ADVERTISEMENT

ಡಬ್ಬಿಂಗ್ ಸಿನಿಮಾ ನೀರಿನಲ್ಲಿ ಕೈ ಅದ್ದಿ ನೆಕ್ಕಿದಂತೆ: ಹಿರಿಯ ನಟ ದೊಡ್ಡಣ್ಣ

ಮಾಧ್ಯಮ ಸಂವಾದ: ಅಭಿಮತ

ವೆಂಕಟೇಶ ಜಿ.ಎಚ್.
Published 26 ಜನವರಿ 2021, 14:15 IST
Last Updated 26 ಜನವರಿ 2021, 14:15 IST
ಬಾಗಲಕೋಟೆಯಲ್ಲಿ ಮಂಗಳವಾರ ಚಿತ್ರನಟ ದೊಡ್ಡಣ್ಣ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಭಾಷ್ ಹೊದ್ಲೂರ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಸುಭಾಷ ಮಿಟ್ಟಲಕೋಡ ಹಾಜರಿದ್ದರು
ಬಾಗಲಕೋಟೆಯಲ್ಲಿ ಮಂಗಳವಾರ ಚಿತ್ರನಟ ದೊಡ್ಡಣ್ಣ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಭಾಷ್ ಹೊದ್ಲೂರ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಸುಭಾಷ ಮಿಟ್ಟಲಕೋಡ ಹಾಜರಿದ್ದರು   

ಬಾಗಲಕೋಟೆ: ‘ಕನ್ನಡದಲ್ಲಿಯೇ ಸಿದ್ಧವಾದ ಸಿನಿಮಾಗಳೆಂದರೆ ಪಾಯಸದಲ್ಲಿ ಕೈ ಅದ್ದಿ ಬಾಯಲ್ಲಿ ಇಟ್ಟುಕೊಂಡು ನೆಕ್ಕಿದಂತೆ, ಡಬ್ಬಿಂಗ್ ಸಿನಿಮಾಗಳೆಂದರೆ ನೀರಿನಲ್ಲಿ ಕೈ ಅದ್ದಿ ನೆಕ್ಕಿಕೊಂಡಂತೆ. ಪಾಯಸವೋ, ನೀರಿನ ರುಚಿಯೋ ನಿರ್ಣಯಿಸಬೇಕಾದವರುಪ್ರೇಕ್ಷಕ ಮಹಾಶಯರು’.

ಇದು ಡಬ್ಬಿಂಗ್ ಸಿನಿಮಾ ಕನ್ನಡಕ್ಕೆ ಅಗತ್ಯವೇ ಎಂಬ ಪ್ರಶ್ನೆಗೆ ಹಿರಿಯ ನಟ ದೊಡ್ಡಣ್ಣ ಮೇಲಿನಂತೆ ಪ್ರತಿಕ್ರಿಯಿಸಿದರು.

ಬಾಗಲಕೋಟೆಯ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಮಾಧ್ಯಮ ಸಂವಾದದಲ್ಲಿ ದೊಡ್ಡಣ್ಣ ಪಾಲ್ಗೊಂಡಿದ್ದರು. ಒಂದು ಗಂಟೆಗೂ ಹೆಚ್ಚು ಕಾಲ ಮಾಧ್ಯಮದವರಿಂದ ತೂರಿಬಂದ ಪ್ರಶ್ನೆಗಳ ಬಾಣ ಎದುರಿಸಿದರು.

ADVERTISEMENT

‘ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್-ಗೀರ್ ವಾರ್ ಏನೂ ಇಲ್ಲ. ಸುದೀಪ್-ದರ್ಶನ್ ಎಲ್ಲರೂ ಸ್ನೇಹಿತರೇ. ಸೂರ್ಯನ ಬೆಳಕಿಗೆ ಸಣ್ಣ ಮೋಡ ಅಡ್ಡಬಂದಂತೆ ಸಣ್ಣ, ಪುಟ್ಟ ಭಿನ್ನಾಭಿಪ್ರಾಯ ಬಂದಿರಬಹುದಷ್ಟೇ’ ಎಂದು ಪ್ರತಿಕ್ರಿಯಿಸಿದರು.

38 ವರ್ಷಗಳ ಸಿನಿಮಾ ನಂಟು: ‘ನಮ್ಮೂರು ಹಾಸನ ಜಿಲ್ಲೆ ಅರಸೀಕೆರೆ. ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾಗ ಚಿತ್ರರಂಗದ ನಂಟು ಬೆಳೆಯಿತು. ಮೊದಲಿಗೆ ನಾನು ನಾಟಕದಲ್ಲಿ ಪಾತ್ರ ಮಾಡುತ್ತಿದ್ದೆ. ಕಲೆಯಲ್ಲಿ ಆಸಕ್ತಿ ಮೂಡಲು, ನಾಟಕದಲ್ಲಿ ಗೀಳು ಹುಟ್ಟಲು ನನ್ನ ಹಿರಿಯ ಸಹೋದರನೇ ಪ್ರೇರಣೆ. 1982ರಲ್ಲಿ ಮೊದಲ ಬಾರಿಗೆ ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಸಿನಿಮಾದಿಂದ ಬಣ್ಣ ಹಚ್ಚಿದೆ’ ಎಂದು ಸ್ಮರಿಸಿದರು.

‘ಕನ್ನಡ ಭಾಷೆ ಎಂದರೆ ಹಡೆದವ್ವ. ಆದರೆ ಇಂಗ್ಲಿಷ್‌ನ ವ್ಯಾಮೋಹದಿಂದಾಗಿ ಕನ್ನಡದ ಹಿರಿಮೆ– ಗರಿಮೆ ಮರೆಯಾಗುತ್ತಿದೆ. ಅದು ಸರಿಯಲ್ಲ. ಕನ್ನಡ ಭಾಷೆ, ಶಾಲೆಗಳು ಉಳಿದು ಬೆಳೆಯಬೇಕು’ ಎಂದರು.

‘ಜನರು ಇನ್ನೂ ಥಿಯೇಟರ್‌ಗೆ ಬರಲು ಹಿಂಜರಿಯುತ್ತಿರುವ ಕಾರಣ ದೊಡ್ಡ ದೊಡ್ಡ ಬಜೆಟ್‌ನ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಹಿಂಜರಿಯುತ್ತಿದ್ದಾರೆ. ಫೆಬ್ರುವರಿ ವೇಳೆಗೆ ಪರಿಸ್ಥಿತಿ ಸುಧಾರಿಸಬಹುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಂವಾದದಲ್ಲಿ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ,ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಭಾಷ ಹೊದ್ಲೂರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.