ಹೈದರಾಬಾದ್: ತೆಲುಗು ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಅಭಿನಯದ ‘ಆಚಾರ್ಯ’ ಸಿನಿಮಾ ಇಂದು ವಿಶ್ವದಾದ್ಯಂತ ತೆರೆಕಂಡಿದೆ.
ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಆಚಾರ್ಯ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಕೋವಿಡ್ ಕಾರಣದಿಂದ ಚಿತ್ರ ಬಿಡುಗಡೆಯನ್ನು ಹಲವು ತಿಂಗಳು ಮುಂದೂಡಲಾಗಿತ್ತು.
ಈ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿರುವ ಅಭಿಮಾನಿಗಳು ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಆಚಾರ್ಯ ಸಿನಿಮಾ ಬ್ಲಾಕ್‌ಬಸ್ಟರ್ ಎಂದು ಚಿತ್ರಪ್ರೇಮಿಗಳ ಒಂದು ವರ್ಗ ಹೇಳುತ್ತಿದ್ದರೆ, ಇನ್ನು ಕೆಲವರು ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬಂದ ಅತ್ಯಂತ ದುರ್ಬಲ ಸಿನಿಮಾ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದಲ್ಲಿ ಚಿರಂಜೀವಿ ಆಚಾರ್ಯ ಪಾತ್ರವನ್ನು ನಿರ್ವಹಿಸಿದರೆ, ಅವರ ಮಗ ರಾಮ್ ಚರಣ್ ಸಿದ್ಧನ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ಸೋನು ಸೂದ್ ಖಳನಾಯಕನ ಪಾತ್ರ ಬಣ್ಣ ಹಚ್ಚಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಮಣಿ ಶರ್ಮಾ ಅವರು ಸಂಗೀತ ಸಂಯೋಜಿಸಿದ್ದಾರೆ. ಮ್ಯಾಟಿನಿ ಎಂಟರ್‌ಟೈನ್‌ಮೆಂಟ್ಸ್ ಮತ್ತು ಕೊನಿಡೇಲಾ ಪ್ರೊಡಕ್ಷನ್ ಕಂಪನಿ ಚಿತ್ರವನ್ನು ನಿರ್ಮಿಸಿದೆ.
ಚಿತ್ರದ ಮೊದಲಾರ್ಧ ಚೆನ್ನಾಗಿ ಮೂಡಿಬಂದಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ‘ಆಚಾರ್ಯ’ ಸಿನಿಮಾ ಕೊರಟಾಲ ಶಿವಗೆ ಮೊದಲ ಸೋಲು ಎಂದು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.