ADVERTISEMENT

ಅಪ್ಪನ ಸ್ವರ, ಅಮ್ಮನ ಸಂಸ್ಕಾರ.. ನಟ ಸಾಯಿಕುಮಾರ್ ಅವರ 50 ವರ್ಷದ ಬಣ್ಣದ ಪಯಣ

ಅಭಿಲಾಷ್ ಪಿ.ಎಸ್‌.
Published 5 ಮೇ 2022, 21:00 IST
Last Updated 5 ಮೇ 2022, 21:00 IST
ಸಾಯಿಕುಮಾರ್‌
ಸಾಯಿಕುಮಾರ್‌   

‘ಪೊಲೀಸ್‌...’ ಎನ್ನುವ ಶಬ್ದ ಕೇಳಿದೊಡನೆ ನೆನಪಿಗೆ ಬರುವ ನಟ ‘ಡೈಲಾಗ್‌ ಕಿಂಗ್‌’ ಸಾಯಿಕುಮಾರ್‌. ರಂಗಸ್ಥಳದಿಂದ ಆರಂಭವಾದ ಸಾಯಿಕುಮಾರ್‌ ಅವರ 50 ವರ್ಷದ ಬಣ್ಣದ ಪಯಣ ಇದೀಗ ವೆಬ್‌ಸೀರೀಸ್‌ವರೆಗೂ ಬಂದಿದೆ. ಅವರು ನಟಿಸಿರುವ ‘ಅವತಾರ ಪುರುಷ’ ಇಂದು ತೆರೆಕಾಣುತ್ತಿದ್ದು, ತಮ್ಮ ಸಿನಿಪಯಣವನ್ನೊಮ್ಮೆ ‘ಸಿನಿಮಾ ಪುರವಣಿ’ ಜೊತೆ ಮೆಲುಕು ಹಾಕಿದ್ದಾರೆ ಸಾಯಿಕುಮಾರ್‌...

ಬಣ್ಣದ ಲೋಕದಲ್ಲಿ ‘ಸುವರ್ಣ’ ವರ್ಷ. ಒಂದು ಫ್ಲ್ಯಾಶ್‌ಬ್ಯಾಕ್‌ನಲ್ಲಿ ಈ ಪಯಣ ನೋಡಿದರೆ...

ಆಂಧ್ರ ಮೂಲದ ಅಪ್ಪನಿಗೆ (ಪಿ.ಜೆ. ಶರ್ಮ) ಕರುನಾಡ ಅಮ್ಮನಿಗೆ (ಕೃಷ್ಣ ಜ್ಯೋತಿ) ಸಿನಿಮಾ ನಟ–ನಟಿಯರಾಗುವ ಕನಸು. ಅವರ ಪಯಣ ಹೊರಟಿದ್ದು ಚೆನ್ನೈಗೆ. ಅವರಿಬ್ಬರ ಬಾಂಧವ್ಯ ಶುರುವಾಗಿದ್ದೇ ರಂಗಸ್ಥಳದಿಂದ. ತಾಯಿಯ ಗರ್ಭದಲ್ಲಿರುವಾಗಲೇ ನನಗೆ ಸಿನಿಮಾ ಪರಿಚಯವಾಯಿತು ಎನ್ನಬಹುದು. ಅಮ್ಮ ಕನ್ನಡ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದರು. ಅಪ್ಪ ತೆಲುಗು ಸಿನಿಮಾದಲ್ಲಿ ತಲ್ಲೀನರಾಗಿದ್ದರು. ಅಪ್ಪನಿಗೆ ಹೀರೊ ಆಗುವ ಕನಸಿತ್ತು. ಆದರೆ, ಅವರಿಗೆ ಸಾಧ್ಯವಾಗಲಿಲ್ಲ. ನಂತರದಲ್ಲಿ ಕುಟುಂಬಕ್ಕಾಗಿ ಅಮ್ಮ ನಟನೆಯನ್ನು ಬಿಟ್ಟರು. ನಮ್ಮನ್ನು ಕಲಾವಿದರನ್ನಾಗಿ ಮಾಡುವ ಆಸೆ ಆಕೆಗಿತ್ತು. ಹಿರಿಯ ಮಗನಾಗಿ ಅವರ ಕಷ್ಟಗಳನ್ನು ನೋಡುತ್ತಾ ಬೆಳೆದ ನಾನು, 11ನೇ ವರ್ಷದಲ್ಲಿ (1972 ಅ.20ರಂದು) ದುರ್ಯೋಧನನ ಏಕಪಾತ್ರಾಭಿನಯದ ಮುಖಾಂತರ ರಂಗಸ್ಥಳ ಪ್ರವೇಶಿಸಿದೆ.

