ADVERTISEMENT

ತ್ರಿಶಾ ಬಗ್ಗೆ ನಟ ಮನ್ಸೂರ್ ಅವಹೇಳನಕಾರಿ ಹೇಳಿಕೆ:​ ವ್ಯಾಪಕ ಖಂಡನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2023, 13:50 IST
Last Updated 19 ನವೆಂಬರ್ 2023, 13:50 IST
ನಟಿ ತ್ರಿಶಾ ಕೃಷ್ಣನ್
ನಟಿ ತ್ರಿಶಾ ಕೃಷ್ಣನ್   

ಬೆಂಗಳೂರು: ದಕ್ಷಿಣ ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ತಮಿಳು ಖಳ ನಟ ಮನ್ಸೂರ್ ಅಲಿ ಖಾನ್  ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಚಿತ್ರರಂಗದ ಹಲವರು ಕಿಡಿಕಾರಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ದಳಪತಿ ವಿಜಯ್‌ ನಟನೆಯ ‘ಲಿಯೋ‘ ಸಿನಿಮಾದ ಬಗ್ಗೆ ನಟ ಮನ್ಸೂರ್ ಅಲಿ ಖಾನ್ ಮಾತನಾಡುತ್ತ ತ್ರಿಷಾ ಬಗ್ಗೆ ಕೀಳು ಅಭಿರುಚಿಯ ಮಾತುಗಳನ್ನು ಹೇಳಿದ್ದಾರೆ. ಇದಕ್ಕೆ ಸಿನಿಮಾ ರಂಗದ ಗಣ್ಯರು ಅವರಿಗೆ ಛೀಮಾರಿ ಹಾಕಿದ್ದಾರೆ. 

ನಟ ಮನ್ಸೂರ್ ಅಲಿ ಖಾನ್ ಹೇಳಿದ್ದು ಏನು?

ADVERTISEMENT

ಇತ್ತೀಚೆಗೆ ಟಿ.ವಿಯೊಂದಕ್ಕೆ ಸಂದರ್ಶನ ನೀಡಿದ ಮನ್ಸೂರ್ ಅಲಿ ಖಾನ್ ಅವರು ‘ಲಿಯೋ’ ಸಿನಿಮಾ ಬಗ್ಗೆ ಮಾತನಾಡುತ್ತಾ, ಚಿತ್ರದ ನಾಯಕಿ ತ್ರಿಶಾ ಎಂದು ತಿಳಿದಾಗ ಸಂತೋಷವಾಗಿತ್ತು. ನನ್ನ ಹಾಗೂ ತ್ರಿಶಾ ನಡುವೆ ರೇಪ್‌ ಅಥವಾ ಬೆಡ್​ರೂಂ ದೃಶ್ಯ ಇರುತ್ತದೆ ಎಂದು ಭಾವಿಸಿದ್ದೆ. ಆದರೆ ಅದು ಸುಳ್ಳಾಯಿತು. ‘ಲಿಯೋ’ ಸಿನಿಮಾನವರು ತ್ರಿಶಾರ ಮುಖವನ್ನು ಸಹ ನನಗೆ ತೋರಿಸಲಿಲ್ಲ’ ಎಂದು ಹೇಳಿದ್ದರು.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ವಿಡಿಯೊ ಗಮನಿಸಿದ್ದ ನಟಿ ತ್ರಿಶಾ ಕೂಡ ಅಸಮಾಧಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು. ಬಳಿಕ ತಮಿಳು ಚಿತ್ರರಂಗದ ಗಣ್ಯರು ಸೇರಿದಂತೆ ಹಲವರು ಮನ್ಸೂರ್ ಅಲಿ ಖಾನ್ ಅವರ ವಿರುದ್ಧ ಕಿಡಿಕಾರಿದ್ದರು. 

ನಿರ್ದೇಶಕ ಲೋಕೇಶ್ ಕನಕರಾಜ್, ಗಾಯಕಿ ಚಿನ್ಮಯಿ ಶ್ರೀಪಾದ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಸೇರಿದಂತೆ ಹಲವರು ಮನ್ಸೂರ್ ಅಲಿ ಖಾನ್​​ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ತ್ರಿಶಾ ಪ್ರತಿಕ್ರಿಯೆ ಏನು?  

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬೇಸರ ಹಂಚಿಕೊಂಡಿರುವ ತ್ರಿಶಾ ಅವರು, ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಮನ್ಸೂರ್ ಅಲಿ ಖಾನ್​​ ಅವರ ಹೇಳಿಕೆಗಳನ್ನು ಗಮನಿಸಿದೆ, ಅವರು ನೀಡಿರುವ ಅಗೌರವದ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ. ಅವರ ಹೇಳಿಕೆಗಳು ಅಶ್ಲೀಲವಾಗಿದ್ದು, ಅಸಂಬದ್ಧವಾಗಿವೆ. ಅಂತಹ ನಡವಳಿಕೆಯುಳ್ಳವರೊಂದಿಗೆ ಕೆಲಸ ಮಾಡುವ ಉದ್ದೇಶವಿಲ್ಲ. ಮುಂದಿನ ಯಾವುದೇ ಸಿನಿಮಾಗಳಲ್ಲಿ ಅವರೊಂದಿಗೆ ನಟಿಸುವುದಿಲ್ಲ ಎಂದು ತ್ರಿಶಾ ಹೇಳಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ, ಹಿರಿಯ ನಟಿ ಖುಷ್ಬು ಸುಂದರ್ ಅವರು ಮನ್ಸೂರ್ ಅವರ ಹೇಳಿಕೆಯನ್ನು ಖಂಡಿಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

ಲಿಯೋ ಸಿನಿಮಾ ನಿರ್ದೇಶಕ ಲೋಕೇಶ್ ಕನಕರಾಜ್ ಸಹ ಮನ್ಸೂರ್​ ಹೇಳಿಕೆ ಖಂಡಿಸಿದ್ದಾರೆ. ಎಲ್ಲರನ್ನು ಗೌರವಿಸುವ ಮತ್ತು  ಉದ್ಯಮದಲ್ಲಿ ಯಾವುದೇ ರೀತಿಯ ಅಗೌರವವನ್ನು ಖಂಡಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.