ADVERTISEMENT

ವಿಷ್ಣುವರ್ಧನ್‌ ಜನ್ಮದಿನ: ಅಭಿಮಾನಿಗಳ ಸಂಭ್ರಮ

ಅಭಿಮಾನ್‌ ಸ್ಟುಡಿಯೊ ಬಳಿ ವಿಷ್ಣುವರ್ಧನ್‌ ಅಭಿಮಾನಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 16:12 IST
Last Updated 18 ಸೆಪ್ಟೆಂಬರ್ 2024, 16:12 IST
ಉತ್ತರಹಳ್ಳಿ–ಕೆಂಗೇರಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೊದಲ್ಲಿರುವ ವಿಷ್ಣುವರ್ಧನ್ ಸಮಾಧಿಗೆ ಅಭಿಮಾನಿಗಳು ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು 
ಉತ್ತರಹಳ್ಳಿ–ಕೆಂಗೇರಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೊದಲ್ಲಿರುವ ವಿಷ್ಣುವರ್ಧನ್ ಸಮಾಧಿಗೆ ಅಭಿಮಾನಿಗಳು ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು    

ಬೆಂಗಳೂರು: ದಿವಂಗತ ವಿಷ್ಣುವರ್ಧನ್ ಅವರ 74ನೇ ವರ್ಷದ ಜನ್ಮದಿನವನ್ನು ಬುಧವಾರ ನಗರದೆಲ್ಲೆಡೆ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.

ಹಲವೆಡೆ ಕೇಕ್‌ ಕತ್ತರಿಸಿ, ರಕ್ತದಾನ ಮಾಡಿದರು. ಅಭಿಮಾನ್ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಅಭಿಮಾನಿಗಳು ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು.

ಇದಕ್ಕೂ ಮುನ್ನ ಸಮಾಧಿ ದರ್ಶನಕ್ಕೆ ಅವಕಾಶ ಸಿಗದೆ ಪ್ರತಿಭಟನೆ ನಡೆದು ಗದ್ದಲ ಉಂಟಾಯಿತು. ಕೆಂಗೇರಿಯಲ್ಲಿರುವ ಅಭಿಮಾನ್ ಸ್ಟುಡಿಯೊ ಹೊರಗೆ ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ವತಿಯಿಂದ ಅನ್ನದಾನ, ರಕ್ತದಾನ ಶಿಬಿರ, ಇತರೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಟುಡಿಯೊ ಹೊರಭಾಗದ ಕಾರ್ಯಕ್ರಮಕ್ಕೆ ಮಾತ್ರ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಆದ್ದರಿಂದ, ಸಮಾಧಿಗೆ ಪೂಜೆ ಸಲ್ಲಿಸದಂತೆ ಸ್ಟುಡಿಯೊದ ಸಿಬ್ಬಂದಿ ತಡೆಯೊಡ್ಡಿ ಗೇಟ್‌ ಬೀಗ ಹಾಕಿದರು. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಸ್ಮಾರಕದ ಗೇಟ್‌ ಬಳಿ ಪ್ರತಿಭಟನೆಗೆ ಮುಂದಾದರು. ಪೊಲೀಸರ ಮಧ್ಯಪ್ರವೇಶದಿಂದ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದ ನಂತರ ವಾತಾವರಣ ತಿಳಿಗೊಂಡಿತು.

ADVERTISEMENT

ವಿಷ್ಣುವರ್ಧನ್ ಮಂಟಪಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಸ್ಟುಡಿಯೊದ ಹೊರಗಡೆ ಪೆಂಡಲ್ ಹಾಕಿ ಆಯೋಜಕರು ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.

‘ಸಮಾಧಿ ಹಾಗೂ ಸುತ್ತಮುತ್ತ ಹೂವಿನ ಅಲಂಕಾರ ಮಾಡುವುದು ಸ್ವಲ್ಪ ತಡವಾಗಿತ್ತು. ಈ ಕಾರಣಕ್ಕೆ ಪ್ರವೇಶ ಸಿಕ್ಕಿರಲಿಲ್ಲ. ನಂತರ, ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಯಾವುದೇ ಸಮಸ್ಯೆ ಆಗಿಲ್ಲ’ ಎಂದು ಪೊಲೀಸರು ಹೇಳಿದರು.

ಅಭಿಮಾನ್ ಸ್ಟುಡಿಯೊದಲ್ಲಿ ಸೇರಿದ್ದ ವಿಷ್ಣುವರ್ಧನ್‌ ಅಭಿಮಾನಿಗಳು  
ಅಭಿಮಾನ್‌ ಸ್ಟುಡಿಯೊ ಪ್ರವೇಶಕ್ಕೆ ಕಾದಿದ್ದ ವಿಷ್ಣುವರ್ಧನ್‌ ಅಭಿಮಾನಿಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.