ADVERTISEMENT

‘ಉಂಡೆನಾಮ‘: ಶುಕ್ರದೆಸೆಯಲ್ಲಿ ಕೋಮಲ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 19:30 IST
Last Updated 13 ಏಪ್ರಿಲ್ 2023, 19:30 IST
ಕೋಮಲ್
ಕೋಮಲ್   

ಕೋಮಲ್‌ ಅವರ ಬದುಕು ಹೇಗಿದೆ?

ಲಯಬದ್ಧವಾಗಿದೆ. ಜೀವನ ಅಂದ ಮೇಲೆ ಒಂದಿಷ್ಟು ಮೆಲೋಡ್ರಾಮಾ, ಥ್ರಿಲ್‌, ಸಸ್ಪೆನ್ಸ್‌ ಇರಬೇಕು. ಎಲ್ಲ ನವರಸಗಳು ಇದ್ದಾಗಲೇ ಮಜಾ ಇರುತ್ತದೆ.

ಹಿಂದಿನ ಮತ್ತು ಇಂದಿನ ಕೋಮಲ್‌ಗೂ ಆಗಿರುವ ಬದಲಾವಣೆ ಕುರಿತು ಹೇಳಿ...

ADVERTISEMENT

ನನ್ನ ದೈಹಿಕ ಸ್ವರೂಪವನ್ನು ನೋಡಿ ಕೆಲವರು ನನ್ನನ್ನು ನೋಯಿಸಿದ್ದುಂಟು. ನನಗೆ ಥೈರಾಯ್ಡ್‌ ಸಮಸ್ಯೆ ಇತ್ತು. ಅದೂ ಅಂಥ ವ್ಯತ್ಯಾಸಕ್ಕೆ ಕಾರಣವಾಗಿತ್ತು. ಈ ಹೊತ್ತಿನಲ್ಲಿ ನನಗೆ ಮೂವರು ಯೋಗ ಗುರುಗಳು ಸಿಕ್ಕಿದರು. ಅವರೆಲ್ಲರ ನೆರವಿನಿಂದ ಗಾಢವಾಗಿ ಯೋಗ, ಅಧ್ಯಾತ್ಮದಲ್ಲಿ ತೊಡಗಿಕೊಂಡೆ. ಹಾಗಾಗಿ ಈಗಿನ ಕೋಮಲ್‌ ಕಾಣುತ್ತಿದ್ದಾನೆ. ಇನ್ನು ಜ್ಯೋತಿಷದ ಪ್ರಕಾರ ಹೇಳಬೇಕೆಂದರೆ, ಗ್ರಹಗಳ ಚಲನೆ ಮನುಷ್ಯರ ಮೇಲೆ ಪರಿಣಾಮ ಬೀರುತ್ತದೆ. ನನಗೆ ಈಗ ಶುಕ್ರದೆಸೆ ನಡೆಯುತ್ತಿದೆ. ಈಗ ಎಲ್ಲವೂ ಒಳ್ಳೆಯದೇ ಆಗುತ್ತಿದೆ.

ಚಿತ್ರರಂಗದಿಂದ ದಿಢೀರ್‌ ದೂರವಾದ ಬಗ್ಗೆ ಹೇಳಿ?