ADVERTISEMENT

ನಾನಿವತ್ತು ಡೈಲಾಗ್‌ ಕಿಂಗ್‌ ಎಂದೆನಿಸಿಕೊಳ್ಳಬೇಕಾದರೆ ಅದರ ಹಿಂದೆ ಅಮ್ಮನ ಶ್ರಮವಿತ್ತು. ಅಪ್ಪ ಧ್ವನಿ ನೀಡಿದರೆ, ಅಮ್ಮ ಸಂಸ್ಕಾರ ತುಂಬಿದರು. ಅಂದಾಜು 1974ರಲ್ಲಿ ‘ದೇವುಡು ಚೇಸಿನ ಪೆಳ್ಳಿ’ ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದೆ. ನಂತರ ಬಾಲನಟನಾಗಿ ಸತತ ಆರು ಸಿನಿಮಾಗಳನ್ನು ಮಾಡಿದೆ. 1984ರಲ್ಲಿ ಚಿರಂಜೀವಿ ಅವರ ‘ಚಾಲೆಂಜ್‌’ ಸಿನಿಮಾ ನನ್ನ ಸಿನಿ ಬದುಕಿಗೆ ತಿರುವು ನೀಡಿತು. ನಂತರದ ಜಯಸುಧಾ ಲೀಡ್‌ ಮಾಡಿದ್ದ ‘ಕಲಿಕಾಲಂ’ ಸಿನಿಮಾ ಸೂಪರ್‌ಹಿಟ್‌ ಆಯಿತು.

ಪೊಲೀಸ್‌ ಪಾತ್ರವೆಂದರೆ ಸಾಯಿಕುಮಾರ್‌ ಅನ್ನುವಷ್ಟರ ಮಟ್ಟಿಗೆ ಕನ್ನಡ ಸಿನಿಮಾಗಳಿಂದ ನಿಮಗೊಂದು ಇಮೇಜ್‌ ಬಂದಿತಲ್ಲವೇ?

ಹೌದು. ‘ಕಲಿಕಾಲಂ’ ಸಿನಿಮಾ, ಕನ್ನಡದಲ್ಲಿ 1993ರಲ್ಲಿ ‘ಕುಂಕುಮ ಭಾಗ್ಯ’ವಾಗಿ ರಿಮೇಕ್‌ ಆಯಿತು. ಮೊದಲಿಗೆ ನನಗೆ ಈ ಸಿನಿಮಾದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅವಕಾಶ ಕಳೆದುಕೊಂಡ ದುಃಖವನ್ನು ಅಮ್ಮನ ಬಳಿ ತೋಡಿಕೊಂಡಿದ್ದೆ. ‘ನಿನ್ನ ಹಣೆಯಲ್ಲಿ ಬರೆದಿದ್ದರೆ ಖಂಡಿತಾ ಅವಕಾಶ ಸಿಗುತ್ತದೆ’ ಎಂದು ಅಮ್ಮ ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ‘ಕುಂಕಮ ಭಾಗ್ಯ’ ನಿರ್ದಶಕರಿಂದ ಕರೆ ಬಂತು. ಈ ಸಿನಿಮಾ ಹಿಟ್‌ ಆದರೂ ಕೊಂಚ ಬೇಸರ ನನಗಿತ್ತು. ಏಕೆಂದರೆ, ಆ ಸಂದರ್ಭದಲ್ಲೇ 500ಕ್ಕೂ ಅಧಿಕ ತೆಲುಗು ಸಿನಿಮಾಗಳಲ್ಲಿ ಬಹುತೇಕ ಸೂಪರ್‌ಸ್ಟಾರ್‌ಗಳಿಗೆ ಡಬ್ಬಿಂಗ್‌ ಮಾಡಿದ್ದೆ. ಆದರೆ ‘ಕುಂಕುಮ ಭಾಗ್ಯ’ದಲ್ಲಿ ನನ್ನ ಪಾತ್ರಕ್ಕೆ ಬೇರೊಬ್ಬರು ಡಬ್ಬಿಂಗ್‌ ಮಾಡಿದ್ದರು.

