ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಫಾರಿ ನಡೆಸಿರುವ ಆರೋಪ ಎದುರಿಸುತ್ತಿರುವ ನಟ ಧನ್ವೀರ್ ಗೌಡ ಅವರು ಶನಿವಾರ ವಿಚಾರಣೆ ಹಾಜರಾದರು.
ಗೋಪಾಲಸ್ವಾಮಿ ಬೆಟ್ಟ ವಲಯದ ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ಅವರು ವಿಚಾರಣೆ ನಡೆಸಿದ್ದಾರೆ.
ನಟ ಹಾಗೂ ಅವರ ಸ್ನೇಹಿತರು ಗುರುವಾರ ರಾತ್ರಿ ಬಂಡೀಪುರದಲ್ಲಿ ಸಫಾರಿ ನಡೆಸಿದ್ದಾರೆ ಎನ್ನಲಾದ ವಿಡಿಯೊ ಶುಕ್ರವಾರ ವೈರಲ್ ಆಗಿತ್ತು. ಇದಕ್ಕೆಪರಿಸರ ಪ್ರಿಯರಿಂದ ಆಕ್ರೋಶ ವ್ಯಕ್ತವಾಗಿತ್ತು.
ಈ ಘಟನೆಗೆ ಸಂಬಂಧ ಪ್ರತಿಕ್ರಿಯಿಸಿದ್ದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು, ‘ಬಂಡೀಪುರದಲ್ಲಿ ರಾತ್ರಿ ಸಫಾರಿಗೆ ಅವಕಾಶ ಇಲ್ಲ. ರಾತ್ರಿ ಸಫಾರಿ ನಡೆಸಿರುವುದು ನಿಜವಾದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ಪೊಲೀಸರಿಗೂ ದೂರು ನೀಡಲಾಗುವುದು’ ಎಂದು ಹೇಳಿದ್ದರು.
ವಿಚಾರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಲಯ ಅರಣ್ಯ ಅಧಿಕಾರಿ ನವೀನ್ ಕುಮಾರ್ ಅವರು, ‘ಧನ್ವೀರ್ ಅವರು ವಿಚಾರಣೆಗೆ ಹಾಜರಾಗಿ ಕ್ಷಮೆ ಕೋರಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡುತ್ತೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.