ಉತ್ತರ ಪ್ರದೇಶ: ಭೋಜಪುರಿ ಚಿತ್ರರಂಗದ ಜನಪ್ರಿಯ ನಟಿ ಆಕಾಂಕ್ಷಾ ದುಬೆ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಸಮರ್ ಸಿಂಗ್ ಅವರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ವಾರಣಾಸಿಯ ಗಾಜಿಯಬಾದ್‌ನ ಹೌಸಿಂಗ್ ಸೊಸೈಟಿಯಲ್ಲಿ ಆರೋಪಿ ಸೆರೆಯಾಗಿದ್ದಾನೆ.
ಹದಿನೈದು ದಿನಗಳ ಹಿಂದೆ(ಮಾರ್ಚ್ 26) ನಟಿ ಆಕಾಂಕ್ಷಾ ದುಬೆ ವಾರಣಾಸಿಯ ಹೋಟೆಲ್ ಕೋಣೆವೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕಾಂಕ್ಷಾ ದುಬೆ ಮತ್ತು ಹಾಡುಗಾರ ಸಮರ್ ಸಿಂಗ್ ಡೇಟಿಂಗ್ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ದುಬೆ ಸಾವಿನ ಹಿಂದೆ ಸಮರ್ ಸಿಂಗ್ ಕೈವಾಡವಿರಬಹುದೆಂದು ಅನುಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಸಮರ್ ಸಿಂಗ್‌ಗೆ ಲುಕ್‌ಔಟ್ ನೋಟಿಸ್ ನೀಡಿದ್ದರು. ಹದಿನೈದು ದಿನಗಳ ನಂತರವೂ ವಿಚಾರಣೆಗೆ ಹಾಜರಾಗದ ಕಾರಣ ಸಿಂಗ್ ಅವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
’ಹಲವು ದಿನಗಳಿಂದ ಸಮರ್ ಸಿಂಗ್ ತಲೆಮರೆಸಿಕೊಂಡಿದ್ದನು. ಆರೋಪಿಯನ್ನು ಬಂಧಿಸುವ ಉದ್ದೇಶದಿಂದ ವಾರಣಾಸಿ ಕಮಿಷನರೇಟ್ ವ್ಯಾಪ್ತಿಯ ಸಾರನಾಥಾ ಪೊಲೀಸ್ ಠಾಣೆಯ ಪೊಲೀಸರು ಗಾಜಿಯಬಾದ್‌ಗೆ ಗುರುವಾರ ರಾತ್ರಿ ಭೇಟಿ ನೀಡಿದ್ದರು. ಸ್ಥಳೀಯ ಪೊಲೀಸರ ಸಹಾಯ ಪಡೆದು ಸಮರ್ ಸಿಂಗ್‌ಅನ್ನು ಪತ್ತೆ ಹಚ್ಚಲಾಗಿದೆ. ಚಾರ್ಮ್ಸ್ ಕ್ಯಾಸಲ್ ಹೌಸಿಂಗ್ ಸೊಸೈಟಿಯಲ್ಲಿ ಆರೋಪಿ ಪತ್ತೆಯಾಗಿದ್ದಾನೆ. ಪೊಲೀಸರು ಆರೋಪಿಯನ್ನು ಗಾಜಿಯಬಾದ್ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ’ ಎಂದು ಉಪ ಪೊಲೀಸ್ ಆಯುಕ್ತ ನಿಪುಣ್ ಅಗರ್‌ವಾಲ್ ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ.
ಆಕಾಂಕ್ಷಾ ದುಬೆ ಭೋಜಪುರಿ ಚಿತ್ರರಂಗದಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದರು. ಸಿನಿಮಾ ಸಂಬಂಧ ವಾರಣಾಸಿಯ ಹೋಟೆಲ್‌ನಲ್ಲಿ ನೆಲೆಸಿದ್ದರು. ದುಬೆ ಸಾವಿನ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ದುಬೆ ತಾಯಿ ‘ಇದು ಆತ್ಮಹತ್ಯೆ ಅಲ್ಲ ಕೊಲೆ. ಮಗಳ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ನೀಡಿಬೇಕು‘ ಎಂದು ಹೇಳಿದ್ದರು. ಭೋಜಪುರಿ ಚಿತ್ರರಂಗದ ಅನೇಕರು ದುಬೆ ಅವರನ್ನು ಶೋಷಿಸುತ್ತಿದ್ದರು, ಅವರಿಗೆ ಸರಿಯಾದ ಕೆಲಸ ನೀಡುತ್ತಿರಲಿಲ್ಲ ಎಂಬಲ್ಲ ಆರೋಪಗಳು ದುಬೆ ಸಾವಿನ ನಂತರ ಕೇಳಿ ಬಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.