ಜ್ಯೋತಿಷ ಇತ್ಯಾದಿಗಳನ್ನು ಶೇ 50ರಷ್ಟು ಮಾತ್ರ ನಂಬುತ್ತಿದ್ದೆ. ಉದಾಹರಣೆಗೆ ‘ಕೆಂಪೇಗೌಡ’ ಚಿತ್ರವನ್ನು ಅದ್ಭುತವಾಗಿ ಮಾಡಿದ್ದೆವು. ಆದರೆ, ಅದು ಫಲಿತಾಂಶ ಕೊಡಲಿಲ್ಲ. ಕೇತು ದೆಸೆಯಲ್ಲಿ ಹೀಗೇ ಆಗುತ್ತದೆ. ಇದನ್ನೆಲ್ಲಾ ನೋಡಿ ನಮ್ಮ ಅಣ್ಣ ಜಗ್ಗೇಶ್‌, ‘ಮೂರು ವರ್ಷ ಸುಮ್ಮನೆ ತಳ್ಳಿಬಿಡು’ ಅಂದಿದ್ದರು. ಆಗ ನಾನು ಕೇವಲ ಅಧ್ಯಾತ್ಮದತ್ತ ಹೊರಳಿದ್ದೆ. ಆ ಕಾಲ ಕಳೆದ ಬಳಿಕ ‘ಕಾಲಾಯ ನಮಃ’ ಸೆಟ್ಟೇರಿತು. ಆ ಸಿನಿಮಾ ಸೆಟ್ಟೇರುತ್ತಿದ್ದಂತೆಯೆ ಹಲವಾರು ನಿರ್ಮಾಪಕರು ಬಂದು ಕಥೆ ಕೇಳಿ ಮುಂಗಡ ನೀಡಿದರು. ಒಂದೇ ದಿನ ಆರು ಸಿನಿಮಾಗಳಿಗೆ ಬುಕ್‌ ಮಾಡಿಕೊಂಡರು. ಹೀಗೆ ಗ್ರಹಗತಿಗಳು ಮನುಷ್ಯರ ಮೇಲೆ ಅಗಾಧವಾದ ಪರಿಣಾಮ ಬೀರುತ್ತವೆ.

‘ಕೆಂಪೇಗೌಡ’ ಸಿನಿಮಾ ಬಂದಾಗ ನಿಮಗೆ ಗಂಭೀರ ಪಾತ್ರಗಳು ಹೊಂದುವುದಿಲ್ಲ ಎಂದವರೂ ಇದ್ದರಲ್ವಾ?

ನೋಡಿ, ಅದು ನಮ್ಮ ಮನಃಸ್ಥಿತಿ. ಒಬ್ಬ ಹೀರೋ ಮಾಡಿದರೆ ಹೀರೋನೇ ಆಗಬೇಕು. ವಿಲನ್‌ ಆದರೆ ಅದೇ ಆಗಬೇಕು ಅನ್ನುವುದು ನಮ್ಮ ಮೈಂಡ್‌ಸೆಟ್‌. ಉದಾಹರಣೆಗೆ ಬಿರಾದಾರ್‌ ಅವರಂತಹ ಪ್ರಶಸ್ತಿ ಪುರಸ್ಕೃತ ಅದ್ಭುತ ನಟರನ್ನು ಭಿಕ್ಷುಕ, ಹುಚ್ಚನ ಪಾತ್ರಕ್ಕೆ ಸೀಮಿತ ಮಾಡಿಬಿಟ್ಟಿರುವುದೂ ಇದೇ ಕಾರಣದಿಂದ. ಅವರು ಬೇರೆ ಅದ್ಭುತ ಪಾತ್ರಗಳನ್ನು ಮಾಡಬಲ್ಲರು ಅನ್ನುವುದನ್ನು ಗುರುತಿಸಲೇ ಇಲ್ಲ. ಇಂಥದ್ದೇ ಪರಿಣಾಮ ನನ್ನ ಮೇಲೂ ಆಗಿದೆ.

ಮತ್ತೆ ಕಾಮಿಡಿ ಪ್ರಕಾರಕ್ಕೆ ಹೋಗುತ್ತಿದ್ದೀರಿ. ಎಷ್ಟರಮಟ್ಟಿಗೆ ಜನರನ್ನು ತಲುಪಲಿದ್ದೀರಿ?

