ನಟರಾಕ್ಷಸ ಎಂದೇ ಖ್ಯಾತಿ ಪಡೆದಿರುವ ‘ಡಾಲಿ’ ಧನಂಜಯ್ ರಗಡ್ ಪಾತ್ರಕ್ಕೂ ಸಾಫ್ಟ್ ಪಾತ್ರಕ್ಕೂ ಸೈ ಎನ್ನಿಸಿಕೊಂಡವರು. ಇದಕ್ಕೆ ಸಾಕ್ಷಿ ‘ಟಗರು’ ಹಾಗೂ ‘ರತ್ನನ್ ಪ್ರಪಂಚ’ ಸಿನಿಮಾಗಳು. ಸಾಲು ಸಾಲು ಚಿತ್ರಗಳಲ್ಲಿ ಬಣ್ಣ ಹಚ್ಚುತ್ತಿರುವ ಧನಂಜಯ್ ಅವರ ಹೊಸ ಚಿತ್ರ ‘ಬಡವ ರಾಸ್ಕಲ್’ ಡಿ.24ಕ್ಕೆ ತೆರೆಕಾಣುತ್ತಿದೆ. ಇದರ ಪ್ರಚಾರಕ್ಕಾಗಿ ಚಿತ್ರತಂಡವು ಜನಸಾಮಾನ್ಯರನ್ನೇ ಬಳಸಿಕೊಂಡು ವಿಭಿನ್ನವಾಗಿ ಹೆಜ್ಜೆ ಇಟ್ಟಿದೆ.
ಎಳನೀರು ಗಾಡಿ, ತರಕಾರಿ ಮಾರುಕಟ್ಟೆ, ಶಾಲೆ, ಬಿರಿಯಾನಿ ಹೋಟೆಲ್ ಹೀಗೆ ಎಲ್ಲೆಂದರಲ್ಲಿ ಇದೀಗ ‘ಬಡವ ರಾಸ್ಕಲ್’ ಪ್ರೊಮೋಷನ್ಸ್ ನಡೆಯುತ್ತಿದೆ. ‘ಡಿ.24ಕ್ಕೆ ಬಡವ ರಾಸ್ಕಲ್’ ಎನ್ನುವ ಸ್ಲೇಟ್ ಫಲಕ ಎಲ್ಲೆಡೆ ರಾರಾಜಿಸುತ್ತಿದೆ. ತಮ್ಮ ಡಾಲಿ ಪಿಕ್ಚರ್ಸ್ ಲಾಂಛನದಡಿ ಧನಂಜಯ್ ಅವರೇ ನಿರ್ಮಾಣ ಮಾಡಿರುವ ಈ ಚಿತ್ರ ‘ಮಿಡಲ್ ಕ್ಲಾಸ್ ಎಮೋಷನಲ್ ಎಂಟರ್‌ಟೈನರ್’. ಚಿತ್ರದಲ್ಲಿ ಬಹುತೇಕ ಕಲಾವಿದರು ಧನಂಜಯ್ ಅವರ ರಂಗಭೂಮಿ, ಕಾಲೇಜು ಗೆಳೆಯರು ಹಾಗೂ ಧನಂಜಯ್ ಜೀವನದಲ್ಲಿ ಜೊತೆಗಿದ್ದವರೇ ಆಗಿದ್ದಾರೆ. ಕೊರಿಯರ್ ಬಾಯ್ ಆಗಿ ಕಾರ್ಯನಿರ್ವಹಿಸಿದ್ದ ಶಂಕರ್ ಇದೀಗ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಜನಸಾಮಾನ್ಯರನ್ನೇ ಬಳಸಿಕೊಂಡು ಚಿತ್ರತಂಡವು ಪ್ರಚಾರಕ್ಕಿಳಿದಿದೆ.
ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಶಂಕರ್ ಗುರು ಅವರೇ ಬರೆದಿದ್ದು, ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳೆ ಈ ಚಿತ್ರದ ಕಥಾಹಂದರ.ರಂಗಾಯಣ ರಘು, ತಾರಾ, ಸ್ಪರ್ಶ ಚಿತ್ರ ಖ್ಯಾತಿಯ ರೇಖಾ, ನಾಗಭೂಷಣ್, ಪೂರ್ಣಚಂದ್ರ ಪ್ರಮುಖ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.