ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜೊತೆಗೂಡಿ ಸಿರಿಧಾನ್ಯ ಕುರಿತು ನಿರ್ಮಿಸಿದ ಹಾಡು ‘ಅಬಂಡನ್ಸ್ ಇನ್ ಮಿಲೆಟ್ಸ್’ 2024ರ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶಗೊಂಡಿದೆ.
ಹಸಿವಿನ ಪ್ರಮಾಣವನ್ನು ಕಡಿಮೆ ಮಾಡುವ ಮತ್ತು ಸಿರಿಧಾನ್ಯಗಳನ್ನು ಬೆಳೆಯಲು ಉತ್ತೇಜಿಸುವ ನಿಟ್ಟಿನಲ್ಲಿ ಈ ಹಾಡನ್ನು ರಚಿಸಲಾಗಿತ್ತು. ಫಲ್ಗುಣಿ ಮತ್ತು ಗೌರವ್ ಶಾ ದಂಪತಿ ಈ ಹಾಡನ್ನು ಹಾಡಿದ್ದಾರೆ. ಪ್ರಧಾನಿ ಮೋದಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
‘ಪ್ರಧಾನಿ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ ಈ ಕಲ್ಪನೆ ಮನಸ್ಸಿನಲ್ಲಿ ಮೂಡಿತ್ತು.ಅದೇ ಸಂದರ್ಭದಲ್ಲಿ ಸಿರಿಧಾನ್ಯಗಳ ಬಗ್ಗೆ ಒಂದು ಹಾಡು ರಚಿಸುವಂತೆ ಪ್ರಧಾನಿಯವರೂ ಸಲಹೆ ನೀಡಿದ್ದರು. ಪ್ರಧಾನಿ ಅವರ ಪ್ರೋತ್ಸಾಹ ಮತ್ತು ಸಹಕಾರದಿಂದ ಈ ಹಾಡನ್ನು ಹೊರ ತಂದಿದ್ದೆವೆ. ಸಿರಿಧಾನ್ಯಗಳನ್ನು ಬೆಳೆಯುವಂತೆ ಉತ್ತೇಜಿಸಲು, ಪ್ರಪಂಚವನ್ನು ಹಸಿವಿನಿಂದ ಮುಕ್ತಗೊಳಿಸುವ ಉದ್ದೇಶದಿಂದ ಈ ಹಾಡು ರಚಿಸಲಾಗಿದೆ’ ಎಂದು ಗಾಯಕಿ ಫಲ್ಗುಣಿ ಶಾ ತಿಳಿಸಿದ್ದಾರೆ.
ಈ ಹಾಡು ಹೊರತುಪಡಿಸಿ ಆರೂಜ್ ಅಫ್ತಾಬ್, ವಿಜಯ್ ಅಯ್ಯರ್ ಮತ್ತು ಶಹಜಾದ್ ಇಸ್ಮಾಯಿಲಿ ಅವರ ‘ಶಾಡೋ ಫೋರ್ಸ್ಸ್’, ಬರ್ನಾ ಬಾಯ್ ಅವರ ‘ಅಲೋನ್’, ಡೆವಿಡೊ ಅವರ ‘ಫೀಲ್’, ಸಿಲ್ವಾನಾ ಎಸ್ಟ್ರಾಡಾ ಅವರ ‘ಮಿಲಾಗ್ರೊ ವೈ ಡಿಸಾಸ್ಟರ್’ ಸೇರಿದಂತೆ ಇನ್ನು 2 ಎರಡು ಹಾಡುಗಳು ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
2022ರಲ್ಲಿ ಫಲ್ಗುಣಿ ಶಾ ಅವರು ಅತ್ಯುತ್ತಮ ಮಕ್ಕಳ ಸಂಗೀತ 'ಎ ಕಲರ್‌ಫುಲ್ ವರ್ಲ್ಡ್' ಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.