ಬೆಂಗಳೂರು: ನಟ ಕಿಶೋರ್ ಅವರ ಟ್ವಿಟರ್ ಖಾತೆ ಅಮಾನತಿಗೆ ಒಳಗಾಗಿದೆ. ಖಾತೆಯನ್ನು ಹುಡುಕಿ ನೋಡಿದಾಗ ಟ್ವಿಟರ್‌ನಿಂದಲೇ ಅವರ ಅಧಿಕೃತ @actorkishore ಅಕೌಂಟ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಕಿಶೋರ್ ಅವರು ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಖಾತೆ ಅಮಾನತಿಗೆ ಕಾರಣಗಳು ತಿಳಿದು ಬಂದಿಲ್ಲ.
ಕಿಶೋರ್ ಅವರು ಟ್ವಿಟರ್‌ನಲ್ಲಿ ಆಗಾಗ ಅನೇಕ ಪ್ರಗತಿಪರ ವಿಚಾರಗಳ ಬಗ್ಗೆ ಮುಕ್ತವಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದರು.
ನಟಿ ಸಾಯಿ ಪಲ್ಲವಿ ವಿವಾದವಾದಾಗಲೂ ನಟ ಕಿಶೋರ್, ಜನಗಳ ಬಾಯಿ ಮುಚ್ಚಿಸುವುದು ಸರ್ಕಾರದ ಕೆಲಸವಲ್ಲವೇ, ಈ ಕೆಲಸದ ಗುತ್ತಿಗೆಯನ್ನು ಮಾಧ್ಯಮ ಯಾವಾಗ ಪಡೆದುಕೊಂಡಿತು? ಸಿನಿಮಾಕರ್ಮಿಗಳು, ನಟ-ನಟಿಯರು ಸಾಮಾಜಿಕ ಅಭಿಪ್ರಾಯವನ್ನು ಹೊಂದುವುದು ಅಪರಾಧವೇ?' ಎಂದು ಪ್ರಶ್ನೆ ಮಾಡಿದ್ದರು.
ಕಾಶ್ಮೀರಿ ಪಂಡಿತರ ಹತ್ಯೆ, ಮುಸ್ಲಿಮರ ಮೇಲೆ ದಾಳಿ ಎರಡೂ ಒಂದೇ ಎಂದು ಸಾಯಿ ಪಲ್ಲವಿ ಹೇಳಿದ್ದರು.
ಕಾಂತಾರ ಸಿನಿಮಾ ವಿವಾದವಾದಾಗಲೂ ಕಿಶೋರ್ ಪ್ರತಿಕ್ರಿಯಿಸಿದ್ದರು. ನಂಬಿಕೆ ಇರಬೇಕು, ಆದರೆ, ಮೂಢನಂಬಿಕೆ ಇರಬಾರದು ಎಂದು ಹೇಳಿದ್ದರು. ಎಲ್ಲ ಒಳ್ಳೆಯ ಸಿನಿಮಾಗಳಂತೆ ಕಾಂತಾರ ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿ ಹೋದೀತು ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.