‘ಕುಂಕುಮ ಭಾಗ್ಯ’ ಹಿಟ್‌ ಆದರೂ ನಂತರ ಹೆಚ್ಚಿನ ಅವಕಾಶ ಬರಲಿಲ್ಲ. ಈ ಚಿಂತೆಯಲ್ಲಿದ್ದಾಗ ಸಿಕ್ಕಿದ ಸಿನಿಮಾ ಓಂ ಪ್ರಕಾಶ್‌ ಅವರ ‘ಲಾಕಪ್‌ ಡೆತ್‌’ (1994). ಕಮರ್ಷಿಯಲಿ ಹಿಟ್‌ ಆದ ಈ ಸಿನಿಮಾ ಕನ್ನಡದಲ್ಲಿ ನನಗೆ ತಿರುವು ನೀಡಿತು. 1996ರಲ್ಲಿ ‘ಪೊಲೀಸ್‌ ಸ್ಟೋರಿ’ ಬಿಡುಗಡೆಯಾಯಿತು. ಅಷ್ಟೇ... ಬಳಿಕ ಅಗ್ನಿ ಇಮೇಜ್‌ನಲ್ಲೇ ನಾನು ಇದ್ದೇನೆ. ಅಂದಾಜು ಪ್ರತೀ ತಿಂಗಳಿಗೆ ಒಂದರಂತೆ 1996 ನಿಂದ 2002ವರೆಗೆ 50ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದೇನೆ. ನನಗಷ್ಟೇ ಅಲ್ಲ ರವಿಶಂಕರ್‌ ಹಾಗೂ ಅಯ್ಯಪ್ಪನಿಗೂ ಬ್ರೇಕ್‌ ನೀಡಿದ್ದು ಕರ್ನಾಟಕ.

ಸಹೋದರರೆಲ್ಲರಿಗೂ ಧ್ವನಿಯೇ ವರದಾನವಾಯಿತಲ್ಲವೇ?

ಖಂಡಿತವಾಗಿಯೂ. ಅಪ್ಪನದ್ದು ಬಹಳ ಗಂಭೀರ ಧ್ವನಿ. ರಂಗಸ್ಥಳವೇ ಆ ಧ್ವನಿಯನ್ನು ರೂಪಿಸಲು ಕಾರಣವಾಯಿತು. ಅಪ್ಪನದ್ದು ಕಂಚಿನ ಕಂಠ. ಅವರಿಗೆ ಭಾಷೆಯ ಮೇಲಿದ್ದ ಹಿಡಿತ, ಡಬ್ಬಿಂಗ್‌ಗೆ ಸಹಕಾರಿಯಾಗಿತ್ತು. ನನಗೆ ಕನ್ನಡ ಹಾಗೂ ತೆಲುಗು ಭಾಷೆ ಹೃದಯದ ಬಡಿತದಂತಾಗಿತ್ತು. ರವಿಶಂಕರ್‌ ಹಾಗೂ ಅಯ್ಯಪ್ಪನಿಗೂ ಇದೇ ಧ್ವನಿ ಜೀವ ನೀಡಿದೆ.

