ಇಂಗ್ಲಿಷ್ ಕಾನ್ವೆಂಟ್ ಶಾಲೆಗಳ ಅಬ್ಬರದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿರುವುದು, ಶಿಕ್ಷಣ ದಂಧೆಯಂತಹ ಗಂಭೀರ ಸಮಸ್ಯೆಗಳನ್ನು ನಿರ್ದೇಶಕ ಕವಿರಾಜ್ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ಪರಿಣಾಮಕಾರಿಯಾಗಿ ತೆರೆದಿಟ್ಟಿದ್ದಾರೆ.
ಕಳೆದ ಶುಕ್ರವಾರ ನವೆಂಬರ್ 22ರಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದಿದ್ದ ಕನ್ನಡ ಮೇಷ್ಟ್ರಿಗೆ ಇಂದು ಅನೇಕ ಚಿತ್ರಮಂದಿರಗಳಿಂದ ಗೇಟ್‌ಪಾಸ್ ನೀಡಿದ್ದಾರೆ. ಇದರಿಂದ ಮನನೊಂದ ನಟ ಜಗ್ಗೇಶ್, ಕನ್ನಡ ಚಿತ್ರರಂಗದ ಬಗ್ಗೆ ಬಹಳ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.
‘ವಿದ್ಯುತ್ ಚಿತಾಗಾರವಾಯಿತು ಕನ್ನಡ ಚಿತ್ರರಂಗ! ಕರುಣೆ ಇಲ್ಲದೆ, ಬಂದ ಹೆಣ ಸುಟ್ಟು ದಕ್ಷಿಣೆ ಪಡೆದು ಕಳಿಸುವ ಚಾಂಡಾಳವೃತ್ತಿಯಾಗಿದೆ ಚಿತ್ರರಂಗ! ಯಶಸ್ವಿಯಾದ ‘ಕಾಳಿದಾಸಕನ್ನಡಮೇಷ್ಟ್ರು‘ ಸಿನಿಮಾವನ್ನು ಕರುಣೆಯಿಲ್ಲದೆ ಅನೇಕ ಚಿತ್ರಮಂದಿರದಿಂದ ಎತ್ತಂಗಡಿ ಮಾಡಿದ್ದಾರೆ! ಕಿವಿಡು ಕುರುಡು ಚಿತ್ರರಂಗದ ಹಿರಿಯರಿಗೆ ಧನ್ಯವಾದ, ಉದ್ದಾರ ಕನ್ನಡಚಿತ್ರರಂಗ.. ಶುಭಮಸ್ತು ಕನ್ನಡಕ್ಕೆ!’ ಎಂದು ಚಿತ್ರರಂಗದಲ್ಲಿನ ತುಳಿಯುವ ಚಾಳಿಯನ್ನು ಮಾತುಗಳಲ್ಲಿ ಬಿಚ್ಚಿಟ್ಟಿದ್ದಾರೆ.
ಜಗ್ಗೇಶ್ ಅವರದು ಇದರಲ್ಲಿ ಸರ್ಕಾರಿ ಕನ್ನಡ ಶಾಲೆಯ ಮೇಷ್ಟ್ರು ಪಾತ್ರ. ಅವರ ವೃತ್ತಿಬದುಕಿನ ಬಗ್ಗೆ ಕಥೆಯ ಎಳೆಯೊಂದು ಸಾಗುತ್ತಿರುತ್ತದೆ. ಇನ್ನೊಂದು ಎಳೆಯು ವೈಯಕ್ತಿಕ ಜೀವನ ಕುರಿತೂ ಸಾಗುತ್ತಿರುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಕಥೆ ಗಂಭೀರ ಸ್ವರೂಪ ಪಡೆಯುತ್ತದೆ. ಅದರ ಕ್ಯಾನ್ವಾಸ್ ದೊಡ್ಡದಾಗುತ್ತದೆ. ಸಿನಿಮಾ ನೋಡಿದ ಬಳಿಕ ಮಕ್ಕಳ ಶಿಕ್ಷಣ ಸಂಬಂಧ ಪೋಷಕರು ಸ್ವಲ್ಪವಾದರೂ ಬದಲಾಗುತ್ತಾರೆ. ಸರ್ಕಾರಕ್ಕೂ ಒಳ್ಳೆಯ ಸಂದೇಶವನ್ನು ಈ ಸಿನಿಮಾ ಹೊಂದಿದೆ.
ಮೇಘನಾ ಗಾಂವ್ಕರ್ ಈ ಚಿತ್ರದ ನಾಯಕಿ. ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್ ಗುಂಡ್ಲುಪೇಟೆ ಛಾಯಾಗ್ರಹಣವಿದೆ. ಯು.ಆರ್. ಉದಯ್ ಕುಮಾರ್ ಆರ್ಥಿಕ ಇಂಧನ ಒದಗಿಸಿದ್ದಾರೆ. ಅಂಬಿಕಾ, ತಬಲ ನಾಣಿ, ಟಿ.ಎಸ್. ನಾಗಾಭರಣ ತಾರಾಗಣದಲ್ಲಿದ್ದಾರೆ.
ಇನ್ನಷ್ಟು ಓದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.