ನಾನು ಸಿನಿಕ್ಷೇತ್ರಕ್ಕೆ ಬಂದಿದ್ದೇ ಒಬ್ಬ ವಿತರಕನಾಗಿ. ಆ ಬಳಿಕ ಪ್ರದರ್ಶಕನಾದೆ. ಒಂಬತ್ತು ಚಿತ್ರಗಳನ್ನು ನಿರ್ಮಿಸಿದ್ದೇನೆ. ಒಂದು ರೆಕಾರ್ಡಿಂಗ್‌ ಸ್ಟುಡಿಯೋ ಇದೆ. ಹೀಗೆ ಸಿನಿಮಾ ಅನ್ನುವುದೇ ನನಗೊಂದು ಸಂಸಾರ. ಉದಾಹರಣೆಗೆ ‘ನಮೋ ಭೂತಾತ್ಮ’ ಚಿತ್ರವನ್ನು ಕನ್ನಡದಲ್ಲಿ ರೀಮೇಕ್‌ ಮಾಡಿದೆ. ಆದರೆ, ಅದರ ಹಿಂದಿ ಡಬ್ಬಿಂಗ್‌ ಹಕ್ಕು ಕೇಳಿದರು. ಡಬ್‌ ಆದ ಚಿತ್ರವನ್ನು ಯುಟ್ಯೂಬ್‌ನಲ್ಲಿ 1.2 ಕೋಟಿ ಜನ ನೋಡಿದರು. ಹಾಗಾಗಿ ಈಗಿನ ಚಿತ್ರಗಳ ಮೇಲೂ ನನಗೆ ನಂಬಿಕೆ ಇದೆ.

ಹಾಸ್ಯ ನಟನಿಂದ ನಾಯಕ ಆಗಿ ಬದಲಾಗುವ ಹೊತ್ತು ನಿಮ್ಮ ತಯಾರಿ ಹೇಗಿದೆ?

ಬರೀ ಹಾಸ್ಯ ಪಾತ್ರ ಮಾಡಿದಾಗ ನಾವು ಖಾಲಿ ಜಾಗಗಳನ್ನು ತುಂಬುವವರಾಗಿರುತ್ತೇವೆ. ಆದರೆ, ನಾಯಕ ಪಾತ್ರ ನಿರ್ವಹಿಸುವಾಗ ನಮಗೆ ನಿಜವಾಗಿಯೂ ಸವಾಲು ಇರುತ್ತದೆ. ಭಾವನಾತ್ಮಕತೆ ತುಂಬಬೇಕಾಗುತ್ತದೆ. ಥ್ರಿಲ್‌, ಕಾಮಿಡಿ ಎಲ್ಲವನ್ನೂ ಸಮ್ಮಿಳಿತಗೊಳಿಸಿಕೊಡಬೇಕಾಗುತ್ತದೆ. ಅಂಥ ಒಂದು ಫುಲ್‌ಮೀಲ್ಸ್‌ ಕೊಡುವ ಸಾಮರ್ಥ್ಯ ಇರುವಂಥದ್ದೇ ನಾಯಕ ಅನ್ನುವ ಪಾತ್ರ. ಅದೊಂದು ಪಟ್ಟವಂತೂ ಅಲ್ಲ.

ಹಾಸ್ಯ ಕಲಾವಿದರನ್ನು ಕಡಿಮೆ ಸಂಭಾವನೆಗೆ ದುಡಿಸಿಕೊಳ್ಳುವ ಬಗ್ಗೆ?

ನನ್ನ ಮೊದಲ ಸಂಭಾವನೆ ಅನ್ನುವುದಕ್ಕಿಂತಲೂ ಕಾಣಿಕೆ ರೂಪದಲ್ಲಿ ಸಿಕ್ಕಿದ್ದು ₹ 200. ಕೊಟ್ಟವರೆಲ್ಲಾ ಪ್ರೀತಿಯಿಂದ ಕೊಟ್ಟು ಆಶೀರ್ವದಿಸಿದ್ದಾರೆ. ಹಾಸ್ಯ ಕಲಾವಿದರಿಗೆ ಒಳ್ಳೆಯ ಸಂಭಾವನೆ ಸಿಗುವ ಹಾಗೆ ಟ್ರೆಂಡ್‌ ಸೆಟ್‌ ಮಾಡಿದ್ದೂ ನಾನೇ.

ಅಣ್ಣ ಜಗ್ಗೇಶ್‌ ಅವರ ಬೆಂಬಲದ ಬಗ್ಗೆ?

