ಬೆಂಗಳೂರು: ಇಬ್ಬರು ಸಿನಿಮಾ ಸ್ಟಾರ್‌ಗಳ ಮಾತು–ತಿರುಗೇಟಿನ ನಡುವೆ 'ಹಿಂದಿ ರಾಷ್ಟ್ರ ಭಾಷೆ'(?) ಎಂಬುದರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. 'ಪ್ರಸ್ತುತ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ' ಎಂದು ಕಿಚ್ಚ ಸುದೀಪ್ ಹೇಳಿದ್ದ ಮಾತಿಗೆ ಬಾಲಿವುಡ್ ನಟ ಅಜಯ್ ದೇವಗನ್ ಕಿಡಿ ಕಾರಿದ್ದಾರೆ.
ಈ ಇಬ್ಬರು ನಟರ ಟ್ವೀಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿನಿಮಾ ಭಾಷೆ ಮತ್ತು ರಾಷ್ಟ್ರ ಭಾಷೆಯ ಚರ್ಚೆಗೆ ಕಿಚ್ಚು ಹಚ್ಚಿದೆ. ಅದಾಗಲೇ ಸಿನಿಮಾ ಪ್ರಿಯರು, ಹಿಂದಿ ಪರ–ವಿರೋಧಿಗಳು ಚರ್ಚೆಗೆ ಇಳಿದಿದ್ದಾರೆ.
ಸುದೀಪ್ ಅವರ ಹೇಳಿಕೆಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಅಜಯ್ ದೇವಗನ್, 'ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಲ್ಲವಾದರೆ, ನೀವೇಕೆ ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿರುವಿರಿ? ಹಿಂದಿ ಭಾಷೆಯು ಈ ಹಿಂದೆ, ಈಗ ಮತ್ತು ಯಾವಾಗಲೂ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರೀಯ ಭಾಷೆಯಾಗಿದೆ. ಜನ ಗಣ ಮನ' ಎಂದು ಸುದೀಪ್ ಅವರನ್ನು ಟ್ಯಾಗ್ ಮಾಡಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಕಿಚ್ಚ ಸುದೀಪ್, ' ಆ ನನ್ನ ಹೇಳಿಕೆಯ ಹಿನ್ನೆಲೆಗೂ ಅದು ನಿಮಗೆ ತಲುಪಿರುವುದಕ್ಕೂ ಸಂಪೂರ್ಣ ವ್ಯತ್ಯಾಸವಾಗಿದೆ. ನಾನು ನಿಮ್ಮನ್ನು ನೇರವಾಗಿ ಭೇಟಿಯಾದಾಗ ಆ ಹೇಳಿಕೆಯ ಬಗ್ಗೆ ವಿವರಿಸುತ್ತೇನೆ. ಇದು ಯಾರಿಗೂ ನೋವುಂಟು ಮಾಡಲು, ಪ್ರಚೋದಿಸಲು ಅಥವಾ ಚರ್ಚೆಯನ್ನು ಹುಟ್ಟುಹಾಕಲು ನೀಡಿದ ಹೇಳಿಕೆಯಲ್ಲ. ಹಾಗೇಕೆ ನಾನು ಮಾಡಲಿ ಸರ್,' ಎಂದು ಅಜಯ್ ದೇವಗನ್ ಅವರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ನಮ್ಮ ರಾಷ್ಟ್ರದ ಎಲ್ಲ ಭಾಷೆಗಳನ್ನೂ ನಾನು ಪ್ರೀತಿಸುವೆ ಹಾಗೂ ಗೌರವಿಸುವೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದು, 'ಈ ವಿಷಯವು ಇಲ್ಲಿಗೇ ನಿಲ್ಲಲು ಬಯಸುತ್ತೇನೆ....ಮೇಲೆ ತಿಳಿಸಿರುವಂತೆ ನನ್ನ ಹೇಳಿಕೆಯು ಸಂಪೂರ್ಣ ಭಿನ್ನವಾದ ಸನ್ನಿವೇಶದಲ್ಲಿ ಹೇಳಿರುವುದಾಗಿದೆ. ನಿಮ್ಮ ಮೇಲೆ ಅಪಾರ ಪ್ರೀತಿಯಿದೆ ಮತ್ತು ಸದಾ ಶುಭವನ್ನು ಹಾರೈಸುತ್ತೇನೆ. ಆದಷ್ಟು ಬೇಗ ನಿಮ್ಮನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ' ಎಂದು ಚರ್ಚೆಗೆ ಪೂರ್ಣ ವಿರಾಮ ಹಾಕಿದ್ದಾರೆ.
