ADVERTISEMENT

ಅಂತಿಮ ವರದಿ ಆಧರಿಸಿ ನಟ ದರ್ಶನ್ ಮೇಲೆ ಕ್ರಮ: ಎನ್‌.ಎಂ.ಸುರೇಶ್‌

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 19:37 IST
Last Updated 13 ಜೂನ್ 2024, 19:37 IST
<div class="paragraphs"><p>ಎನ್‌.ಎಂ.ಸುರೇಶ್‌ </p></div>

ಎನ್‌.ಎಂ.ಸುರೇಶ್‌

   

ಬೆಂಗಳೂರು: ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡುವ ಕೆಲಸವನ್ನು ಅವರು ಮಾಡುತ್ತಾರೆ. ಪ್ರಕರಣದ ಅಂತಿಮ ವರದಿ ಬಂದ ಕೂಡಲೇ ಕಲಾವಿದರ ಸಂಘ ಸೇರಿದಂತೆ ಚಿತ್ರರಂಗದ ಅಂಗ ಸಂಸ್ಥೆಗಳ ಪದಾಧಿಕಾರಿಗಳ ಸಭೆ ಕರೆದು ದರ್ಶನ್‌ ವಿಚಾರದಲ್ಲಿ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್‌ಸಿಸಿ) ಅಧ್ಯಕ್ಷ ಎನ್‌.ಎಂ. ಸುರೇಶ್‌ ಹೇಳಿದರು.    

ಗುರುವಾರ ನಡೆದ ಕೆಎಫ್‌ಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ‘2011ರಲ್ಲಿ ಸಂಧಾನದ ಮೂಲಕ ದರ್ಶನ್‌–ವಿಜಯಲಕ್ಷ್ಮಿ ಪ್ರಕರಣವನ್ನು ಸರಿದೂಗಿಸಿದ್ದೆವು. ಆದರೆ ಈಗ ನಡೆದಿರುವುದು ಸಂಧಾನ ನಡೆಸುವಂತಹ ವಿಚಾರವಲ್ಲ. ಆಗಿರುವುದು ಕೊಲೆ. ಹೀಗಾಗಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ, ಯಾರನ್ನೂ ರಕ್ಷಿಸುವ ಕೆಲಸ ಮಾಡುವುದಿಲ್ಲ. ನಮ್ಮ ನಿರ್ಧಾರವನ್ನು ಕೆಲ ದಿನಗಳ ಕಾಲ ಮುಂದೂಡಿದ್ದೇವೆ. ಶೀಘ್ರದಲ್ಲೇ ಮಂಡಳಿಯ ಪದಾಧಿಕಾರಿಗಳೆಲ್ಲರೂ ರೇಣುಕಸ್ವಾಮಿ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದೇವೆ. ದರ್ಶನ್‌ ಅವರ ಒಂದು ಸಿನಿಮಾ ಮುಕ್ಕಾಲು ಭಾಗ ಶೂಟಿಂಗ್‌ ಮುಗಿದಿದೆ, ಇನ್ನೂ ಮೂರ್ನಾಲ್ಕು ನಿರ್ಮಾಪಕರು ಸಿನಿಮಾ ನಿರ್ಮಾಣಕ್ಕೆ ಸಜ್ಜಾಗಿದ್ದರು. ಇನ್ನೂ ನಾಲ್ಕೈದು ತಿಂಗಳು ದರ್ಶನ್‌ ಹೊರಗಡೆ ಬರಲು ಸಾಧ್ಯವಿಲ್ಲ. ಕೆಲವರು ಮುಂಗಡ ಹಣ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆ ನಿರ್ಮಾಪಕರನ್ನೂ ಕರೆದು ಮಾತುಕತೆ ನಡೆಸುತ್ತೇವೆ’ ಎಂದರು.   

ADVERTISEMENT

‘ಮೃತ ರೇಣುಕಸ್ವಾಮಿ ಕುಟುಂಬಕ್ಕೆ ಮಾನವೀಯತೆ ನೆಲೆಯಲ್ಲಿ ಆರ್ಥಿಕ ಸಹಾಯ ನೀಡುವ ಕುರಿತು ಆಲೋಚಿಸಿದ್ದೇವೆ. ದರ್ಶನ್‌ ಅವರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡುತ್ತಾರೆ ಎಂಬುದರಲ್ಲಿ ಹುರುಳಿಲ್ಲ. ಕಾನೂನು ಪ್ರಕಾರ ವಿಚಾರಣೆ ನಡೆಯುತ್ತಿದೆ. ಆರೋಪ ಸಾಬೀತಾಗಿ, ಶಿಕ್ಷೆಯಾದರೆ ಮತ್ತೊಮ್ಮೆ ಕಾರ್ಯಕಾರಿ ಸಮಿತಿ ಸಭೆ ಸೇರಿ ಚಿತ್ರರಂಗ ಒಗ್ಗಟ್ಟಾಗಿ ಅವರ ಚಿತ್ರಗಳಿಗೆ ಸಹಕಾರ ನೀಡದಿರುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಭಾ.ಮ.ಗಿರೀಶ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.