ADVERTISEMENT

‘ಡ್ರೈವ್‌’ನಲ್ಲಿ ಮಗ್ನರಾಗಿರುವ ಕಿಶೋರ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 0:05 IST
Last Updated 4 ಅಕ್ಟೋಬರ್ 2024, 0:05 IST
ಕಿಶೋರ್‌
ಕಿಶೋರ್‌   

ರಜಿನಿಕಾಂತ್‌ ಸೇರಿದಂತೆ ಬಹುಭಾಷಾ ಸ್ಟಾರ್‌ಗಳನ್ನು ಹೊಂದಿರುವ ‘ವೆಟ್ಟೈಯನ್‌’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಕನ್ನಡದ ನಟ ಕಿಶೋರ್‌ ಈ ಬಗ್ಗೆ ಮಾತಿಗೆ ಸಿಕ್ಕರು...

‘ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಇರುವವರೆಲ್ಲ ಪೊಲೀಸ್‌ ಅಧಿಕಾರಿಗಳೇ. ಹಲವು ಸ್ಟಾರ್‌ಗಳ ಸಿನಿಮಾದಲ್ಲಿ ಚಿತ್ರೀಕರಣ ಡೇಟ್‌ ಹೊಂದಾಣಿಕೆ ಒಂದು ರೀತಿಯ ಸರ್ಕಸ್‌. ಆದರೂ ಹಲವು ಭಾಷೆಯ ದೊಡ್ಡ ಸ್ಟಾರ್‌ಗಳು ಇದ್ದಾಗ ಚಿತ್ರ ತಲುಪುವ ವ್ಯಾಪ್ತಿಯೂ ದೊಡ್ಡದಾಗುತ್ತದೆ. ಜೊತೆಗೆ ಒಂದು ಆಸಕ್ತಿದಾಯಕ ಕಥೆ. ಟಿ.ಜೆ.ಗುಣವೇಲು ಬಹಳ ಸೂಕ್ಷ್ಮಸಂವೇದಿ ನಿರ್ದೇಶಕ. ಹೀಗಾಗಿ ಚಿತ್ರ ಒಪ್ಪಿಕೊಂಡೆ. ಜನ ಈ ಕಥೆಯನ್ನು ಹೇಗೆ ಸ್ವೀಕರಿಸುತ್ತಾರೆ ನೋಡಬೇಕು’ ಎಂದು ಚಿತ್ರದ ಬಗ್ಗೆ ವಿವರಿಸಿದರು.

‘ನನಗೆ ರಜನಿಕಾಂತ್‌, ಫಹಾದ್‌ ಫಾಸಿಲ್‌ ಮತ್ತು ಅಭಿರಾಮಿ ಜೊತೆಗಿನ ದೃಶ್ಯಗಳಿತ್ತು. ಹೀಗಾಗಿ ಈ ಚಿತ್ರದಲ್ಲಿ ಬೇರೆ ಸ್ಟಾರ್‌ಗಳು ಸಿಗಲಿಲ್ಲ. ಕನ್ನಡದಲ್ಲಿ ನನ್ನ ನಟನೆಯ ‘5’ ಎನ್ನುವ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಇದಲ್ಲದೆ ನಾಲ್ಕೈದು ಪುಟ್ಟ ಸಿನಿಮಾಗಳಲ್ಲಿ ನಟಿಸಿರುವೆ. ತೆಲುಗಿನಲ್ಲಿ ‘ಮಟ್ಕಾ’ ಎಂಬ ಕಮರ್ಷಿಯಲ್‌ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ’ ಎಂದು ತಮ್ಮ ಪ್ರಾಜೆಕ್ಟ್‌ಗಳ ಮಾಹಿತಿ ಬಿಚ್ಚಿಟ್ಟರು.

ADVERTISEMENT

‘ಇದರ ನಡುವೆ ನಾವೇ ಒಂದಷ್ಟು ಗೆಳೆಯರು ಸೇರಿಕೊಂಡು ಒಂದು ಸಿನಿಮಾ ಮಾಡುತ್ತಿದ್ದೇವೆ. ಪೊಲೀಸ್‌ ಅಧಿಕಾರಿಗಳು ಒಂದು ಪ್ರಕರಣಕ್ಕಾಗಿ ಜರ್ನಿ ಮಾಡುವ ಕಥೆ. ‘ಡ್ರೈವ್‌’ ಎಂಬ ಹೆಸರಿನ ಈ ಚಿತ್ರವನ್ನು ಬರೆದು ನಿರ್ದೇಶನ ಮಾಡುತ್ತಿರುವೆ. ಶೇ 75ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ನನ್ನ ‘ವಿಸ್ತಾರ’ ಮತ್ತು ಸಂಗೀತಾ ಭಟ್‌ ಅವರ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ನಿರ್ಮಾಣಗೊಂಡಿದೆ. ಪ್ರಕಾಶ್‌ ರಾಜ್‌, ಅವಿನಾಶ್‌ ಇದ್ದಾರೆ. ನನ್ನನ್ನು ಸೇರಿಸಿ ನಾಲ್ಕಾರು ನಟರಿದ್ದಾರೆ. ಒಂದು ಸಣ್ಣ ಚೌಕಟ್ಟಿನ ಸಿನಿಮಾ. ಕನ್ನಡದ ಪ್ರೇಕ್ಷಕರು ಬಹಳ ಬುದ್ಧಿವಂತರು. ಅವರನ್ನು ಒಪ್ಪಿಸಿದರೆ ಬೇರೆಯವರನ್ನು ಒಪ್ಪಿಸಬಹುದು ಎಂದು ಮಣಿರತ್ನಂ ಹೇಳುತ್ತಿದ್ದರು. ಅಂಥ ಒಂದಷ್ಟು ಪ್ರೇಕ್ಷಕರನ್ನು ಹುಟ್ಟುಹಾಕುವ ಸಣ್ಣ ಪ್ರಯತ್ನವಷ್ಟೇ’ ಎಂದು ತಮ್ಮ ಮುಂದಿನ ಸಿನಿಮಾದ ಬಗ್ಗೆ ವಿವರಿಸಿದರು.

‘ನಾವೆಲ್ಲ ಒಂದು ರೀತಿ ಬ್ರಿಡ್ಜ್‌ ನಟರು. ಎಲ್ಲ ರೀತಿಯ ಸಿನಿಮಾಗಳಲ್ಲಿಯೂ ನಟಿಸುತ್ತೇವೆ. ಹೀಗಾಗಿ ನನಗೆ ದೊಡ್ಡ ಸಿನಿಮಾ, ಸಣ್ಣ ಸಿನಿಮಾ ಎಂದಿಲ್ಲ. ನಮ್ಮಂಥ ನಟರಿಂದಲೂ ಒಂದಷ್ಟು ಪ್ರೇಕ್ಷಕರು ಸಿನಿಮಾಗೆ ಬಂದರೆ ಖುಷಿ. ಉತ್ತಮ ಸಂದೇಶ ನೀಡುವ, ಸಂವೇದನಾಶೀಲ ಚಿತ್ರಗಳ ಜೊತೆಗಿನ ಪಯಣ ಹೀಗೆ ಮುಂದುವರಿಯುತ್ತದೆ’ ಎಂದು ಮಾತಿಗೆ ವಿರಾಮವಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.