ADVERTISEMENT

ಅವಹೇಳನಕಾರಿ ಹೇಳಿಕೆ:​ ನಟಿ ತ್ರಿಶಾ ಬಳಿ ಕ್ಷಮೆ ಕೇಳಿದ ಖಳನಟ ಮನ್ಸೂರ್ ಅಲಿ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2023, 10:25 IST
Last Updated 24 ನವೆಂಬರ್ 2023, 10:25 IST
<div class="paragraphs"><p>ಮನ್ಸೂರ್ ಅಲಿ ಖಾನ್,&nbsp;ತ್ರಿಶಾ </p></div>

ಮನ್ಸೂರ್ ಅಲಿ ಖಾನ್, ತ್ರಿಶಾ

   

ಬೆಂಗಳೂರು: ನಟಿ ತ್ರಿಶಾ ಕೃಷ್ಣನ್ ಬಗ್ಗೆ ತಮಿಳು ಖಳ ನಟ ಮನ್ಸೂರ್ ಅಲಿ ಖಾನ್ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಅವರು ತ್ರಿಶಾ ಬಳಿ ಕ್ಷಮೆಯಾಚಿಸಿದ್ದಾರೆ. 

ಇತ್ತೀಚೆಗೆ ಬಿಡುಗಡೆಯಾದ ದಳಪತಿ ವಿಜಯ್‌ ನಟನೆಯ ‘ಲಿಯೋ‘ ಸಿನಿಮಾದ ಬಗ್ಗೆ ನಟ ಮನ್ಸೂರ್ ಅಲಿ ಖಾನ್ ಮಾತನಾಡುತ್ತ ತ್ರಿಷಾ ಬಗ್ಗೆ ಕೀಳು ಅಭಿರುಚಿಯ ಮಾತುಗಳನ್ನು ಹೇಳಿದ್ದರು. ಇದನ್ನು ನಟಿ ತ್ರಿಶಾ ಸೇರಿದಂತೆ ಸಿನಿಮಾ ರಂಗದ ಗಣ್ಯರು ಖಂಡಿಸಿದ್ದರು.

ADVERTISEMENT

ಘಟನೆ ಕುರಿತಂತೆ ಮಹಿಳಾ ಆಯೋಗ ಮನ್ಸೂರ್ ಅಲಿ ಖಾನ್ ಅವರಿಗೆ ನೋಟಿಸ್‌ ನೀಡಿತ್ತು. ಇವರ ವಿರುದ್ಧ ಚೆನ್ನೈನಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ನಂತರ ಮನ್ಸೂರ್ ಅಲಿ ಖಾನ್ ವಿಚಾರಣೆಗೆ ಹಾಜರಾಗಿದ್ದರು. 

ಇದೀಗ ಮನ್ಸೂರ್‌ ಅಲಿ ಖಾನ್‌ ಅವರು ನಟಿ ತ್ರಿಶಾ ಅವರಲ್ಲಿ ಕ್ಷಮೆ ಕೇಳಿದ್ದಾರೆ. ಸಿನಿಮಾರಂಗದ ಟ್ರೇಡ್ ಅನಲಿಸ್ಟ್​ ರಮೇಶ್ ಬಾಲಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ತ್ರಿಷಾ ಅವರೇ ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾರೆ ಎಂದು ಬಾಲಾ ಬರೆದುಕೊಂಡಿದ್ದಾರೆ. 

ನಟ ಮನ್ಸೂರ್ ಅಲಿ ಖಾನ್ ಹೇಳಿದ್ದು ಏನು?

ಇತ್ತೀಚೆಗೆ ಟಿ.ವಿಯೊಂದಕ್ಕೆ ಸಂದರ್ಶನ ನೀಡಿದ ಮನ್ಸೂರ್ ಅಲಿ ಖಾನ್ ಅವರು ‘ಲಿಯೋ’ ಸಿನಿಮಾ ಬಗ್ಗೆ ಮಾತನಾಡುತ್ತಾ, ಚಿತ್ರದ ನಾಯಕಿ ತ್ರಿಶಾ ಎಂದು ತಿಳಿದಾಗ ಸಂತೋಷವಾಗಿತ್ತು. ನನ್ನ ಹಾಗೂ ತ್ರಿಶಾ ನಡುವೆ ರೇಪ್‌ ಅಥವಾ ಬೆಡ್​ರೂಂ ದೃಶ್ಯ ಇರುತ್ತದೆ ಎಂದು ಭಾವಿಸಿದ್ದೆ. ಆದರೆ ಅದು ಸುಳ್ಳಾಯಿತು. ‘ಲಿಯೋ’ ಸಿನಿಮಾದವರು ತ್ರಿಶಾರ ಮುಖವನ್ನು ಸಹ ನನಗೆ ತೋರಿಸಲಿಲ್ಲ’ ಎಂದು ಹೇಳಿದ್ದರು.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ವಿಡಿಯೊ ಗಮನಿಸಿದ್ದ ತ್ರಿಶಾ ಕೂಡ ಅಸಮಾಧಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು. ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಮನ್ಸೂರ್ ಅಲಿ ಖಾನ್​​ ಅವರ ಹೇಳಿಕೆಗಳನ್ನು ಗಮನಿಸಿದೆ, ಅವರು ನೀಡಿರುವ ಅಗೌರವದ ಹೇಳಿಕೆಗಳನ್ನು ಬಲವಾಗಿ ಖಂಡಿಸುತ್ತೇನೆ. ಅವರ ಹೇಳಿಕೆಗಳು ಅಶ್ಲೀಲವಾಗಿದ್ದು, ಅಸಂಬದ್ಧವಾಗಿವೆ. ಕೀಳು ಮಟ್ಟದ ನಡವಳಿಕೆ ಇರುವವರೊಂದಿಗೆ ಕೆಲಸ ಮಾಡುವ ಉದ್ದೇಶವಿಲ್ಲ. ಮುಂದಿನ ಯಾವುದೇ ಸಿನಿಮಾಗಳಲ್ಲಿ ಅವರೊಂದಿಗೆ ನಟಿಸುವುದಿಲ್ಲ ಎಂದು ತ್ರಿಶಾ ಹೇಳಿದ್ದರು. 

ಘಟನೆ ಬಳಿಕ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ಹಲವರು ಮನ್ಸೂರ್ ಅಲಿ ಖಾನ್ ಅವರ ವಿರುದ್ಧ ಕಿಡಿಕಾರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.