ಪದ ಬಳಕೆಯಲ್ಲಿ ಯಾವುದೇ ಮಡಿವಂತಿಕೆ ನಿಮ್ಮ ಪಾತ್ರಗಳಿಗಿರಲಿಲ್ಲ..

‘ಪೊಲೀಸ್ ಸ್ಟೋರಿ’ ನನ್ನ ಮೇಲೆ ಹೆಚ್ಚಿನ ಪರಿಣಾಮ ಬೀರಿದ ಸ್ಕ್ರಿಪ್ಟ್‌. ನರನರಗಳಲ್ಲಿ ಅಗ್ನಿ ಪಾತ್ರ ನನ್ನೊಳಗೆ ತುಂಬಿತ್ತು. ಕಥೆ ಕೇಳುವಾಗಲೇ ನಾನು ಅಗ್ನಿಯಾಗಿದ್ದೆ. ಎನ್‌ಸಿಸಿ ಕೆಡೆಟ್‌ ಆಗಿದ್ದ ನಾನು, ಈ ಕಥೆ ಕೇಳಿದ ಬಳಿಕ ಮೊದಲು ಮಾಡಿದ್ದೇ ಪೊಲೀಸ್‌ ಹೇರ್‌ಕಟ್‌. ಶೂಟಿಂಗ್‌ ಆದ ಬಳಿಕ ಸೆನ್ಸಾರ್‌ ಸಂದರ್ಭದಲ್ಲಿ ಏನಾಗುತ್ತದೆಯೋ ಎನ್ನುವ ಭಯವಿತ್ತು. ಆದರೆ ಅಲ್ಲಿನ ಭಾವನಾತ್ಮಕ ಸನ್ನಿವೇಶದ ಜೊತೆಗೆ ಆ ಸಂಭಾಷಣೆ ಸರಾಗವಾಗಿ ಹರಿಯಿತು. ಡೇವಿಡ್‌, ರವಿ ಶ್ರೀವತ್ಸ, ರಮೇಶ್‌ ಹೀಗೆ ಹಲವರು ನನಗೆ ಅದ್ಭುತವಾದ ಡೈಲಾಗ್ಸ್‌ ಬರೆದರು. ‘ಅಗ್ನಿ’ ಪಾತ್ರ ನೋಡಿ ಪೊಲೀಸ್‌ ಆದವರೂ ಇದ್ದಾರೆ ಎನ್ನುವುದು ನನಗೆ ಹೆಮ್ಮೆ.

ಹೀರೊಗಳ ಬದಲಾದ ಪಾತ್ರದ ನೈತಿಕತೆ ಬಗ್ಗೆ ಏನನ್ನುತ್ತೀರಿ?

ಯೂನಿವರ್ಸಲ್‌ ಸಿನಿಮಾ ಎಂದು ಮಾಡಿ, ಎಲ್ಲ ಹೀರೊಗಳು ನೆಗೆಟಿವ್‌ ಶೇಡ್ಸ್‌ ಮಾಡುತ್ತಿದ್ದಾರೆ. ಜನರಿಗೆ ಒಳ್ಳೆಯದನ್ನು ಮಾಡಲು ಹೀಗೆ ಮಾಡುತ್ತಿದ್ದೇನೆ ಎಂದು ಹೀರೊ ಕೊನೆಯಲ್ಲಿ ಹೇಳುವುದು ಬೇರೆ... ಹೀರೊ ನೆಗೆಟಿವ್‌ ಶೇಡ್‌ ಮಾಡಿದರೆ ಆತನನ್ನು ತಿದ್ದುವವರು ಯಾರು? ಪ್ರಸ್ತುತ ಚಿತ್ರಕಥೆಗಳು, ಪಾತ್ರಗಳು, ಕಾಂಸೆಪ್ಟ್‌ ಎಲ್ಲವೂ ಬದಲಾಗಿವೆ. ಸಿನಿಮಾ ತಪ್ಪು ಸಂದೇಶವನ್ನು ಕೊಡಲೇಬಾರದು. ಸ್ವಲ್ಪ ಲಕ್ಷ್ಮಣರೇಖೆ ದಾಟಿದ್ದೇವೆ ಎನಿಸುತ್ತಿದೆ.

