ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ತಮಿಳು ಖಳ ನಟ ಮನ್ಸೂರ್ ಅಲಿ ಖಾನ್ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ ನಟನ ವಿರುದ್ಧ ತಮಿಳುನಾಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಮಹಿಳಾ ಆಯೋಗ ನೀಡಿದ ದೂರು ಆಧರಿಸಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನವೆಂಬರ್ 21ರಂದು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಟಿ ತ್ರಿಶಾ ಬಗ್ಗೆ ನಟ ಮನ್ಸೂರ್ ನೀಡಿರುವ ಹೇಳಿಕೆಗಳು ಹರಿದಾಡುತ್ತಿದೆ. ಈ ವಿಡಿಯೊವನ್ನು ಸಹ ಗಮನಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣ ಸಂಬಂಧ ಮಹಿಳಾ ಆಯೋಗ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು ಖಂಡನೆ ವ್ಯಕ್ತಪಡಿಸಿದ್ದು, ಸ್ವಯಂ ಪ್ರೇರಿತವಾಗಿ ಐಪಿಸಿ ಸೆಕ್ಷನ್ 509 ಬಿ (ವಿದ್ಯುನ್ಮಾನ ಮಾಧ್ಯಮದಲ್ಲಿ ಲೈಂಗಿಕ ಕಿರುಕುಳ) ಮತ್ತು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸುವಂತೆ ಡಿಜಿಪಿ ಅವರಿಗೆ ನಿರ್ದೇಶಿಸಿದೆ.
ಇತ್ತೀಚೆಗೆ ಟಿ.ವಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಮನ್ಸೂರ್ ಅಲಿ ಖಾನ್ ಅವರು ‘ಲಿಯೋ’ ಸಿನಿಮಾ ಬಗ್ಗೆ ಮಾತನಾಡುತ್ತಾ, ಚಿತ್ರದ ನಾಯಕಿ ತ್ರಿಶಾ ಎಂದು ತಿಳಿದಾಗ ಸಂತೋಷವಾಗಿತ್ತು. ನನ್ನ ಹಾಗೂ ತ್ರಿಶಾ ನಡುವೆ ರೇಪ್ ಅಥವಾ ಬೆಡ್ರೂಂ ದೃಶ್ಯ ಇರುತ್ತದೆ ಎಂದು ಭಾವಿಸಿದ್ದೆ. ಆದರೆ ಅದು ಸುಳ್ಳಾಯಿತು. ಲಿಯೋ ಸಿನಿಮಾದವರು ಚಿತ್ರೀಕರಣದುದ್ದಕ್ಕೂ ತ್ರಿಶಾ ಅವರ ಮುಖವನ್ನೇ ನನಗೆ ತೋರಿಸಲಿಲ್ಲ ಎಂದು ಹೇಳಿದ್ದರು.
ನಿರ್ದೇಶಕ ಲೋಕೇಶ್ ಕನಕರಾಜ್, ಗಾಯಕಿ ಚಿನ್ಮಯಿ ಶ್ರೀಪಾದ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಸೇರಿದಂತೆ ಹಲವರು ಮನ್ಸೂರ್ ಅಲಿ ಖಾನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.