ADVERTISEMENT

ಕೇರಳದಲ್ಲಿ ದೇಗುಲ ಪ್ರವೇಶಕ್ಕೆ ತಡೆ: ಧಾರ್ಮಿಕ ತಾರತಮ್ಯದ ಆರೋಪ ಮಾಡಿದ ಅಮಲಾ ಪೌಲ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 11:03 IST
Last Updated 18 ಜನವರಿ 2023, 11:03 IST
ನಟಿ ಅಮಲಾ ಪೌಲ್
ನಟಿ ಅಮಲಾ ಪೌಲ್   

ಚೆನ್ನೈ: ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನ ಪ್ರವೇಶ ಕುರಿತಂತೆ ಅಧಿಕಾರಿಗಳು ಧಾರ್ಮಿಕ ತಾರತಮ್ಯ ತೋರುತಿದ್ದು, ದೇಗುಲ ಪ್ರವೇಶಕ್ಕೆ ತನಗೆ ಅನುಮತಿ ನಿರಾಕರಿಸಿದ್ದಾರೆ ಎಂದು ಬಹುಭಾಷಾ ನಟಿ ಅಮಲಾ ಪೌಲ್ ಆರೋಪಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

‘ಸೋಮವಾರ ದೇವರ ದರ್ಶನಕ್ಕೆ ತೆರಳಿದ್ದ ನನಗೆ ದೇಗುಲ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ಅಧಿಕಾರಿಗಳು, ದೇಗುಲದ ಆವರಣದೊಳಗೆ ಹಿಂದೂಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸುವ ಸಂಪ್ರದಾಯವಿದೆ ಎಂದು ಹೇಳಿದ್ದು, ಒತ್ತಾಯಪೂರ್ವಕವಾಗಿ ದೇವಸ್ಥಾನದ ಮುಂಭಾಗದ ರಸ್ತೆಯಿಂದಲೇ ದೇವಿಯ ದರ್ಶನಕ್ಕೆ ಸೂಚಿಸಿದರು’ಎಂದು ನಟಿ ಹೇಳಿಕೊಂಡಿದ್ದಾರೆ.

ಘಟನೆ ಬೆಳಕಿಗೆ ಬಂದ ಬಳಿಕ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನದ ಟ್ರಸ್ಟ್ ನಡೆಸುತ್ತಿರುವ ದೇವಾಲಯದ ಆಡಳಿತದ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವಾಲಯದ ಅಧಿಕಾರಿಗಳು ಅಸ್ತಿತ್ವದಲ್ಲಿರುವ ಶಿಷ್ಟಾಚಾರಗಳನ್ನು ಮಾತ್ರ ಅನುಸರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

‘ಬೇರೆ ಬೇರೆ ಧರ್ಮಗಳ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ, ಆದರೆ, ಅದು ಯಾರಿಗೂ ತಿಳಿದಿಲ್ಲ. ಆದರೆ, ಒಬ್ಬ ಸೆಲೆಬ್ರಿಟಿ ಭೇಟಿ ನೀಡಿದಾಗ ಮಾತ್ರ ಏಕೆ ವಿವಾದವಾಗುತ್ತದೆ’ಎಂದು ಟ್ರಸ್ಟ್ ಕಾರ್ಯದರ್ಶಿ ಪ್ರಸೂನ್ ಕುಮಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.