* ‘ಗಾಲಿವಾನ’ ವೆಬ್‌ಸಿರೀಸ್‌ ಅನುಭವ ಹೇಗಿತ್ತು?

ಅವಕಾಶ ಸಿಗುವುದೇ ಅಪರೂಪ. ಹೀಗಿರುವಾಗ ಸಿಕ್ಕಿದ ಅವಕಾಶ ಕಳೆದುಕೊಳ್ಳಬಾರದು. ನಾನು ತೆರೆ ಮೇಲೆ ಎಷ್ಟು ಹೊತ್ತು ಕಾಣಿಸುತ್ತೇನೆ ಎನ್ನುವುದನ್ನು ಆಧರಿಸಿ ಪಾತ್ರ ಒಪ್ಪಿಕೊಳ್ಳುವುದಿಲ್ಲ. ಸಣ್ಣ ಪಾತ್ರವಾದರೂ ಪರಿಣಾಮಕಾರಿಯಾಗಿರಬೇಕು. ಜೀ5ನಲ್ಲಿ ಬರುತ್ತಿರುವ ತೆಲುಗಿನ ‘ಗಾಲಿವಾನ’ ವೆಬ್‌ಸಿರೀಸ್‌ ಮೂಲಕ ನಾನೀಗ ಮನೆಮನೆಗೆ ಹೋಗುತ್ತಿದ್ದೇನೆ. ಆ ಕುಟುಂಬದ ಭಾಗವಾಗುತ್ತಿದ್ದೇನೆ. ಕನ್ನಡದಲ್ಲೂ ವೆಬ್‌ಸಿರೀಸ್‌ನಿಂದ ಆಫರ್‌ ಬರುತ್ತಿವೆ.

‘ಪೊಲೀಸ್‌ ಸ್ಟೋರಿ’ ತಂಡದಿಂದ ಹೊಸ ಸಿನಿಮಾ

ಪೊಲೀಸ್‌ ಸ್ಟೋರಿ ಇಮೇಜ್‌ನಿಂದ ಆಚೆ ಬರಲು ಸಾಯಿಕುಮಾರ್‌ ಅವರಿಗೆ ಇಂದಿಗೂ ಸಾಧ್ಯವಾಗಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಮಲಯಾಳಂ ಚಿತ್ರರಂಗದಿಂದ ಇತ್ತೀಚೆಗಷ್ಟೇ ಒಂದು ಆಫರ್‌ ಬಂದಿತ್ತು. ಅಲ್ಲೂ ಪೊಲೀಸ್‌ ಅಧಿಕಾರಿ ಪಾತ್ರ (ನಗುತ್ತಾ). ಹೆಚ್ಚು ಪೊಲೀಸ್‌ ಪಾತ್ರ ಮಾಡಿದ್ದು ಸಾಯಿಕುಮಾರ್‌ ಎಂದೇ ದಾಖಲೆ ಆಗಬಹುದು. ಥ್ರಿಲ್ಲರ್‌ ಮಂಜು ಸಾರಥ್ಯದಲ್ಲಿ ಅದೇ ‘ಪೊಲೀಸ್‌ ಸ್ಟೋರಿ’ ತಂಡದಿಂದ ‘ನಾಲ್ಕನೇ ಸಿಂಹ’ ಎನ್ನುವ ಶೀರ್ಷಿಕೆಯಡಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದೇವೆ. ಇದು ಇನ್ನೂ ಅಂತಿಮಗೊಂಡಿಲ್ಲ. 25ನೇ ವರ್ಷಕ್ಕೆ ಮಾಡಬೇಕೆಂದು ಇತ್ತು. ಆದರೆ ಕೋವಿಡ್‌ನಿಂದ ಇದು ಸಾಧ್ಯವಾಗಿಲ್ಲ. ಹೊಸ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.