1996 ಜನವರಿ 31ರಂದು ಕಂಠೀರವ ಸ್ಟುಡಿಯೋದಿಂದ ಆರಂಭವಾದ ಬಹುಭಾಷಾ ನಟ ಸುದೀಪ್ ಅವರ ಸಿನಿ ಪಯಣಕ್ಕೀಗ 26 ವರ್ಷ. ಅಂದು ‘ಬ್ರಹ್ಮ’ ಚಿತ್ರದ ಮೂಲಕ ಬಣ್ಣದಲೋಕ ಪ್ರವೇಶಿಸಿದ್ದ ಅವರು ಈ ಸಂದರ್ಭದಲ್ಲಿ ತಮ್ಮ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
‘ಈ 26 ವರ್ಷಗಳ ಪಯಣ ನಿಮ್ಮಿಂದಾಗಿ ಬಹಳ ಸ್ಮರಣೀಯವಾಗಿತ್ತು. ಎಲ್ಲವುದಕ್ಕೂ ನಿಮಗೆ ಧನ್ಯವಾದ. ಈ ಸಂದರ್ಭದಲ್ಲಿ ಚಿತ್ರರಂಗದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಸಾವಿರಾರು ಅಭಿಮಾನಿಗಳು ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿ ಶುಭಾಶಯ ಕೋರಿದ್ದಾರೆ.
‘ಬ್ರಹ್ಮ’ ಸಿನಿಮಾ ಮುಖಾಂತರ ಬಣ್ಣದಲೋಕಕ್ಕೆ ಸುದೀಪ್ ಪ್ರವೇಶಿಸಿದರೂ, ತೆರೆಯ ಮೇಲೆ ಅವರು ಕಾಣಿಸಿಕೊಂಡಿದ್ದು, 1997ರಲ್ಲಿ ಬಿಡುಗಡೆಯಾದ ‘ತಾಯವ್ವ’ ಮುಖಾಂತರ. ನಟನಾಗಿ ಬೆಳೆದ ಸುದೀಪ್ ಅವರು ಇದೀಗ ಅಭಿಮಾನಿಗಳ ‘ಅಭಿನಯ ಚಕ್ರವರ್ತಿ’. ಚಂದನವನ, ಟಾಲಿವುಡ್, ಬಾಲಿವುಡ್‌ನಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸುದೀಪ್ ಅವರು ನಟಿಸಿದ್ದು, ‘ಮೈ ಆಟೋಗ್ರಾಫ್’ ಚಿತ್ರದ ಮೂಲಕ ಅವರು ನಿರ್ದೇಶನಕ್ಕೂ ಇಳಿದ್ದಿದ್ದರು. ಈ ಸಿನಿಮಾ ಅವರೊಳಗಿದ್ದ ನಿರ್ದೇಶಕನ ಪ್ರತಿಭೆಗೆ ಕನ್ನಡಿ ಹಿಡಿಯಿತು. ಅದಾದ ನಂತರ, ‘ಶಾಂತಿ ನಿವಾಸ’, ‘ಜಸ್ಟ್ ಮಾತ್ ಮಾತಲ್ಲಿ’, ‘ವೀರ ಮದಕರಿ’, ‘ಕೆಂಪೇಗೌಡ’, ‘ಮಾಣಿಕ್ಯ’ ಸಿನಿಮಾವನ್ನೂ ಸುದೀಪ್ ನಿರ್ದೇಶಿಸಿದರು.
ಈ ಪಯಣದಲ್ಲಿ ಜೊತೆಗಿದ್ದ ಪತ್ನಿಗೂ ಸುದೀಪ್ ಟ್ವೀಟ್‌ನಲ್ಲಿ ಧನ್ಯವಾದ ತಿಳಿಸಿದ್ದಾರೆ. ‘ನನ್ನ ಜೊತೆ ನೀನು ಈ ಪಯಣದಲ್ಲಿ 26 ವರ್ಷ ಕಳೆದಿದ್ದಿ. ಈ ಸಂದರ್ಭದಲ್ಲಿ ನೀನು ಮಾಡಿದ ತ್ಯಾಗಕ್ಕೆ ನಾನು ಎಷ್ಟು ಧನ್ಯವಾದ ಹೇಳಿದರೂ ಕಮ್ಮಿಯೇ. ನನಗೆ ಶಕ್ತಿಯಾಗಿ ನಿಂತಿರುವುದಕ್ಕೆ ಧನ್ಯವಾದ. ಕೆಲಸಕ್ಕೆ ಸಂಬಂಧಿಸಿದಂತೆ ಆಡಿದ ಚುಚ್ಚುಮಾತುಗಳಿಗೂ ಧನ್ಯವಾದ, ಇದರಿಂದ ನನ್ನ ನಟನೆಯಲ್ಲಿ ನಾನು ಮತ್ತಷ್ಟು ಸುಧಾರಣೆಯನ್ನು ಮಾಡಿಕೊಂಡಿದ್ದೇನೆ’ ಎಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
‘ಕೋಟಿಗೊಬ್ಬ–3’ ಚಿತ್ರದ ಬಳಿಕ, ಸುದೀಪ್ ಅವರು ನಟಿಸಿರುವ ಬಹುನಿರೀಕ್ಷೆಯ ಬಿಗ್‌ಬಜೆಟ್ ಸಿನಿಮಾ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಫೆ.24ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಮುಂದೂಡಲ್ಪಟ್ಟಿದ್ದು, ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸುವುದಾಗಿ ಚಿತ್ರತಂಡ ಇತ್ತೀಚೆಗಷ್ಟೇ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.