ದೊಡ್ಡಣ್ಣ ಅಂದರೆ ತಂದೆಯ ಜಾಗದಲ್ಲಿ ನಿಲ್ಲುತ್ತಾರೆ. ಇಬ್ಬರಲ್ಲೂ ಕೊಡು–ಕೊಳ್ಳುವಿಕೆ ಇದೆ. ಯಾವುದೋ ಸ್ಕ್ರಿಪ್ಟ್‌, ಹಾಡು ಬೇಕು ಅಂದರು ಕೊಟ್ಟಿದ್ದೇನೆ. ಅವರೂ ನನಗೆ ಸಾಕಷ್ಟು ಬೆಂಬಲ, ಮಾರ್ಗದರ್ಶನ ನೀಡಿದ್ದಾರೆ. ಸಾಕಷ್ಟು ವಿಚಾರ ವಿನಿಮಯ ಮಾಡುತ್ತೇವೆ.

ಹೊಸದಾಗಿ ಈ ಕ್ಷೇತ್ರಕ್ಕೆ ಬರುವವರಿಗೆ ನಿಮ್ಮ ಸಲಹೆ?

ಸಾಕಷ್ಟು ಪ್ರತಿಭೆಗಳು ನಮ್ಮ ಸುತ್ತಮುತ್ತ ಇದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾವು ಅಂಥ ಪ್ರವೃತ್ತಿ ಬೆಳೆಸಬೇಕು. ಒಬ್ಬ ಪ್ರತಿಭೆಯ ಸುತ್ತಮುತ್ತ ಅದೆಷ್ಟೋ ಜನರೂ ಕೆಲಸ ಮಾಡುತ್ತಾರೆ. ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಪ್ರತಿಭೆ ಹೊರಬರಬೇಕು ಅಷ್ಟೇ.

‘ಉಂಡೆನಾಮ’ ಶೀರ್ಷಿಕೆ ಬಗ್ಗೆ?

‘ಉಂಡೆನಾಮ’ದ ಟ್ರೈಲರ್‌ ಟ್ರೆಂಡಿಂಗ್‌ನಲ್ಲಿದೆ. ಅದೊಂದು ಖುಷಿಯ ವಿಚಾರ. ಈ ಮೊದಲು 2020 ಎಂದು ವರ್ಕಿಂಗ್ ಟೈಟಲ್‌ (ತಾತ್ಕಾಲಿಕವಾಗಿ) ಇಟ್ಟಿದ್ದೆವು. ‘ಉಂಡೆನಾಮ’ ಎಂದರೆ ಮೋಸ ಮಾಡುವುದು ಎಂಬ ಅರ್ಥವೂ ಆಡುಮಾತಿನಲ್ಲಿದೆ. ಈ ಪ್ರಪಂಚಕ್ಕೆ ಕೊರೊನಾ ಬಂದು ಎಲ್ಲರಿಗೂ ‘ಉಂಡೆನಾಮ’ ಹಾಕಿತ್ತಲ್ಲ; ಈ ಚಿತ್ರದಲ್ಲಿ ನಾಯಕನಿಗೆ ಕೊರೊನಾ ಹೇಗೆ ಉಂಡೆನಾಮ ಹಾಕಿತು ಮತ್ತು ಅದರಿಂದ ಅವನು ಹೇಗೆ ಬಂದ ಅನ್ನುವುದೇ ಕತೆ.

ಚಿತ್ರರಂಗದಲ್ಲಿನ ಮರೆಯದ ಭಾವನಾತ್ಮಕ ಅನುಭವ? ನೆನಪು?

ನಮ್ಮದೇನಿದ್ದರೂ ಫ್ರೈಡೇ ಎಮೋಷನ್ಸ್‌ (ಶುಕ್ರವಾರ ಭಾವತೀವ್ರತೆ) ಅಷ್ಟೇ. ಸಿನಿಮಾ ಹಿಟ್‌ ಅಥವಾ ಪ್ಲಾಪ್‌ ಎರಡೇ ಗೊತ್ತಿರುವುದು. ಒಟ್ಟಿನಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿದರೆ ಅದೇ ಖುಷಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.