ಬೆಂಗಳೂರು: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಹಾಗೂ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ, ಜಗನ್ ಅವರ ವೈಎಸ್‌ಆರ್‌ಸಿಪಿಯನ್ನು ಬಗ್ಗು ಬಡಿದು ಅಧಿಕಾರದ ಗದ್ದುಗೆ ಏರಿವೆ.
ಕುಸಿದು ಹೋಗಿದ್ದ ಟಿಡಿಪಿಗೆ ಬೆನ್ನೆಲುಬಾಗಿ ನಿಂತು ಅಧಿಕಾರ ಹಿಡಿಯಲು ಜನಸೇನಾ ಪಕ್ಷವೂ ಈ ಸಾರಿ ಸಾಕಷ್ಟು ಶ್ರಮಿಸಿದೆ.
ಈ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಅವರಿಗೆ ಆಂಧ್ರ ಅಷ್ಟೇ ಅಲ್ಲದೇ ಇಡೀ ದೇಶದ ತುಂಬ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ಐದು ವರ್ಷಗಳಿಂದ ಚುನಾವಣೆಯ ಮೇಲೆ ಕಣ್ಣಿಟ್ಟು ಸಾಕಷ್ಟು ಶ್ರಮವಹಿಸಿ ತಮ್ಮ ಜನಸೇನಾ ಪಕ್ಷ 21 ಸ್ಥಾನಗಳನ್ನು ಪಡೆಯುವಂತೆ ಅವರು ಮಾಡಿದ್ದಾರೆ.
ಫಲಿತಾಂಶದ ನಂತರ ತಮ್ಮ ಕುಟುಂಬ ಹಾಗೂ ಆತ್ಮೀಯರನ್ನು ಭೇಟಿಯಾಗುತ್ತಿರುವ ಪವನ್ ಅವರು, ತಮ್ಮ ಸಹೋದರ, ಮೆಗಾಸ್ಟಾರ್ ಚಿರಂಜೀವಿ ಅವರನ್ನು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದರು.
ಈ ವೇಳೆ ಚಿರಂಜೀವಿ ಹಾಗೂ ಅವರ ಕುಟುಂಬದ ಅನೇಕರು ಪವನ್ ಕಲ್ಯಾಣ್ ಅವರಿಗೆ ಹೂಮಳೆ ಸುರಿಸಿ, ಆರತಿ ಎತ್ತಿ ಭರ್ಜರಿ ಸ್ವಾಗತ ಕೋರಿದ್ದಾರೆ. ಸಹೋದರ ಹಾಗೂ ತಾಯಿಯ ಕಾಲಿಗೆರಗಿ ನಮಸ್ಕರಿಸಿದ ಪವನ್, ಕೆಲಹೊತ್ತು ಕುಟುಂಬದವರ ಜೊತೆ ಆತ್ಮೀಯವಾಗಿ ಕಾಲಕಳೆದರು.
ಈ ವೇಳೆ ಪವನ್ ಕಲ್ಯಾಣ ಅವರ ಪತ್ನಿ ರಷ್ಯಾ ಮೂಲದ ಅನ್ನಾ ಲೆಜ್‌ನೇವಾ ಅವರೂ ಹಾಜರಿದ್ದರು. ನಟ ರಾಮಚರಣ್, ಸಾಯಿ ಧರ್ಮತೇಜ ಸೇರಿದಂತೆ ಕೋನಿಡೇಲಾ ಕುಟುಂಬದ ಹಲವರು ಪವನ್ ಕಲ್ಯಾಣ್ ಅವರ ಸಾಧನೆಯನ್ನು ಸಂಭ್ರಮಿಸಿದರು.
ಈ ಕುರಿತ ವಿಡಿಯೊವನ್ನು ಚಿರಂಜೀವಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ರಿಯಲ್ ಸ್ಟಾರ್‌ಗೆ ಒಂದು ಭಾವನಾತ್ಮಕ ಸ್ವಾಗತ ನಮ್ಮಿಂದ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ 133, ಜನಸೇನಾ 21, ಬಿಜೆಪಿ 8 ಸ್ಥಾನಗಳನ್ನು ಗಳಿಸಿ ಮಿಂಚಿದರೆ ಆಡಳಿತಾರೂಢ ವೈಎಸ್‌ಆರ್‌ಸಿಪಿ 11 ಸೀಟುಗಳನ್ನು ಗೆಲ್ಲುವ ಮೂಲಕ ಹೀನಾಯ ಸೋಲುಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.