ಕೆಜಿಎಫ್ ಚಾಪ್ಟರ್–2 ಸಿನಿಮಾ ದೇಶದಾದ್ಯಂತ ಹಾಗೂ ವಿದೇಶದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಸಂಗ್ರಹಿಸಿರುವ ಬೆನ್ನಲ್ಲೇ ಈ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಉಪೇಂದ್ರ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ 'ಐ ಆ್ಯಮ್ ಆರ್' ಸಿನಿಮಾದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ 'ಹಿಂದಿ' ವಿಚಾರ ಪ್ರಸ್ತಾಪಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲ, ಅವು ಎಲ್ಲ ಕಡೆಗೂ ತಲುಪುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾ ಮೂಡುತ್ತಿರುವುದು ಹಿಂದಿಯಿಂದ ಎಂದು ಸುದೀಪ್ ಹೇಳಿದ್ದರು.
ಹಿಂದಿ ಕುರಿತು ಕಿಚ್ಚ ಹೇಳಿದ್ದೇನು?
ಪ್ಯಾನ್ ಇಂಡಿಯಾ ಎಂಬುದರ ಬಗ್ಗೆ ಕಾರ್ಯಕ್ರಮದಲ್ಲಿ ಸುದೀಪ್ ವಿವರಿಸಲು ಮುಂದಾದರು. 'ಹಿಂದಿ ಇನ್ನು ರಾಷ್ಟ್ರೀಯ ಭಾಷೆ ಅಲ್ಲ. ಬಾಲಿವುಡ್‌ನವರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದು, ತೆಲುಗು ಮತ್ತು ತಮಿಳು ಭಾಷೆಗೆ ಡಬ್ ಮಾಡಿ, ಒದ್ದಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳು ಮುಂಬೈನಿಂದ ಬರುತ್ತಿವೆ, ಇಲ್ಲಿಂದ ಅಲ್ಲ. ಇಲ್ಲಿಂದ ಕೇವಲ 'ಸಿನಿಮಾ' ಮಾತ್ರ ಬರುತ್ತಿದ್ದು, ಅದು ಎಲ್ಲ ಕಡೆ ತಲುಪುತ್ತಿದೆ. ಭಾಷೆ ಕೇವಲ ತಡೆಯಷ್ಟೇ, ಈಗ ನಮ್ಮ ಸಿನಿಮಾ ಎಲ್ಲವನ್ನೂ ದಾಟಿದೆ...' ಎಂದು ಹೇಳಿದ್ದರು.
ಧನ್ಯವಾದ ಹೇಳಿದ ದೇವಗನ್
ಸುದೀಪ್ ವಿವರಣೆಗೆ ಮತ್ತೆ ಪ್ರತಿಕ್ರಿಯಿಸಿರುವ ಅಜಯ್ ದೇವಗನ್, 'ಗೆಳೆಯ, ತಪ್ಪಾಗಿ ಅರ್ಥೈಸಿಕೊಂಡಿದ್ದನ್ನು ಸರಿ ಪಡಿಸಿದ್ದಕ್ಕೆ ಧನ್ಯವಾದಗಳು. ಚಿತ್ರರಂಗವು ಯಾವಾಗಲೂ ಒಂದೂ ಎಂದು ಕಾಣುವವನು ನಾನು. ನಾವು ಎಲ್ಲ ಭಾಷೆಗಳನ್ನು ಗೌರವಿಸುತ್ತೇವೆ ಹಾಗೂ ಎಲ್ಲರೂ ನಮ್ಮ ಭಾಷೆಯನ್ನು ಗೌರವಿಸುವುದನ್ನು ನಿರೀಕ್ಷಿಸುತ್ತೇವೆ....' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.