೋಜಕರಿಗೆಧನ್ಯವಾದ ಹೇಳುತ್ತೇನೆ’ ಎಂದು ಅಭಿಷೇಕ್ ಬಚ್ಚನ್ ಹೇಳಿದರು.
ದಕ್ಷಿಣ ಮತ್ತು ಹಿಂದಿ ಚಲನಚಿತ್ರಗಳ ಚರ್ಚೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ತಮನ್ನಾ, ‘ಈ ರೀತಿಯ ಚರ್ಚೆಯು ಭಾರತದ ವೈಶಿಷ್ಟ್ಯವಾಗಿದೆ ಎಂದು ನಾನು ಭಾವಿಸುತ್ತೇನೆ, ನಾನು ವಿದೇಶಕ್ಕೆ ಹೋದಾಗಲೆಲ್ಲಾ ಜನರು ನನ್ನನ್ನು ಪ್ರತ್ಯೇಕವಾಗಿ ನೋಡುವುದಿಲ್ಲ, ಅವರು ಅದನ್ನು ಭಾರತೀಯ ಸಿನಿಮಾ ಎಂದು ಕರೆಯುತ್ತಾರೆ. ಇಲ್ಲಿ ಐಎಫ್‌ಎಫ್‌ಎಮ್(ಭಾರತೀಯ ಚಲನಚಿತ್ರೋತ್ಸವ)ದಲ್ಲಿಯೂ ಸಹ ಇದೇ ಆಗಿದೆ. ಪ್ಯಾನ್ ಇಂಡಿಯಾ ಚಲನಚಿತ್ರಗಳನ್ನು ನೋಡಲು ಪ್ರೇಕ್ಷಕರು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಅಂತಹ ಚಿತ್ರಗಳೂ ಬರುತ್ತಿವೆ ಹಾಗೂ ಎಲ್ಲರೂ ಮೆಚ್ಚುತ್ತಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.